ಬೆಂಗಳೂರು: ತಪ್ಪು ಮಾಡದಂತೆ ಬುದ್ದಿವಾದ ಹೇಳಿದ ವ್ಯಕ್ತಿಯನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಐವರು ಅರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡಿ ಸಿಟಿ ಸಿವಿಲ್ ಕೋರ್ಟ್ ತೀರ್ಪು ಆದೇಶಿಸಿದೆ.
ಚಿದಂಬರಂ ಯಾನೆ ಜೀವಾ (24), ವೇಣುಗೋಪಾಲ್ (26), ನವೀನ (18), ಸುಬ್ರಮಣಿ ಜೆ (20), ಗಿರೀಶ್ (19) ವರ್ಷ ಶಿಕ್ಷೆಗೆ ಒಳಗಾದ ಆರೋಪಿಗಳು.
ಏನಿದು ಘಟನೆ?
2012 ಜುಲೈ 17ರಂದು ನಗರದ ಕುಮಾರಸ್ವಾಮಿ ಲೇಔಟ್ ಒಂದನೇ ಹಂತದ ನಿವಾಸಿ ಆನಂದ್ ಮನೆ ಮುಂದೆ ಐವರು ಯುವಕರು ಸಿಗರೇಟ್ ಸೇದುತ್ತ ರಸ್ತೆಯಲ್ಲಿ ಓಡಾಡುತ್ತಿದ್ದ ಮಹಿಳೆಯರನ್ನು ಚುಡಾಯಿಸುತ್ತಿದ್ದರು. ಅದನ್ನು ಗಮನಿಸಿದ ಆನಂದ್, ನೀವು ತಪ್ಪು ಮಾಡ್ತಾ ಇದ್ದೀರಾ ಇಲ್ಲಿ ನಿಲ್ಲಬೇಡಿ ಮನೆಗೆ ಹೋಗಿ ಎಂದು ಬೈದು ಕಳಿಸಿದ್ದರು. ತಕ್ಷಣ ಅಲ್ಲಿಂದ ತೆರಳಿದ ಅರೋಪಿಗಳು ಸ್ವಲ್ಪ ಹೊತ್ತಿನ ಬಳಿಕ ಮಾರಾಕಾಸ್ತ್ರಗಳ ಸಮೇತ ಗುಂಪು ಕಟ್ಟಿಕೊಂಡು ಬಂದು, ಬುದ್ದಿವಾದ ಹೇಳಿದ ಆನಂದ್ಗೆ ದೊಣ್ಣೆಯಿಂದ ಹೊಡೆದು ಗಂಭೀರವಾಗಿ ಗಾಯಗೊಳಿಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಆನಂದ್ ಎರಡು ದಿನಗಳ ಕಾಲ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿ ಸಾವನ್ನಪ್ಪಿದ್ದರು.
ಘಟನೆ ಬಗ್ಗೆ ದೂರು ದಾಖಲಿಸಿಕೊಂಡಿದ್ದ ಕುಮಾರಸ್ವಾಮಿ ಲೇಔಟ್ ಪೊಲೀಸರು, ಐದು ಜನ ಆರೋಪಿಗಳನ್ನು ಬಂಧಿಸಿದ್ದರು. ಬಳಿಕ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ನ್ಯಾಯಾಧೀಶ ವೆಂಕಟೇಶ ಹಲಗಿ ಪ್ರಕರಣದ ವಿಚಾರಣೆ ನಡೆಸಿ ಕೊಲೆ ಮಾಡಿದ್ದ ಐವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.