ಬೆಂಗಳೂರು: ಮನೆಗಳ್ಳತನ ಸೇರಿದಂತೆ ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ 16 ಮಂದಿ ಆರೋಪಿಗಳನ್ನು ನಗರ ಪಶ್ಚಿಮ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 64 ಲಕ್ಷ ರೂ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ.
ಮಾಗಡಿ ರೋಡ್, ಗೋವಿಂದರಾಜನಗರ, ಕಾಮಾಕ್ಷಿಪಾಳ್ಯ, ವಿಜಯನಗರ ಠಾಣೆ ವ್ಯಾಪ್ತಿಗಳಲ್ಲಿ ಆರೋಪಿಗಳು ಮನೆಕಳ್ಳತನ, ಚಿನ್ನಾಭರಣ, ಬೈಕ್ ಕಳ್ಳತನ ಕೃತ್ಯಗಳಲ್ಲಿ ಭಾಗಿಯಾಗಿದ್ದರು. ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಸ್ತೆಯಲ್ಲಿ ಫೋನ್ನಲ್ಲಿ ಮಾತನಾಡಿಕೊಂಡು ಹೋಗುತ್ತಿದ್ದ ಸಾರ್ವಜನಿಕರ ಮೊಬೈಲ್ ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಇವರಿಂದ 30 ಲಕ್ಷ ರೂ ಮೌಲ್ಯದ 204 ಮೊಬೈಲ್, ಎರಡು ದ್ಚಿಚಕ್ರ ವಾಹನ ವಶಕ್ಕೆ ಪಡೆದುಕೊಳ್ಳಲಾಗಿದೆ.
ಗೋವಿಂದರಾಜನಗರ ಠಾಣಾ ವ್ಯಾಪ್ತಿಯಲ್ಲಿ ಬೀಗ ಹಾಕಿದ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ 5 ಲಕ್ಷ ರೂ ಮೌಲ್ಯದ 100 ಗ್ರಾ ಚಿನ್ನಾಭರಣ ವಶಕ್ಕೆ ಪಡೆದುಕೊಳ್ಳಲಾಗಿದೆ.
ಇದನ್ನೂ ಓದಿ: ಸಿಬ್ಬಂದಿ ವೇಷದಲ್ಲಿ ಕೊಡಗು ಜಿಲ್ಲಾಸ್ಪತ್ರೆಗೆ ನುಗ್ಗಿದ ಖದೀಮ.. ಬ್ಯಾಗ್, ಬೈಕ್ ಎಗರಿಸಿ ಪರಾರಿ
ಮತ್ತೊಂದು ಪ್ರಕರಣದಲ್ಲಿ, ಲಾರಿ ಮತ್ತು ಬಸ್ ನಿಲ್ಲಿಸಿ ವಿಶ್ರಾಂತಿ ಪಡೆಯುತ್ತಿದ್ದ ಚಾಲಕರ ಬಳಿ ಸುಲಿಗೆ ಮಾಡಿದ್ದ ನಾಲ್ವರನ್ನು ಬಂಧಿಸಿ, 2.35 ಲಕ್ಷ ಮೌಲ್ಯದ 3 ಮೊಬೈಲ್, 5 ದ್ವಿಚಕ್ರ ವಾಹನ ವಶಕ್ಕೆ ಪಡೆದುಕೊಂಡಿರುವುದಾಗಿ ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.