ಬೆಂಗಳೂರು: ಆತ ತೆಲಂಗಾಣ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದ್ದ ಖತರ್ನಾಕ್ ಕಳ್ಳ, ದೇಶಾದ್ಯಂತ ನೂರಕ್ಕೂ ಹೆಚ್ಚು ಐಷಾರಾಮಿ ಕಾರುಗಳನ್ನು ಕದ್ದಿದ್ದಲ್ಲದೇ, ಬೆಂಗಳೂರಿನಲ್ಲೂ ತನ್ನ ಕೈಚಳಕ ತೋರಿಸಿದ್ದ ಖತರ್ನಾಕ್ ಖದೀಮನನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಸತ್ಯೇಂದ್ರ ಸಿಂಗ್ ಶೇಖಾವತ್ ಎಂಬಾತನೆ ಐಷಾರಾಮಿ ಕಾರುಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಕಳ್ಳ. ಆರೋಪಿಯು ರಾಜ್ಯಾದ್ಯಂತ ನೂರಕ್ಕೂ ಹೆಚ್ಚು ಐಷಾರಾಮಿ ಕಾರುಗಳನ್ನ ಕಳ್ಳತನ ಮಾಡಿ ಅವುಗಳನ್ನ ಡ್ರಗ್ ಮಾಫಿಯಾ ಹಾಗೂ ಮಾನವ ಕಳ್ಳ ಸಾಗಣೆ ಆರೋಪಿಗಳಿಗೆ ಬಾಡಿಗೆ ಕೊಡುತ್ತಿದ್ದ. ಆಟೋಮ್ಯಾಟಿಕ್ ಕಾರುಗಳನ್ನ ಹ್ಯಾಕ್ ಮಾಡಿ ಕಳ್ಳತನ ಮಾಡುತ್ತಿದ್ದ.
ಕಳೆದ ಕೆಲ ವರ್ಷಗಳಿಂದಲೂ ಕೃತ್ಯದಲ್ಲಿ ತೊಡಗಿದ್ದ ಶೇಖಾವತ್ ತೆಲಂಗಾಣ ಪೊಲೀಸರಿಗೆ ತಲೆನೋವಾಗಿದ್ದ. ಕಳೆದ ವರ್ಷ ಕನ್ನಡ ನಿರ್ಮಾಪಕ ಮಂಜುನಾಥ್ ತೆಲಂಗಾಣದ ಬಂಜಾರ ಹಿಲ್ಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರು ಕಳೆದುಕೊಂಡಿದ್ದರು. ಈ ಪ್ರಕರಣದ ಸಂಬಂಧ ಆರೋಪಿಯ ಬೆನ್ನಟ್ಟಿದ್ದ ಬಂಜಾರ ಹಿಲ್ಸ್ ಪೊಲೀಸರು ಜೈಪುರದವರೆಗೂ ಬಂಧಿಸಲು ತೆರಳಿದ್ದರು. ಇದನ್ನರಿತ ಆರೋಪಿ ಬಂಜಾರ ಹಿಲ್ಸ್ ಪೊಲೀಸರಿಗೆ ವ್ಯಾಟ್ಸ್ ಆ್ಯಪ್ ಕರೆ ಮೂಲಕ 'ಇಫ್ ಯು ಕ್ಯಾನ್ ಕ್ಯಾಚ್ ಮಿ' ಅಂತಾ ಚಾಲೆಂಜ್ ಕೂಡ ಹಾಕಿದ್ದನಂತೆ.
ಇದನ್ನೂ ಓದಿ: ಉಕ್ರೇನ್‌ನಲ್ಲಿ ಬಲಿಯಾದ ಹಾವೇರಿಯ ನವೀನ್ SSLCಯಲ್ಲಿ ಟಾಪರ್, ಪಿಯುನಲ್ಲಿ ಶೇ.97ರಷ್ಟು ಅಂಕ..!
ಬೆಂಗಳೂರಿನಲ್ಲೂ ತನ್ನ ಕೈಚಳಕ ತೋರಿಸಿದ್ದ ಶೇಖಾವತ್ ಮೇಲೆ 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಪ್ರಕರಣ ದಾಖಲಿಸಿಕೊಂಡಿದ್ದ ಅಮೃತಹಳ್ಳಿ ಪೊಲೀಸರು ಆರೋಪಿಯ ಬೆನ್ನಟ್ಟಿದ್ದು, ಕೊನೆಗೂ ಪೊಲೀಸರ ಕೈಗೆ ಸಿಕ್ಕಿದ್ದಾನೆ. ಬಂಧಿತನಿಂದ ನಾಲ್ಕು ಹೈ ಎಂಡ್ ಕಾರುಗಳನ್ನ ಜಪ್ತಿ ಮಾಡಿರುವ ಅಮೃತಹಳ್ಳಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.