ಬೆಂಗಳೂರು: ರಾಜಧಾನಿ ಬೆಂಗಳೂರು ಉಗ್ರರ ಸುರಕ್ಷಿತ ತಾಣವಾಗಿ ಪರಿವರ್ತನೆಯಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ಕಳೆದ ಎರಡು ತಿಂಗಳಿಂದ ಬೆಂಗಳೂರಿನಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಬೆಂಗಳೂರಿನ ಕಾನೂನು ಸುವ್ಯವಸ್ಥೆ ಅಪರಾಧ ನಿಯಂತ್ರಣ ಕೈ ತಪ್ತಿದೆ. ದಿನನಿತ್ಯ ಕೊಲೆ ಸುಲಿಗೆ ಸಾಮಾನ್ಯವಾಗುತ್ತಿದೆ ಎಂದು ದೂರಿದರು.
ಉಗ್ರರನ್ನು ಬಂಧಿಸಿದ ಸಿಸಿಬಿಗೆ ಅಭಿನಂದನೆ ಸಲ್ಲುಸುತ್ತೇನೆ. ಆದರೆ ಬಹಳಷ್ಟು ಕೇಸ್ಗಳು ಪೊಲೀಸ್ ಠಾಣೆಯಲ್ಲಿ ರಿಜಿಸ್ಟರ್ ಆಗುತ್ತಿಲ್ಲ. ಕಾನೂನು ಸುವ್ಯವಸ್ಥೆ, ಅಪರಾಧ ನಿಯಂತ್ರಣ ಮಾಡುವುದು ಪೊಲೀಸರ ಕೆಲಸ. ಈ ಸರ್ಕಾರ ಬಂದ ಮೇಲೆ ಮಧ್ಯವರ್ತಿಗಳು ಕೈಹಾಕಿ ನಿಯಂತ್ರಿಸಲು ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆ ಸರ್ಕಾರ ಅವಕಾಶ ಕೊಡಬಾರದು. ಬೆಂಗಳೂರಿನಲ್ಲಿ ಕ್ಲಬ್ ಚಟುವಟಿಕೆಗಳು ಹೆಚ್ಚಾಗಿವೆ. ಹಫ್ತಾ ವಸೂಲಿ ತೀವ್ರವಾಗುತ್ತಿದೆ ಎಂದು ಬೊಮ್ಮಾಯಿ ಆರೋಪಿಸಿದರು.
ಇಲ್ಲಿಯೇ ನೆಲೆಸಿ ಕ್ರಿಮಿನಲ್ ಚಟುವಟಿಕೆಗಳಿಗೆ ಕುಮ್ಮಕ್ಕು ಕೊಡುವಂತಹ ಕೆಲಸವಾಗುತ್ತಿದೆ. ಅಂತಾರಾಷ್ಟ್ರೀಯ ಐಎಸ್ಐ ತಂಡ ಇವರ ಸಂಪರ್ಕದಲ್ಲಿದ್ದಾರೆ. ಸಿಸಿಬಿ ಅಧಿಕಾರಿಗಳು ಬಹಿರಂಗಪಡಿಸಿ, ಇದರ ಆಳ ಮತ್ತು ಉದ್ದ ದೊಡ್ಡದಿದೆ. ಇದಕ್ಕೆಲ್ಲ ಅಂತಾರಾಷ್ಟ್ರೀಯ ಕುಮ್ಮಕ್ಕು ಇದೆ. ಉಗ್ರರ ವಿರುದ್ಧದ ಕೇಸ್ಗಳನ್ನು ಕೂಡಲೇ ಎನ್ಐಎ ತನಿಖೆಗೆ ಕೊಡಬೇಕು. ಬೆಂಗಳೂರು ಸುರಕ್ಷತೆ ಬಗ್ಗೆ ಅಧಿಕಾರಿಗಳು ಫೀಲ್ಡ್ಗೆ ಇಳಿಬೇಕು. ಇದರ ಹಿಂದೆ ಅಂತಾರಾಷ್ಟ್ರೀಯ ಸಂಸ್ಥೆಗಳ ಬೆಂಬಲವಿದೆ. ಬೆಂಗಳೂರಿನಲ್ಲಿ ಸ್ಫೋಟ ಮಾಡುವ ಹುನ್ನಾರ ಇದೆ. ಇದನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಬಿಲದಲ್ಲಿದ್ದ ದುಷ್ಟಶಕ್ತಿಗಳಿಗೆ ಹೊಸ ಸರ್ಕಾರದಿಂದ ಪ್ರೇರಣೆ: ಕಳೆದ 2 ತಿಂಗಳಲ್ಲಿ ಬಿಲದಲ್ಲಿ ಇದ್ದ ಇಂತಹ ದುಷ್ಟ ಶಕ್ತಿಗಳಿಗೆ ಹೊಸ ಸರ್ಕಾರದಿಂದ ಪ್ರೇರಣೆ ಸಿಕ್ಕಿದೆ ಅಂತ ಕಾಣುತ್ತದೆ ಎಂದು ಮಾಜಿ ಸಚಿವ ಆರಗ ಜ್ಞಾನೇಂದ್ರ ವಾಗ್ದಾಳಿ ನಡೆಸಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ನಾನು ಸಿಸಿಬಿ ಪೊಲೀಸರನ್ನು ಅಭಿನಂದಿಸುತ್ತೇನೆ. ಒಳ್ಳೆಯ ಕೆಲಸ ಮಾಡಿದ್ದಾರೆ. ಮುಂದೆಯೂ ಒಳ್ಳೆ ಕೆಲಸ ಮಾಡಬೇಕು. ಸಿಕ್ಕಿರುವ ಶಂಕಿತ ಉಗ್ರರನ್ನು ನೋಡಿದಾಗ, ಅವರ ಬಳಿ ಸಿಕ್ಕಿರುವ ವೆಪನ್ ನೋಡಿದಾಗ ಶಾಂತಿ ಸುವ್ಯವಸ್ಥೆಯನ್ನು ಹಾಳು ಮಾಡಲು ಸಜ್ಜಾಗಿದ್ದರು ಅಂತಾ ಕಾಣಿಸುತ್ತದೆ. ನಾವು ಅಪಾಯಕಾರಿ ಸನ್ನಿವೇಶದಲ್ಲಿ ಇದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.
ಇದನ್ನು ಬಿಗಿ ಮಾಡುವಂತಹ ಕೆಲಸ ಮಾಡಬೇಕಾಗಿದೆ. ನಮ್ಮ ಸರ್ಕಾರದಲ್ಲೂ ಇಂತಹ ಘಟನೆಗಳು ನಡೆದಿತ್ತು. ನಾವು ಇವನ್ನು ಅಷ್ಟು ಸುಲಭವಾಗಿ ಬಿಡಲಿಲ್ಲ. ಮಂಗಳೂರು ಬಾಂಬ್ ಬ್ಲಾಸ್ಟ್ನಲ್ಲಿ ಸಿಕ್ಕ ವ್ಯಕ್ತಿಯನ್ನು ಬಂಧಿಸಿ ಅವನಿಗೆ ಚಿಕಿತ್ಸೆ ಕೊಡಿಸಿ ಅವನಿಗೆ ಹೊರಗೆ ಎಷ್ಟು ಲಿಂಕ್ ಇತ್ತು ಅನ್ನೋದು ಎನ್ಐಎಗೆ ಗೊತ್ತಾಗಿದೆ. ಹಾಗಾಗಿ ಇದನ್ನು ಎಫ್ಐಆರ್ ಹಾಕಿ ಬಿಡೋದಲ್ಲ. ಮೂಲವನ್ನು ಕೆದಕಬೇಕು. ಸೆಂಟ್ರಲ್ ಏಜನ್ಸಿಗಳಿಗೆ ತನಿಖೆಗೆ ಕೊಡಬೇಕು. ಅಮೂಲಾಗ್ರವಾಗಿ ತನಿಖೆ ನಡೆಯದಿದ್ದರೆ ದೇಶದ ಏಕತೆ, ಸಮಗ್ರತೆಗೆ ಭಂಗ ಬರುತ್ತದೆ. ಜನರಿಗೆ ತಾವು ಸುರಕ್ಷಿತವಾಗಿದ್ದೇವೆ ಎಂಬ ಸಂದೇಶ ಕೊಡುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.
ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಇದೇ ವೇಳೆ ಮಾತನಾಡಿದ ಮಾಜಿ ಸಚಿವ ಆರ್ ಅಶೋಕ್, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಯಾವ ಯಾವ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆಯೋ, ಅಲ್ಲಿ ಉಗ್ರರಿಗೆ ಹುಲ್ಲು ಮೇಯುವ ರೀತಿ ಆಗಿದೆ ಎಂದು ಆರೋಪಿಸಿದರು. ಬೆಂಗಳೂರಿನ ಒಂದು ಪೊಲೀಸ್ ಠಾಣೆಯಲ್ಲಿ ಕುರಾನ್ ಹಂಚಿ ಸಹಿ ಮಾಡಿಸಿಕೊಳ್ಳಲಾಗುತ್ತಿದೆ. ಈ ರೀತಿ ಆದ ವ್ಯವಸ್ಥೆ ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಕಂಡು ಬರುತ್ತಿದೆ. ಇದರ ಮಾಹಿತಿ ಕಲೆ ಹಾಕುತ್ತಿದ್ದೇನೆ. ಯಾವ ಠಾಣೆ ಅನ್ನೋ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದೇನೆ. ಬೆಂಗಳೂರನ್ನು ರಕ್ಷಿಸಬೇಕು ಅಂತ ನಾವು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಅದಷ್ಟು ಬೇಗ ಎನ್ಐಎ ಟೀಂ ಬೆಂಗಳೂರಿಗೆ ಬರಬೇಕು. ಉಗ್ರರನ್ನು ಸದೆ ಬಡಿಯಬೇಕು ಎಂದು ಅವರು ಆಗ್ರಹಿಸಿದರು.
ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಬೆಂಗಳೂರನ್ನ ಬ್ರಾಂಡ್ ಬೆಂಗಳೂರು ಮಾಡ್ತಿನಿ ಅಂತ ಹೇಳಿದ್ರು. ಬ್ರಾಂಡ್ ಬೆಂಗಳೂರು ಮಾಡ್ತಾರಾ?. ಸಿಂಗಾಪುರ ಮಾಡ್ತಾರಾ?. ಮಂಗಾಪುರ ಮಾಡ್ತಾರೋ ನೋಡಬೇಕು? ಎಂದು ಟೀಕಿಸಿದರು.
ಮಹಾ ಘಟಬಂಧನ್ಗೆ 'ಇಂಡಿಯಾ' ಹೆಸರು ನಾಮಕರಣ ವಿಚಾರವಾಗಿ ಪ್ರತಿಕ್ರಿಯಿಸುತ್ತ, ಅದು ಇಂಡಿಯಾ ಅಲ್ಲ, ಈಸ್ಟ್ ಇಂಡಿಯಾ ಕಂಪನಿ. ಕಾಂಗ್ರೆಸ್ನ್ನು ಹುಟ್ಟು ಹಾಕಿದ್ದೇ ಬ್ರಿಟಿಷರು. ಇಂಡಿಯಾಗೆ ಕರ್ನಾಟಕವನ್ನು ಎಟಿಎಂ ಮಾಡಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ಸಭೆಗೆ ಐಎಎಸ್ ಅಧಿಕಾರಿಗಳನ್ನ ದುರುಪಯೋಗ ಪಡಿಸಿಕೊಂಡಿದ್ದಾರೆ. ಜೈಲಿನಲ್ಲಿದ್ದ, ಬೇಲ್ನಲ್ಲಿದ್ದವರಿಗೆ ಅಧಿಕಾರಿಗಳು ಸ್ವಾಗತ ಮಾಡಿದ್ದಾರೆ ಎಂದು ಆರ್ ಅಶೋಕ್ ಕಿಡಿಕಾರಿದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಭಾರಿ ಸ್ಫೋಟಕ್ಕೆ ಸಂಚು: ಐವರು ಶಂಕಿತ ಉಗ್ರರ ಬಂಧನ, ತನಿಖೆ ತೀವ್ರ