ಬೆಂಗಳೂರು : ನಗರದ ವಿದ್ಯಾಸಾಗರ್ ಶಾಲೆ ತರಗತಿಯಲ್ಲಿ ಬೋರ್ಡ್ ಮೇಲೆ ಬರಹ ಬರೆದು ಮಕ್ಕಳನ್ನು ಅವಮಾನಿಸಿದ ಆರೋಪದ ಮೇಲೆ ಶಿಕ್ಷಕಿ ಶಶಿಕಲಾ ಅವರನ್ನು ವಜಾ ಮಾಡಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಿಕ್ಷಕಿ, ತಾವು ಹಿಜಾಬ್ ಕುರಿತು ಕೆಟ್ಟದಾಗಿ ಯಾವುದೇ ಮಾತನಾಡಿಲ್ಲ, ಅಲ್ಲದೆ ನನ್ನ ಮೇಲಿನ ಆರೋಪ ಸುಳ್ಳು ಎಂದಿದ್ದಾರೆ.
ವಜಾ ಆಗಿರುವ ಶಿಕ್ಷಕಿ ಶಶಿಕಲಾ ಸ್ಪಷ್ಟನೆ ನೀಡಿದ್ದು, ನಾನು ಯಾರಿಗೂ ಅವಮಾನ ಮಾಡಿಲ್ಲ. ಈ ವಿವಾದ ಹೇಗೆ ಬಂತು ಎಂದು ನನಗೆ ಶಾಕ್ ಆಗಿದೆ. ತರಗತಿಯಲ್ಲಿ ನಾನು ಯಾವುದೇ ಕೆಟ್ಟ ಮಾತು ಹೇಳಿಲ್ಲ. ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ಗಲಾಟೆ ಮಾಡಬೇಡಿ ಎಂದಿದ್ದೆ ಅಷ್ಟೇ ಎಂದಿದ್ದಾರೆ.
ನಡೆದಿದ್ದೇನು? : ನಗರದ ವಿದ್ಯಾಸಾಗರ್ ಶಾಲೆಯ ಶಿಕ್ಷಕಿ ತರಗತಿಯಲ್ಲಿ ಬೋರ್ಡ್ ಮೇಲೆ ಬರಹ ಬರೆದು ಮಕ್ಕಳನ್ನು ಅವಮಾನಿಸಿದ ಆರೋಪದ ಮೇಲೆ ಪೋಷಕರು, ಚಂದ್ರಾಲೇಔಟ್ ಠಾಣೆಗೆ ದೂರು ನೀಡಿದ್ದರು.
ಶಿಕ್ಷಕಿ ಅಮಾನತು : ಈ ಬಗ್ಗೆ ಡಿಡಿಪಿಐ, ಆಡಳಿತ ಮಂಡಳಿ, ಪೋಷಕರು, ಶಿಕ್ಷಕರ ಜೊತೆ ಸಭೆ ನಡೆಸಿದ್ದರು. ಬಳಿಕ ಆಡಳಿತ ಮಂಡಳಿ ಶಿಕ್ಷಕಿಯನ್ನು ವಜಾ ಮಾಡಿತ್ತು. ಈ ಕುರಿತು ಪ್ರಿನ್ಸಿಪಾಲ್ ದೃಢಪಡಿಸಿದ್ದರು. ಬೋರ್ಡ್ ಮೇಲೆ ಶಿಕ್ಷಕಿ ಕೆಎಸ್ಎಲ್ ಎಂದು ಬರೆದಿದ್ದಕ್ಕೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದರು.
ಇದನ್ನೂ ಓದಿ: ಬೋರ್ಡ್ ಮೇಲೆ ಅವಮಾನಕರ ಬರಹ ಆರೋಪ : ಬೆಂಗಳೂರಿನಲ್ಲಿ ಶಾಲಾ ಶಿಕ್ಷಕಿ ವಜಾ
ಶಿಕ್ಷಕಿಯನ್ನು ಕೆಲಸದಿಂದ ತೆಗೆದಿರುವುದಕ್ಕೆ ಕೆಲವು ಹಿಂದೂ ಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಶಾಲೆಯ ಮುಂಭಾಗದಲ್ಲಿ ಪ್ರತಿಭಟನೆ ಕೂಡ ನಡೆದಿತ್ತು.