ಬೆಂಗಳೂರು: ಹಗಲಿನಲ್ಲಿ ಬೀಗ ಹಾಕಿದ್ದ ಮನೆಗಳನ್ನು ಟಾರ್ಗೆಟ್ ಮಾಡಿ ರಾತ್ರಿ ವೇಳೆ ಸೈಲೆಂಟಾಗಿ ಬೀಗ ಮುರಿದು ಇಡೀ ಮನೆಯನ್ನ ಗುಡಿಸಿ ಗುಂಡಾಂತರ ಮಾಡ್ತಿದ್ದ ಗ್ಯಾಂಗನ್ನ ವೈಯಾಲಿಕಾವಲ್ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಆರೋಪಿಗಳ ಹೆಸರು ಮಂಜುನಾಥ್ ಅಲಿಯಾಸ್ ಕೋಳಿ ಫಾಯಾಸ್, ಮತ್ತೊರ್ವನ ಹೆಸ್ರು ಶ್ರೀನಿವಾಸ್ ಅಲಿಯಾಸ್ ಸೈಲೆಂಟ್ ಸೀನ. ಸದ್ಯ ಇವರನ್ನ ಬಂಧಿಸಿರುವ ಪೊಲೀಸ್ರು ಪರಪ್ಪನ ಅಗ್ರಹಾರಕ್ಕೆ ಮುದ್ದೆ ಮುರಿಯಲು ಕಳುಹಿಸಿದ್ದಾರೆ.
ಇದ್ರಲ್ಲಿ ಮಂಜುನಾಥ್ ಮೊದಲಿನಿಂದನು ಮನೆಗಳ್ಳತನ ಹಾಗೂ ದ್ವಿಚಕ್ರ ವಾಹನಗಳ ಕಳ್ಳತನಕ್ಕಿಳಿದಿದ್ದ. ಈತನಿಗೆ ಶ್ರೀನಿವಾಸ್ ಪರಿಚಯವಾಗಿ ಇಬ್ಬರು ಸೇರಿ ಒಟ್ಟಿಗೆ ಕಳ್ಳತನ ಮಾಡ್ತಿದ್ರು. ಬೆಂಗಳೂರಿನ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಬೀಗ ಹಾಕಿದ್ದ ಮನೆಗಳೇ ಕಳ್ಳತನವಾಗುತ್ತಿದ್ದವು. ಇದ್ರಿಂದ ಎಚ್ಚೆತ್ತುಕೊಂಡ ಪೊಲೀಸರು ಆರೋಪಿಗಳ ಬೆನ್ನು ಬಿದ್ದಿದ್ರು. ತನಿಖೆ ನಡೆಸಿ ಇದೀಗ ಈ ಇಬ್ಬರು ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳನ್ನ ತೀವ್ರವಾಗಿ ವಿಚಾರಣೆಗೊಳಪಡಿಸಿದಾಗ ಮತ್ತಷ್ಟು ಪ್ರಕರಣಗಳು ಬೆಳಕಿಗೆ ಬಂದಿವೆ. ಬೆಂಗಳೂರಿನ ನಗರ ಠಾಣೆಗಳಲ್ಲಿ ಮಾತ್ರ ಅಲ್ಲದೆ ಗ್ರಾಮಾಂತರ ಜಿಲ್ಲೆಯ ತಾವರೆಕೆರೆ, ಮಾದನಾಯಕನಹಳ್ಳಿ, ಹಾಗು ಬ್ಯಾಡ್ರಳ್ಳಿ ಠಾಣಾ ವ್ಯಾಪ್ತಿಯಲ್ಲೂ ಇಬ್ಬರ ಕೈಚಳಕವಿದೆ ಅನ್ನೋದು ತಿಳಿದುಬಂದಿದೆ. ಸದ್ಯ ಬಂಧಿತರಿಂದ 9 ಲಕ್ಷ ನಗದು , 1,319 ಗ್ರಾಂ ಚಿನ್ನಾಭರಣ, ಎರಡು ದ್ವಿಚಕ್ರ ವಾಹನ, ಎರಡು ಕೆಜಿ ಬೆಳ್ಳಿ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.