ಬೆಂಗಳೂರು : ಪಲ್ಸರ್ ಬೈಕ್ ಹತ್ತಿ ಹೊರಟು ಮಾರಕಾಸ್ತ್ರ ತೋರಿಸಿ ಕಂಡಕಂಡಲ್ಲಿ ಜನರ ಸುಲಿಗೆ ಮಾಡುತ್ತಿದ್ದ ಇಬ್ಬರು ನಟೋರಿಯಸ್ ಸುಲಿಗೆಕೋರರನ್ನು ರಾಜಗೋಪಾಲ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಅಬ್ರಹಾರ್ ಹಾಗೂ ಅಫ್ತಾಬ್ ಆರೋಪಿಗಳಾಗಿದ್ದು ಇವರಿಬ್ಬರು 50ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದವರು.
ಇನ್ನೂ ಕೆ.ಜಿ.ಹಳ್ಳಿಯ ಜನರ ನಿದ್ದೆಗೆಡಿಸಿದ್ದ ಅಬ್ರಹಾರ್ ಹಾಗೂ ಮಿರಾಜ್ ಅಬ್ರಹಾರ್ ತಂಡ ಈ ಹಿಂದೆ ಶಿವಾಜಿನಗರದಲ್ಲಿ ಉದ್ಯಮಿಯೊಬ್ಬರನ್ನು ಹಾಡಹಗಲೇ ಸುಲಿಗೆ ಮಾಡಿ ಸುದ್ದಿಯಾಗಿತ್ತು. ಇವರ ಬಂಧನಕ್ಕೆ ತೆರಳಿದ್ದಾಗ ತುಮಕೂರು ಹಾಗೂ ಕೋಲಾರದಲ್ಲಿ ಪೊಲೀಸರ ಮೇಲೆಯೇ ಗುಂಡು ಹಾರಿಸಿ ಎಸ್ಕೇಪ್ ಆಗಿದ್ದರು. ಇನ್ನು ಸಲೀಂ ಎಂಬಾತನ ಹತ್ಯೆ ಪ್ರಕರಣದಲ್ಲಿ ಕೆ.ಜಿ ಹಳ್ಳಿ ಪೊಲೀಸರು ಈ ಇಬ್ಬರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದರು. ಆದರೆ ಪುಟ್ಟೇನಹಳ್ಳಿ ಬಳಿ ಆರೋಪಿಗಳನ್ನು ಹಿಡಿಯಲು ಹೋದಾಗ ಪೊಲೀಸರ ಮೇಲೆಯೇ ಈ ದುಷ್ಕರ್ಮಿಗಳು ದಾಳಿ ಮಾಡಿದ್ದರು. ಹೀಗಾಗಿ ಮಿರಾಜ್ ಅಬ್ರಹಾರ್ ಜೈಲಿನಲ್ಲಿದ್ದರೆ ಅಬ್ರಹಾರ್ ಹಾಗೂ ಅಫ್ತಾಬ್ ಹೊರಗಡೆ ದರೋಡೆಗಳಲ್ಲಿ ಸಕ್ರಿಯವಾಗಿದ್ದರು.
ಈ ಅಬ್ರಹಾರ್ ಹಾಗೂ ಅಫ್ತಾಬ್ ರಾಜಗೋಪಾಲನಗರ, ಕಾಮಾಕ್ಷಿಪಾಳ್ಯ, ಕೆ.ಜಿ.ಹಳ್ಳಿ ಭಾಗದಲ್ಲಿ ಸುಲಿಗೆ ಮಾಡುತ್ತಿದ್ದು ಆರೋಪಿಗಳು ಇತ್ತೀಚಿಗೆ ಬಿಟಿಎಂ ಲೇಔಟ್ ನಲ್ಲಿ ಹಾಡಹಗಲೇ ರಸ್ತೆಯಲ್ಲೇ ಮಾರಕಾಸ್ತ್ರ ಹಿಡಿದು ಸುಲಿಗೆ ಮಾಡುವ ದೃಶ್ಯಗಳು ವೈರಲ್ ಆಗಿದ್ದವು. ಸದ್ಯ ಇಬ್ಬರನ್ನೂ ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿಸಿಪಿ ಪ್ರತಿಕ್ರಿಯೆ: 'ಆರೋಪಿಗಳ ವಿರುದ್ಧ ಬೆಂಗಳೂರಿನಾದ್ಯಂತ 75 ಪ್ರಕರಣಗಳಿದ್ದವು. ಇತ್ತೀಚೆಗೆ ರಾಜಗೋಪಾಲನಗರ ವ್ಯಾಪ್ತಿಯಲ್ಲಿ ಮಗನನ್ನ ಕರೆತರುತ್ತಿದ್ದ ವ್ಯಕ್ತಿಯೊಬ್ಬರನ್ನು ಅಡ್ಡಗಟ್ಟಿದ್ದ ಆರೋಪಿಗಳು ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದರು. ಆರೋಪಿಗಳ ಪತ್ತೆಗಾಗಿ ರಾಜಗೋಪಾಲನಗರ ಠಾಣಾ ಇನ್ಸ್ಪೆಕ್ಟರ್ ಬಿ.ಆರ್. ಜಗದೀಶ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಕೊನೆಗೂ ಒಂದು ತಿಂಗಳ ಬಳಿಕ ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದೆ. ಒಂದು ಬೈಕ್, ಎರಡು ಮಾರಕಾಸ್ತ್ರ ವಶಕ್ಕೆ ಪಡೆಯಲಾಗಿದೆ' ಎಂದು ಉತ್ತರ ವಿಭಾಗದ ಡಿಸಿಪಿ ವಿನಾಯಕ್ ಪಾಟೀಲ್ ತಿಳಿಸಿದ್ದಾರೆ.
ಬೆಂಗಳೂರು ಸಂಚಾರಿ ಪೊಲೀಸರಿಂದ ರಸ್ತೆ ಸುರಕ್ಷತಾ ಸಪ್ತಾಹ: ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಬೆಂಗಳೂರಿನಲ್ಲಿ ಸಾರ್ವಜನಿಕರಿಗೆ ಹಾಗೂ ಮಕ್ಕಳಿಗೆ ರಸ್ತೆ ಸಂಚಾರದ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಬ್ಬನ್ ಪಾರ್ಕ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಗರದ ವಿವಿಧ ಶಾಲೆಗಳ ಸಾವಿರಾರು ವಿದ್ಯಾರ್ಥಿಗಳು, ಸಾರ್ವಜನಿಕಕರು ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ , ಸಂಚಾರ ವಿಭಾಗದ ವಿಶೇಷ ಆಯುಕ್ತ ಎಂ.ಎ.ಸಲೀಂ, ಸಂಚಾರ ವಿಭಾಗದ ಜಂಟಿ ಆಯುಕ್ತ ಎಂ.ಎನ್ ಅನುಚೇತ್ ಭಾಗಿಯಾಗಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, 'ದ್ವಿಚಕ್ರ ವಾಹನದಲ್ಲಿ ಸಂಚರಿಸುವಾಗ ಹೆಲ್ಮೆಟ್ ಧರಿಸುವುದು ನಮ್ಮ ಸುರಕ್ಷತೆಗಾಗಿ, ಆಗಲೇ ನಾವೆಲ್ಲ ಸುರಕ್ಷಿತ. ಇತ್ತೀಚಿನ ದಿನಗಳಲ್ಲಿ ಮಕ್ಕಳನ್ನು ಶಾಲೆಗೆ ಬಿಡುವಾಗ ಅಪಘಾತವಾಗುತ್ತಿದೆ. ಇಂಥಹ ಪ್ರಕರಣ ತಿಂಗಳಿಗೆ ಒಂದೆರಡು ನೋಡುತ್ತಿರುತ್ತೇವೆ. ಮಕ್ಕಳು ತಮ್ಮ ಪೋಷಕರಲ್ಲಿಯೂ ಜಾಗೃತಿ ಮೂಡಿಸಬೇಕು. ಎಲ್ಲರೂ ನಿಯಮ ಪಾಲನೆ ಮಾಡಿದರೆ ಅಪಘಾತ ಕಡಿಮೆ ಮಾಡಬಹುದು' ಎಂದರು. ಇದೇ ವೇಳೆ ಬೆಂಗಳೂರಲ್ಲಿ ಸಂಚಾರ ನಿರ್ವಹಣೆಯನ್ನು ಉತ್ತಮವಾಗಿ ನಿಭಾಯಿಸುತ್ತಿರುವ ಎಲ್ಲಾ ಸಿಬ್ಬಂದಿಗೆ ಆಯುಕ್ತರು ಅಭಿನಂದನೆ ಸಲ್ಲಿಸಿದರು. ಬಳಿಕ ಸಂಚಾರ ಪೊಲೀಸ್ ಸಿಬ್ಬಂದಿಯ ಬೈಕ್ ರ್‍ಯಾಲಿಗೆ ಚಾಲನೆ ನೀಡಲಾಯಿತು.
ಇದನ್ನೂ ಓದಿ; ಬೆಂಗಳೂರು: ಪೊಲೀಸರ ಸೋಗಿನಲ್ಲಿ ಬಂದು ಶೂ ವ್ಯಾಪಾರಿಯಿಂದ ₹10 ಲಕ್ಷ ದರೋಡೆ