ಬೆಂಗಳೂರು: ಕಳೆದ ಒಂದು ವರ್ಷದಿಂದಲೂ ಪೊಲೀಸರಿಗೆ ಸವಾಲಾಗಿ ಪರಿಣಾಮಿಸಿದ್ದ ಹಾಗೂ ಪತ್ತೆಯಾಗದ ಪ್ರಕರಣಗಳ ಸಾಲಿಗೆ ಆ ಕೊಲೆ ಕೇಸ್ ಸೇರ್ಪಡೆಯಾಗಬೇಕಿತ್ತು. ಆದರೆ, ಆ ಪ್ರಕರಣವನ್ನ ಸಿನಿಮೀಯ ಶೈಲಿಯಲ್ಲಿ ಭೇದಿಸಿರುವ ಚಾಮರಾಜಪೇಟೆ ಪೊಲೀಸರಿಗೆ ತನಿಖೆ ವೇಳೆ ಸಿಕ್ಕ ಒಂದು ಸುಳಿವು ಹಂತಕರನ್ನು ಕಂಬಿ ಹಿಂದೆ ಸರಿಯುವಂತೆ ಮಾಡಿದೆ.
ಚಾಮರಾಜಪೇಟೆ ಮಹಿಳೆ ನಾಪತ್ತೆ ಪ್ರಕರಣ: ಕಳೆದೊಂದು ವರ್ಷದಿಂದ ಹಿಂದೆ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಮಹಿಳೆ ನಾಪತ್ತೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಆರಂಭದಲ್ಲಿ ಮಹಿಳೆ ಪತ್ತೆ ಬಗ್ಗೆ ಯಾವುದೇ ಕುರುಹುಗಳು ಸಿಕ್ಕಿರಲಿಲ್ಲ. ಎಲ್ಲ ರೀತಿಯಿಂದಲೂ ತನಿಖೆ ನಡೆಸಿದರೂ ನಿರೀಕ್ಷಿತ ಫಲಿತಾಂಶ ದೊರೆತಿರಲಿಲ್ಲ.
ತಲೆಕೆಡಿಸಿಕೊಂಡಿದ್ದ ಪೊಲೀಸರು ನಾಪತ್ತೆಯಾಗದ ಪ್ರಕರಣ ಎಂದೇ ಭಾವಿಸಿದ್ದರು. ಇತ್ತೀಚೆಗೆ ನಗರ ಪೊಲೀಸರು ಆಯುಕ್ತರು ನೀಡಿದ ಸೂಚನೆ ಮೇರೆಗೆ ಚಾಮರಾಜಪೇಟೆ ಪೊಲೀಸರು ಈ ಪ್ರಕರಣವನ್ನು ಸವಾಲಾಗಿ ತೆಗೆದುಕೊಂಡು ಮರು ತನಿಖೆ ಮಾಡಿದರು. ಈ ವೇಳೆ, ಹಂತಕರ ಬಗ್ಗೆ ಸಿಕ್ಕ ಸುಳಿವಿನಿಂದ ಕಾರ್ಯಾಚರಣೆ ನಡೆಸಿದ ಪೊಲೀಸರು ಮಹಿಳೆ ಸೇರಿ ಇಬ್ಬರನ್ನು ಬಂಧಿಸಿದ್ದಾರೆ. ಟಿ.ಗೊಲ್ಲಹಳ್ಳಿ ಮೂಲದ ಲಕ್ಷ್ಮಿ ಹಾಗೂ ಆರ್.ಆರ್.ನಗರ ಪೊಲೀಸ್ ಠಾಣೆಯ ರೌಡಿಶೀಟರ್ ನಾರಾಯಣ್ ಬಂಧಿತ ಆರೋಪಿಗಳಾಗಿದ್ದಾರೆ. ಚಂದ್ರಕಲಾ (43) ಕೊಲೆಯಾಗಿದ್ದ ಮಹಿಳೆಯಾಗಿದ್ದಾರೆ.
ಮದುವೆಯಾಗುವ ಇಂಗಿತ ವ್ಯಕ್ತಪಡಿಸಿದ ಮಹಿಳೆ: ಒಬ್ಬಂಟಿಯಾಗಿದ್ದ ಚಂದ್ರಕಲಾ ಚಾಮರಾಜಪೇಟೆಯ ವಿಠಲನಗರದ ಬಾಡಿಗೆ ಮನೆಯೊಂದರಲ್ಲಿ ಐದಾರು ವರ್ಷಗಳಿಂದ ವಾಸವಾಗಿದ್ದರು. ಅನಾಥೆಯಾಗಿದ್ದ ಚಂದ್ರಕಲಾ ಅವಿವಾಹಿತೆಯಾಗಿದ್ದರು. ಜೀವನಕ್ಕಾಗಿ ಎನ್.ಟಿ.ಪೇಟೆಯಲ್ಲಿ ಗೋಣಿಚೀಲ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ತಾನಾಯಿತು ತನ್ನ ಕೆಲಸವಾಯಿತು ಅಂದುಕೊಂಡಿದ್ದ ಚಂದ್ರಕಲಾಗೆ ಸಹದ್ಯೋಗಿ ಲಕ್ಷ್ಮಿ ಪರಿಚಯವಾಗಿತ್ತು. ಇದು ಕ್ರಮೇಣ ಸ್ನೇಹಕ್ಕೆ ತಿರುಗಿತ್ತು. ಇದೆ ಸಲುಗೆ ಮೇರೆಗೆ ಆಗಾಗ ಚಂದ್ರಕಲಾ ಮನೆಗೆ ಬಂದು ಹೋಗುತ್ತಿದ್ದರು. ಈ ವೇಳೆ ಮದುವೆಯಾಗುವ ಇಂಗಿತವನ್ನ ಸ್ನೇಹಿತೆ ಬಳಿ ಚಂದ್ರಕಲಾ ಹೇಳಿಕೊಂಡಿದ್ದಳು.
ಕೆಲಸಕ್ಕೆ ಹೋದ ಅವಿವಾಹಿತೆ ನಾಪತ್ತೆ: ಕಳೆದ ಜುಲೈ 27 ರಂದು ಕೆಲಸಕ್ಕೆ ಹೋಗಿ ಬರುವುದಾಗಿ ಹೇಳಿದ್ದ ಮಹಿಳೆ ಇದ್ದಕ್ಕಿದ್ದಂತೆ ಕಾಣೆಯಾಗಿದ್ದಳು. ಹಲವು ದಿನಗಳಾದರೂ ಚಂದ್ರಕಲಾ ಕಾಣಿಸದ ಪರಿಣಾಮ ದೂರದ ಸಂಬಂಧಿಕರು ಪೊಲೀಸರಿಗೆ ಕಳೆದ ವರ್ಷ ಆಗಸ್ಟ್ 12 ರಂದು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರಿಗೆ ಚಂದ್ರಕಲಾ ಮೊಬೈಲ್ ಕೊನೆ ಬಾರಿ ಬ್ಯಾಟರಾಯನಪುರದಲ್ಲಿ ಸ್ವಿಚ್ಡ್ ಆಫ್ ಆಗಿರುವುದು ಕಂಡುಬಂದಿತ್ತು. ಇದು ಹೊರತುಪಡಿಸಿದರೆ ಬೇರೆ ಯಾವ ಮಾಹಿತಿ ಇರಲಿಲ್ಲ. ಸ್ನೇಹಿತರು, ಸಂಬಂಧಿಕರು, ಕೆಲಸಮಾಡುವ ಸ್ಥಳ ಹೀಗೆ ನಿರಂತರವಾಗಿ ವಿಚಾರಣೆ ನಡೆಸಿದರೂ ಮಹಿಳೆಯ ಪತ್ತೆ ಬಗ್ಗೆ ಸಣ್ಣ ಸುಳಿವು ಸಿಕ್ಕಿರಲಿಲ್ಲ.
ಹಂತಕರ ಪತ್ತೆಗೆ ಪೊಲೀಸರಿಗೆ ಸಿಕ್ಕ ಸುಳಿವು ಏನು ಗೊತ್ತಾ?: ಇತ್ತೀಚೆಗೆ ನಗರ ಪೊಲೀಸ್ ಆಯುಕ್ತರು ಅಪರಾಧ ಪರಾಮರ್ಶೆ ಸಭೆ ನಡೆಸಿದ್ದರು. ಈ ವೇಳೆ ನಾಪತ್ತೆಯಾಗದ ಪ್ರಕರಣಗಳ ಪತ್ತೆಯನ್ನು ಮರು ತನಿಖೆ ನಡೆಸುವಂತೆ ಡಿಸಿಪಿ ಲಕ್ಷ್ಮಣ್ ನಿಂಬರಗಿ ಸೂಚನೆ ನೀಡಿದ್ದರು. ಹಿರಿಯ ಅಧಿಕಾರಿಗಳ ನೀಡಿದ ಸೂಚನೆ ಮೇರೆಗೆ ಮತ್ತೆ ತನಿಖೆ ನಡೆಸಿದ ಚಾಮರಾಜಪೇಟೆ ಪೊಲೀಸರು ಚಂದ್ರಕಲಾ ವಾಸವಾಗಿದ್ದ ಮನೆ ಮಾಲೀಕನನ್ನು ಪ್ರಶ್ನಿಸಿದರು.
ಆಗ ಚಂದ್ರಕಲಾ ನಾಪತ್ತೆಯಾಗುವ ಮುನ್ನ ಮತ್ತೋರ್ವ ಮಹಿಳೆ ಮನೆಗೆ ಬಂದು ಹೋಗುತ್ತಿರುವ ಬಗ್ಗೆ ಮಾಹಿತಿ ನೀಡಿದ್ದರು. ಈ ಸುಳಿವು ಆಧರಿಸಿ ತನಿಖೆ ನಡೆಸಿದ ಪೊಲೀಸರ ಲಕ್ಷ್ಮಿಯನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದರು. ಪೊಲೀಸರು ಲಕ್ಷ್ಮಿಯನ್ನು ವಿಚಾರಣೆ ನಡೆಸಿದಾಗ ಕಾಣೆಯಾಗಿದ್ದ ಚಂದ್ರಕಲಾ ಕೊಲೆಯಾಗಿರುವ ಸಂಗತಿ ಗೊತ್ತಾಗಿದೆ.
ಕೊಲೆಯಾದ ಮಹಿಳೆ ಮೊಬೈಲ್ ಸಿಮ್ ಬಳಸಿದ ಹಂತಕಿ: ಮನೆ ಮಾಲೀಕ ನೀಡಿದ ಮಾಹಿತಿ ಆಧರಿಸಿ ಪೊಲೀಸರು ತನಿಖೆ ನಡೆಸಿದ್ದರು. ಪೊಲೀಸರಿಗೆ ಚಂದ್ರಕಲಾಳ ಮೊಬೈಲ್ ಒಳ ಬರುವ ಕರೆ ವಿವರ (ಸಿಡಿಆರ್) ಪರಿಶೀಲಿಸಿದಾಗ ಕೊನೆಯ ಕರೆ ಲಕ್ಷ್ಮಿ ಅವರಿಂದ ಬಂದಿರುವುದು ಗೊತ್ತಾಗಿತ್ತು. ಅಲ್ಲದೇ ಲಕ್ಷ್ಮಿ ಮೊಬೈಲ್ ಪರಿಶೀಲಿಸಿದಾಗ ಚಂದ್ರಕಲಾ ಮೊಬೈಲ್ ನಂಬರ್ ಇವರು ಬಳಸಿರುವುದು ತಾಂತ್ರಿಕ ತನಿಖೆಯಲ್ಲಿ ದೃಢವಾಗಿತ್ತು. ತೀವ್ರ ವಿಚಾರಣೆಗೊಳಪಡಿಸಿದಾಗ ಸಹಚರ ನಾರಾಯಣ ಜೊತೆ ಸೇರಿ ಕೊಲೆ ಮಾಡಿರುವ ಸತ್ಯ ಬಾಯ್ಬಿಟ್ಟಿದ್ದಾಳೆ. ಈ ಮಹಿಳೆ ನೀಡಿದ ಮಾಹಿತಿ ಆಧರಿಸಿ ನಾರಾಯಣನನ್ನು ಬಂಧಿಸಿದಾಗ ಹಲವು ಸಂಗತಿಗಳು ಬೆಳಕಿಗೆ ಬಂದಿವೆ.
ಮಹಿಳೆ ಕೊಲೆ ನಡೆದಿದ್ದು ಎಲ್ಲಿ, ಹೇಗೆ ?: ರೌಡಿಶೀಟರ್ ನಾರಾಯಣ್ ಅಪರಾಧ ಪ್ರಕರಣವೊಂದರಲ್ಲಿ ಜೈಲಿನಲ್ಲಿದ್ದಾಗ ಇಬ್ಬರ ಪರಿಚಯವಾಗಿತ್ತು. ಜೈಲಿನಿಂದ ಬಿಡುಗಡೆಯಾದಾಗ ಇಬ್ಬರ ಸ್ನೇಹ ಮುಂದುವರೆದಿತ್ತು. ಇದೇ ಸಲುಗೆ ಮೇರೆಗೆ ಅವರ ಮನೆಗೆ ನಾರಾಯಣ್ ಬಂದು ಹೋಗುತ್ತಿದ್ದ. ಈ ವೇಳೆ ಲಕ್ಷ್ಮಿಯೊಂದಿಗೆ ಸ್ನೇಹವಾಗಿದ್ದು, ಸ್ವಲ್ಪ ದಿನಗಳ ಬಳಿ ಇಬ್ಬರ ಸಲುಗೆ ಹೆಚ್ಚಾಗಿತ್ತು.
ಇಬ್ಬರು ಜೊತೆಗೂಡಿ ಸಣ್ಣಪುಟ್ಟ ಹಣಕಾಸಿನ ವ್ಯವಹಾರಗಳಲ್ಲಿ ಭಾಗಿಯಾಗುತ್ತಿದ್ದರು. ಇದೇ ವೇಳೆ 50 ಸಾವಿರ ಹಣಕ್ಕೆ ನಾರಾಯಣ್ ಬೇಡಿಕೆಯಿಟ್ಟಿದ್ದ. ತನ್ನ ಸ್ನೇಹಿತೆ ಚಂದ್ರಕಲಾ ಬಳಿ ಚಿನ್ನಾಭರಣ ಇರುವ ಬಗ್ಗೆ ಅರಿತಿದ್ದ ಲಕ್ಷ್ಮಿ, ನಾರಾಯಣ್ ಜೊತೆ ಸಂಚು ರೂಪಿಸಿದ್ದಾಳೆ. ನನ್ನ ಗಂಡನ ಸ್ನೇಹಿತ ನಾರಾಯಣ್ ಪರಿಚಯಸ್ಥರಾಗಿದ್ದಾರೆ. ಅವರನ್ನು ಮದುವೆಯಾಗುವಂತೆ ಚಂದ್ರಕಳಾಗೆ ಲಕ್ಷ್ಮಿ ಸೂಚಿಸಿದ್ದಾಳೆ. ಇದಕ್ಕೆ ಚಂದ್ರಕಲಾ ಸಹ ಒಪ್ಪಿಕೊಂಡಿದ್ದಳು. ಇಬ್ಬರು ಮೊಬೈಲ್ ನಂಬರ್ ಸಹ ವಿನಿಮಯ ಮಾಡಿಕೊಂಡು ಮಾತನಾಡುತ್ತಿದ್ದರು. ಇಬ್ಬರೂ ಭೇಟಿಯಾಗುವ ಬಯಕೆಯನ್ನು ವ್ಯಕ್ತಪಡಿಸಿದ್ದರು.
ವರ್ಷದ ಬಳಿಕ ಪ್ರಕರಣ ಭೇದಿಸಿದ ಪೊಲೀಸರು : ಜುಲೈ 27 ರಂದು ಚಂದ್ರಕಲಾ ಲಗೇಜ್ ಸಮೇತ ಮನೆ ಬಿಟ್ಟಿದ್ದಾರೆ. ಮನೆ ಬಿಡುವ ಮುನ್ನ ಸಂಬಂಧಿಕರಿಗೆ ಪೋನ್ ಮಾಡಿ ಮದ್ದೂರಿನಲ್ಲಿ ಸ್ನೇಹಿತೆಯ ಮನೆಗೆ ಹೋಗುತ್ತಿರುವುದಾಗಿ ಹೇಳಿದ್ದಾಳೆ. ಆರೋಪಿಗಳ ಅಣತಿಯಂತೆ ಪರಿಚಯಸ್ಥ ಆಟೋ ಹತ್ತಿದ್ದಾಳೆ. ಪೂರ್ವ ಸಂಚಿನಂತೆ ಜ್ಞಾನಭಾರತಿ ಬಳಿ ಲಕ್ಷ್ಮಿ ಹಾಗೂ ನಾರಾಯಣ್ ಜೊತೆಗೂಡಿ ಮೂವರು ಹಗದೂರು ಪೊಲೀಸ್ ಠಾಣಾ ವ್ಯಾಪ್ತಿಯ ಮುತ್ತತಿ ಬಳಿ ಕರೆದೊಯ್ದಿದ್ದಾರೆ.
ಮಹಿಳೆ ತಲೆ ಮೇಲೆ ಕಲ್ಲೆತ್ತಾಕಿ ಬರ್ಬರ ಕೊಲೆ: ಮುತ್ತತಿ ಬಳಿಯ ನಿರ್ಜನ ಪ್ರದೇಶದಲ್ಲಿ ಸಮಯ ನೋಡಿಕೊಂಡು ವೇಲಿನಿಂದ ಚಂದ್ರಕಲಾ ಕತ್ತು ಬಿಗಿದಿದ್ದಾರೆ. ಬಳಿಕ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಸಾಯಿಸಿದ್ದಾರೆ. ಕೊಲೆ ಬಳಿಕ ಚಂದ್ರಕಲಾ ಬ್ಯಾಗ್ನಲ್ಲಿ ಚಿನ್ನಾಭರಣ ಇದೆ ಎಂದು ಭಾವಿಸಿದ್ದ ಆರೋಪಿಗಳು ನಿರಾಸೆಯಾಗಿತ್ತು. ಬ್ಯಾಗಿನಲ್ಲಿ ಯಾವುದೇ ಚಿನ್ನಾಭರಣವಿರಲಿಲ್ಲ. ಇದರಿಂದ ಕಕ್ಕಾಬಿಕ್ಕಿಯಾದ ಹಂತಕರು ನಗರಕ್ಕೆ ವಾಪಸ್ ಆಗಿದ್ದರು.
ಕೆಂಗೇರಿಯ ಕಂಬಿಪುರ ಬಳಿ ಬ್ಯಾಗ್ ಬಿಸಾಕಿದ್ದಾರೆ. ಸಿಮ್ ತೆಗೆದಿರಿಸಿಕೊಂಡು ಮೊಬೈಲ್ ಸಹ ಎಸೆದಿದ್ದಾರೆ. ಈ ಸಂಬಂಧ ಹಗದೂರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಕೊಲೆ ಮಾಡಿ ನಾಲ್ಕು ದಿನ ಅಂತರದಲ್ಲಿ ಚಂದ್ರಕಲಾ ಮೊಬೈಲ್ ಸಿಮ್ ಅನ್ನು ಲಕ್ಷ್ಮಿ ತನ್ನ ಮೊಬೈಲಿಗೆ ಹಾಕಿಕೊಂಡಿದ್ದರುವುದು ತನಿಖೆಯಲ್ಲಿ ಗೊತ್ತಾಗಿದೆ. ಈ ಪ್ರಕರಣದ ಬಗ್ಗೆ ಪೊಲೀಸರು ಆರೋಪಿಗಳನ್ನು ವಿಚಾರಣೆಗೊಳಪಡಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.
ಓದಿ: ಕಿರುಕುಳ ನೀಡುತ್ತಿದ್ದ ವ್ಯಕ್ತಿಯನ್ನು ಬಡಿದು ಕೊಂದ ಸಹೋದರಿಯರು ಅರೆಸ್ಟ್