ಬೆಂಗಳೂರು: ಬೆಂಗಳೂರು ಕಂಬಳ ನಮ್ಮ ಕಂಬಳ ಸ್ಪರ್ಧೆಯಲ್ಲಿ ನಿರೀಕ್ಷೆ ಮೀರಿ ಕೋಣಗಳು ಭಾಗವಹಿಸಿದ್ದು, ಕಂಬಳ ಕ್ರೀಡೋತ್ಸವ ತುಂಬಾ ಚೆನ್ನಾಗಿ ನಡೆಯುತ್ತಿದೆ. 1987 ರಿಂದ ಎ 1 ಕೂಟದಲ್ಲಿ ಭಾಗವಹಿಸುತ್ತ ಬಂದಿದ್ದೇವೆ ಎಂದು ಸುಳ್ಯದ ಸುಳ್ಯಕಾಂತ ಮಂಗಳ ಕೋಣದ ಕಂಬಳ ತಂಡದ ಮುಖ್ಯಸ್ಥ ಸಂದೀಪ್ ಕುಮಾರ್ ಈಟಿವಿ ಭಾರತಕ್ಕೆ ತಿಳಿಸಿದರು.
ಎಲ್ಲ ವಿಭಾಗಗಳಲ್ಲೂ ಸೀನಿಯರ್, ಜೂನಿಯರ್, ಹಗ್ಗ, ನೇಗಿಲು ವಿಭಾಗದಲ್ಲಿ ಇಲ್ಲಿಯವರೆಗೆ ಬಹುಮಾನವನ್ನು ಪಡೆದಿದ್ದೇವೆ. ಹಗ್ಗ ಮತ್ತು ನೇಗಿಲು ಹಿರಿಯ ವಿಭಾಗದಲ್ಲಿ ಸಾಕಷ್ಟು ಬಾರಿ ಪ್ರಥಮ ಬಹುಮಾನ ಪಡೆದಿದ್ದೇವೆ. ಕಳೆದ ವರ್ಷ ಕೂಡ ಹೈಕಳ ಭಾವ ಕಂಬಳದಲ್ಲಿ ದ್ವಿತೀಯ ಬಹುಮಾನವನ್ನು ಪಡೆದಿದ್ದೇವೆ ಎಂದು ತಿಳಿಸಿದರು.
ಹೊಸ ಕರೆಯಲ್ಲಿ ನಮ್ಮ ಅನುಭವ ಇಲ್ಲಿ ಪ್ಲಸ್ ಪಾಯಿಂಟ್ ಆಗಲಿದೆ. ಆದರೆ, ಸಂಜೆಯ ವೇಳೆಗೆ ಕಂಬಳ ಮುಗಿಯಬೇಕಿತ್ತು. ಆದರೆ, ರಾತ್ರಿಯವರೆಗೂ ಪಂದ್ಯಾವಳಿ ನೆಡೆಯಲಿದೆ ಅನ್ನಿಸುತ್ತಿದೆ. ಇಲ್ಲಿಯವರೆಗೆ ಟ್ರಯಲ್ ಮಾತ್ರ ನೆಡೆದಿದ್ದು, ಊರಿನಲ್ಲಿ ಆಯೋಜಿಸಿದ್ದರೆ ಇಲ್ಲಿಗೆ ಚಾನ್ಸ್ ಕೂಡ ಮುಗಿದಿರುತ್ತಿತ್ತು. ಕಂಬಳ ಆಯೋಜನೆ ಸಮಯ ತಡವಾಯಿತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಂಬಳದ ಪ್ರತಿ ತಂಡಗಳು ನಮ್ಮ ಪ್ರತಿ ಸ್ಪರ್ಧಿಗಳಾಗಿದ್ದಾರೆ. ಇಲ್ಲಿಗೆ ಬರುವ ಎಲ್ಲರೂ ಬಹುಮಾನವನ್ನು ಗೆಲ್ಲಬೇಕೆಂದು ತಮ್ಮ ತಮ್ಮ ಊರುಗಳಿಂದ ಬಂದಿದ್ದಾರೆ. ಇಲ್ಲಿ ಅದೃಷ್ಟ ಕೂಡ ಬಹುಮಖ್ಯ ಪಾತ್ರ ವಹಿಸುತ್ತದೆ. ನಾವು ಕೂಡ ಇಲ್ಲಿ ಬಹುಮಾನ ಪಡೆದುಕೊಂಡೆ ಹೋಗುತ್ತವೆ ಎಂದು ಪಣ ತೊಟ್ಟಿದ್ದೇವೆ ಎಂದರು.
ಊರಿನಿಂದ ಬಂದ ನಾಟಿ ವೈದ್ಯರು ಸೇರಿದಂತೆ ಬೆಂಗಳೂರಿನ ಪಶು ವೈದ್ಯರು ಕೋಣಗಳ ಆರೋಗ್ಯದ ಮೇಲ್ವಿಚಾರಣೆ ಚೆನ್ನಾಗಿ ನಿರ್ವಹಿಸುತ್ತಿದ್ದಾರೆ. ಕೋಣಗಳು ಬೆಂಗಳೂರು ವಾತಾವರಣಕ್ಕೆ ಹೊಂದಾಣಿಕೆ ಆಗಿವೆ ಎಂದು ಹೇಳಿದರು.
ಕಂಬಳ ಸ್ಪರ್ಧೆ ಹೇಗೆ?: ಬೆಂಗಳೂರು ಕರೆ ಅತ್ಯಂತ ಉದ್ದ ಕರೆಯಾಗಿದೆ. ಹಗ್ಗದ ಓಟದಲ್ಲಿ ಎರಡು ಕೋಣಗಳ ಕುತ್ತಿಗೆಗೆ ಕಟ್ಟಿದ ನೊಗದ ಮಧ್ಯೆ ಹಗ್ಗವೊಂದನ್ನು ಕಟ್ಟಿ, ಆ ಹಗ್ಗವನ್ನು ಹಿಡಿದು ಕೋಣಗಳನ್ನು ಓಡಿಸಲಾಗುತ್ತದೆ. ನೇಗಿಲು ಓಟದಲ್ಲಿ ಎರಡು ಕೋಣಗಳ ಕುತ್ತಿಗೆಗೆ ಕಟ್ಟಿದ ನೊಗವೊಂದರ ಮಧ್ಯೆ ಮರದ ದಂಡ ಕಟ್ಟಿ, ಆ ದಂಡದ ಕೊನೆಗೆ ಸಣ್ಣ ನೇಗಿಲಿನಾಕಾರದ ಮರದ ತುಂಡನ್ನು ಜೋಡಿಸಿ, ಆ ನೇಗಿಲನ್ನು ಹಿಡಿದು ಕೋಣಗಳನ್ನು ಓಡಿಸಲಾಗುತ್ತದೆ.
ಅಡ್ಡ ಹಲಗೆಯಲ್ಲಿ ನೊಗದ ಮಧ್ಯೆ ಉದ್ದನೆಯ ದಂಡು ಇರುವ ಅಡ್ಡ ಹಲಗೆಯನ್ನು ಕಟ್ಟಿ, ಆ ಹಲಗೆಯ ಮೇಲೆ ನಿಂತು ಕೋಣಗಳನ್ನು ಓಡಿಸುತ್ತೇವೆ. ಕೆನೆ ಹಲಗೆಯಲ್ಲಿ ನೊಗದ ಮಧ್ಯೆ ಉದ್ದನೆಯ ದಂಡು ಇರುವ ದಪ್ಪನೆಯ ಮರದ ತುಂಡಿನಿಂದ ಮಾಡಿದ ಕೆನೆ ಹಲಗೆಯನ್ನು ಕಟ್ಟಿ ಅದರ ಮೇಲೆ ಒಂದು ಕಾಲನ್ನಿಟ್ಟು ಕೋಣಗಳನ್ನು ಓಡಿಸಲಾಗುತ್ತದೆ. ಇದರಲ್ಲಿ ಕೆನೆ ಹಲಗೆಯಿಂದ ಮೇಲಕ್ಕೆ ಕೆಸರು ನೀರು ಚಿಮ್ಮಿಸುವುದು ಮುಖ್ಯವಾಗಿರುತ್ತದೆ ಎಂದು ತಿಳಿಸಿದರು.
ಇದನ್ನೂಓದಿ :ದೈವಕ್ಕೆ ಪೂಜೆ ಸಲ್ಲಿಸಿ 'ಬೆಂಗಳೂರು ಕಂಬಳ ನಮ್ಮ ಕಂಬಳ'ಕ್ಕೆ ಸಾಂಕೇತಿಕ ಚಾಲನೆ