ಬೆಂಗಳೂರು : ಕಾಲೇಜಿನಲ್ಲಿ ಅರಳಿದ ಪ್ರೀತಿಯನ್ನು ಉಳಿಸಲು ಪ್ರಿಯಕರನ ಅಣತಿಯಂತೆ ನಗರದಲ್ಲಿ ಗಾಂಜಾ ದಂಧೆಯಲ್ಲಿ ತೊಡಗಿಸಿಕೊಂಡಿದ್ದ ಎಂಜಿನಿಯರಿಂಗ್ ಪದವೀಧರೆಯನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ. ಆಂಧ್ರ ಪ್ರದೇಶ ಮೂಲದ ರೇಣುಕಾ ಬಂಧಿತ ಯುವತಿ. ಈಕೆಯ ಪ್ರಿಯಕರ ಸಿದ್ಧಾರ್ಥ್ ಹಾಗೂ ಬಿಹಾರ ಮೂಲದ ಸುಧಾಂಶು ತಲೆಮರೆಸಿಕೊಂಡಿದ್ದು, ಪತ್ತೆಗಾಗಿ ಸದಾಶಿವನಗರ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಆಂಧ್ರದ ಶ್ರೀಕಾಕುಳಂನ ರೇಣುಕಾ ಹಾಗೂ ಕಡಪ ಮೂಲದ ಸಿದ್ದಾರ್ಥ್ ಇಬ್ಬರು ಚೆನ್ನೈನ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಸ್ನೇಹಿತರಾಗಿದ್ದ ಇವರು ಬಳಿಕ ಪ್ರೀತಿಸಲು ಶುರುಮಾಡಿದ್ದರು. ಇವರ ಪ್ರೀತಿಗೆ ರೇಣುಕಾ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಕಾಲೇಜು ವ್ಯಾಸಂಗ ಮುಗಿದ ಬಳಿಕ ಮನೆಯವರ ವಿರೋಧ ಕಟ್ಟಿಕೊಂಡು ಚೆನ್ನೈನ ಕಂಪೆನಿಯೊಂದರಲ್ಲಿ ರೇಣುಕಾ ಕೆಲಸ ಮಾಡುತ್ತಿದ್ದಳು.
ಓದು ಬಳಿಕ ಕಡಪಗೆ ತೆರಳಿದ್ದ ಸಿದ್ದಾರ್ಥ್, ಮೋಜಿನ ಜೀವನ ನಡೆಸಲು ಗಾಂಜಾ ದಂಧೆಗೆ ಇಳಿದಿದ್ದ. ಕೆಲ ದಿನಗಳ ಹಿಂದೆ ಪ್ರಿಯತಮೆಗೆ ಕರೆ ಮಾಡಿ ಹೊಸ ಬಿಸಿನೆಸ್ ಅರಂಭಿಸುತ್ತಿದ್ದೇನೆ. ನೀನು ಸಹಾಯ ಮಾಡಿದರೆ ಲಕ್ಷಾಂತರ ರೂಪಾಯಿ ದುಡಿಯಬಹುದು ಎಂದು ಹೇಳಿದ್ದ.
ಅದರಂತೆ ಖಾಸಗಿ ಕಂಪೆನಿಯಲ್ಲಿ ಮಾಡುತ್ತಿದ್ದ ಕೆಲಸವನ್ನು ತೊರೆದು, ಪ್ರಿಯಕರನ ಸೂಚನೆಯಂತೆ ಈಕೆ ನಗರದ ಮಾರತ್ ಹಳ್ಳಿಯಲ್ಲಿ ರೂಮ್ ಮಾಡಿಕೊಂಡು ಮಾದಕ ವಸ್ತು ಮಾರಾಟಕ್ಕೆ ಇಳಿದಿದ್ದಳು. ಪ್ರಿಯಕರನ ಸೂಚನೆ ಮೇರೆಗೆ ಲಾಕ್ ಡೌನ್ ವೇಳೆ ಯುವತಿ ಬೆಂಗಳೂರಿಗೆ ಬಂದಿದ್ದಳು. ಬಿಹಾರದ ಸುಧಾಂಶುನಿಗೆ ನಗರದ ಡ್ರಗ್ಸ್ ವ್ಯವಹಾರದ ಮಾಹಿತಿಯಿತ್ತು.
ಸುಧಾಂಶುನನ್ನು ರೇಣುಕಾಗೆ ಸಿದ್ಧಾರ್ಥ್ ಪರಿಚಯ ಮಾಡಿಕೊಟ್ಟಿದ್ದ. ಅದರಂತೆ ಆಂಧ್ರದಿಂದ ನಗರಕ್ಕೆ ಸಣ್ಣ ಪೊಟ್ಟಣಗಳನ್ನು ನಗರಕ್ಕೆ ಕಳುಹಿಸುತ್ತಿದ್ದ. ಕೆಲ ದಿನಗಳ ಹಿಂದೆ ಸದಾಶಿವನಗರದಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಇನ್ಸ್ಪೆಕ್ಟರ್ ಅನಿಲ್ ಕುಮಾರ್ ನೇತೃತ್ವದ ತಂಡ ದಾಳಿ ನಡೆಸಿ ರೇಣುಕಾಳನ್ನು ಬಂಧಿಸಿದೆ.
ಒಡಿಶಾ ಹಾಗೂ ವಿಶಾಖಪಟ್ಟಣದಿಂದ ಕಡಿಮೆ ಬೆಲೆಗೆ ಗಾಂಜಾ ಖರೀದಿಸುತ್ತಿದ್ದ ಸಿದ್ದಾರ್ಥ್, ಅದನ್ನು ರೇಣುಕಾಗೆ ಕಳುಹಿಸುತ್ತಿದ್ದ. 50 ಗ್ರಾಂ. ಗಾಂಜಾ 2 ರಿಂದ 3 ಸಾವಿರ ರೂಪಾಯಿಗೆ ಮಾರಾಟ ಮಾಡುತ್ತಿರುವುದಾಗಿ ಪೊಲೀಸರ ಮುಂದೆ ಯುವತಿ ಒಪ್ಪಿಕೊಂಡಿದ್ದಾಳೆ. ಈಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಓದಿ : ವಿದ್ಯಾರ್ಥಿ ವೀಸಾದಲ್ಲಿದ್ದು ಬೆಂಗಳೂರಲ್ಲಿ ಮಾದಕ ವಸ್ತು ದಂಧೆ: ಓರ್ವನ ಬಂಧನ, ಮಾಲು ವಶ