ಬೆಂಗಳೂರು: ಮಾವನ ಸಹೋದರ ಮಾಡಿದ ಸಾಲ ವಸೂಲಿಗೆ ಅಳಿಯನನ್ನು ಅಪಹರಣ ಮಾಡಿ ಹಣಕ್ಕೆ ಬೇಡಿಕೆಯಿಟ್ಟಿರುವ ಪ್ರಕರಣ ಬೊಮ್ಮನಹಳ್ಳಿ ಠಾಣಾ ವ್ಯಾಪ್ತಿಯ ಗಾರ್ವೇಬಾವಿ ಪಾಳ್ಯದಲ್ಲಿ ಬೆಳಕಿಗೆ ಬಂದಿದೆ. ರಾಜಶೇಖರ ಎಂಬಾತನನ್ನು ಅಪಹರಿಸಿರುವ ಸ್ವರೂಪ್ ಶೆಟ್ಟಿ ತಂಡ ಹಣಕ್ಕಾಗಿ ಬೇಡಿಕೆಯಿಡುತ್ತಿದೆ ಎಂದು ರಾಮಚಂದ್ರ ಎಂಬುವವರು ಬೊಮ್ಮನಹಳ್ಳಿ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣದ ವಿವರ: ರಾಜಶೇಖರನ ಮಾವ ರಾಮಚಂದ್ರನ ಸಹೋದರ ಲಕ್ಷ್ಮಣ್ ರೆಡ್ಡಿ ಮತ್ತು ಸ್ವರೂಪ್ ಶೆಟ್ಟಿ ಮಧ್ಯೆ ಐದು ಲಕ್ಷ ರೂ ಹಣಕಾಸಿನ ವ್ಯವಹಾರ ನಡೆದಿತ್ತು. ಆದರೆ 2 ಲಕ್ಷ ವಾಪಸ್ ನೀಡಿದ್ದ ಲಕ್ಷ್ಮಣ್ ರೆಡ್ಡಿ ಉಳಿದ 3 ಲಕ್ಷ ಹಣ ಕೊಡದೆ ಸತಾಯಿಸುತ್ತಿದ್ದನಂತೆ. ನ. 24ರಂದು ಸ್ವರೂಪ್ ಶೆಟ್ಟಿ ಆ್ಯಂಡ್ ಟೀಂ ಲಕ್ಷ್ಮಣ್ ರೆಡ್ಡಿಯಿಂದ ಹಣ ವಸೂಲಿಗಾಗಿ ಬೊಮ್ಮನಹಳ್ಳಿ ಠಾಣಾ ವ್ಯಾಪ್ತಿಯ ಗಾರ್ವೆಬಾವಿ ಪಾಳ್ಯದಿಂದ ಆತನ ಸಹೋದರನ ಅಳಿಯ ರಾಜಶೇಖರನನ್ನು ಅಪಹರಿಸಿದೆ.
ನಂತರ ರಾಜಶೇಖರನ ಫೋನ್‌ನಿಂದ ಲಕ್ಷ್ಮಣ್ ರೆಡ್ಡಿಯ ಸಹೋದರ ರಾಮಚಂದ್ರರಿಗೆ ಕರೆ ಮಾಡಿಸಿ 50 ಸಾವಿರ ಹಣವನ್ನು ತಮ್ಮ ಖಾತೆಗೆ ಹಾಕಿಸಿಕೊಂಡಿದೆ. ಬಳಿಕ ಪುನಃ ಕರೆ ಮಾಡಿದ್ದ ಸ್ವರೂಪ್ ಶೆಟ್ಟಿಯ ತಂಡ ನಿಮ್ಮ ಅಳಿಯನನ್ನು ಕಿಡ್ನಾಪ್ ಮಾಡಿದ್ದೇವೆ. 2.5 ಲಕ್ಷ ಹಣ ತಂದು ಕೊಡಿ ಎಂದಿದೆ. ಈ ಬಗ್ಗೆ ಬೊಮ್ಮನಹಳ್ಳಿ ಠಾಣೆಗೆ ರಾಮಚಂದ್ರ ನೀಡಿದ್ದಾರೆ. ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಇದನ್ನೂ ಓದಿ: ಸೈಲೆಂಟ್ ಸುನೀಲ್ ಬಿಜೆಪಿ ಸೇರ್ಪಡೆಗೆ ಅವಕಾಶವಿಲ್ಲ : ನಳಿನ್‍ಕುಮಾರ್ ಕಟೀಲ್