ಬೆಂಗಳೂರು: ಡ್ರಗ್ಸ್ ಜಾಲದಲ್ಲಿ ಬಂಧನಕ್ಕೊಳಗಾಗಿದ್ದ ಕಿಂಗ್ ಪಿನ್ ಮಹಿಳಾ ಆರೋಪಿ ಅನಿಕಾ ಡಿ. ಸೇರಿ 10 ಮಂದಿ ವಿರುದ್ಧ ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದು, ದಂಧೆಕೋರರು ವಾಟ್ಸಾಪ್ನಲ್ಲೇ ದಂಧೆ ನಡೆಸುತ್ತಿದ್ದ ಸಂಗತಿ ಬಯಲಾಗಿದೆ.
ದೊಡ್ಡಗುಬ್ಬಿಯ ನಿವಾಸಿ ಪ್ರಕರಣದ ಕಿಂಗ್ ಪಿನ್ ಅನಿಕಾ ಡಿ. ಕೇರಳ ಮೂಲದ ಮೊಹಮ್ಮದ್ ಅನೂಪ್ , ರಾಜೇಶ್ ರವೀಂದ್ರನ್, ಆದಂ ಪಾಷಾ, ಸುಹಾಸ್ ಕೆ. ಗೌಡ, ದಿಕ್ಷೀತ್ ಬೋಪಣ್ಣ, ಜಯೇಶ್ ಚಂದ್ರ, ಗರ್ಲಡ್ ಪ್ರವೀಣ್ ಕುಮಾರ್ ಹಾಗೂ ಕೆ.ಜಿಮ್ರೀಸ್ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ.
ಆರೋಪಿಗಳು ವ್ಯವಸ್ಥಿತವಾಗಿ ಡ್ರಗ್ಸ್ ಜಾಲದಲ್ಲಿ ಶಾಮೀಲಾಗಿ ವಾಟ್ಸಾಪ್ ನಲ್ಲೇ ಡ್ರಗ್ಸ್ ವ್ಯವಹಾರ ಕುದುರಿಸುತ್ತಿದ್ದರು. ನಂತರ ಆನ್‌ಲೈನ್‌ನಲ್ಲೇ ಕಿಂಗ್ ಪಿನ್ ಅನಿಕಾ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡುತ್ತಿದ್ದ ಸಂಗತಿ ಚಾರ್ಜ್‌ಶೀಟ್‌ನಲ್ಲಿ ಬಹಿರಂಗಗೊಂಡಿದೆ.
ಡಿ.ಅನಿಕಾ ಇಬ್ಬರು ಆಫ್ರಿಕನ್ ಪ್ರಜೆಗಳಿಂದ ಡ್ರಗ್ಸ್ ಖರೀದಿಸಿ ಹೆಚ್ಚಿನ ಬೆಲೆಗೆ ಇತರ ಆರೋಪಿಗಳಿಗೆ ಮಾರಾಟ ಮಾಡುತ್ತಿದ್ದಳು. ಅನಿಕಾಳನ್ನು ಇತರ ಆರೋಪಿಗಳು ಪೋನ್, ವಾಟ್ಸಾಪ್ನಲ್ಲಿ ಆಗಾಗ ಸಂಪರ್ಕಿಸುತ್ತಿದ್ದರು. ವಾಟ್ಸಾಪ್ನಲ್ಲೇ ಅನಿಕಾ ಡ್ರಗ್ಸ್ ಕುರಿತು ಮಾಹಿತಿ ನೀಡಿ ಡೀಲ್ ಕುದುರಿಸುತ್ತಿದ್ದಳು. ಆಕೆಯ ಖಾತೆಗೆ ಇತರ ಆರೋಪಿಗಳು ಹಣ ವರ್ಗಾವಣೆ ಮಾಡಿರುವುದನ್ನು ಸಾಕ್ಷ್ಯ ಸಮೇತ ಎನ್‌ಸಿಬಿ ಜಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದೆ.
ಅನಿಕಾ 2ನೇ ಆರೋಪಿ ಅನೂಪ್‌ಗೆ ಆತ ಹೇಳಿದ ಜಾಗಕ್ಕೆ ಡ್ರಗ್ಸ್ ಪೂರೈಸುತ್ತಿದ್ದಳು. ಕಳೆದ ವರ್ಷದಲ್ಲಿ 476 ಬಾರಿ ಅನೂಪ್‌ಗೆ ಅನಿಕಾ ಕರೆ ಮಾಡಿದ್ದಾಳೆ. ಅನೂಪ್ ಮೂಲಕ ಆರೋಪಿ ರಾಜೇಶ್ ರವೀಂದ್ರನ್ ಡ್ರಗ್ಸ್‌ಗಳನ್ನು ಮನೆಗೆ ತರಿಸುತ್ತಿದ್ದ. ಈ ಮೂವರು ಪ್ರಮುಖ ಆರೋಪಿಗಳಾಗಿದ್ದಾರೆ. ಇನ್ನುಳಿದವರು ಅನಿಕಾ ಮೂಲಕ ಎಂಡಿಎಂಎ ಸೇರಿ ವಿವಿಧ ಬಗೆಯ ಡ್ರಗ್ಸ್‌ಗಳನ್ನು ಖರೀದಿಸುತ್ತಿದ್ದರು.
ಆರೋಪಿ ಆದಂ ಪಾಷಾ ಎಂಡಿಎಂಎ ಮಾತ್ರೆಗಳನ್ನು ಅನಿಕಾಳಿಂದ ಖರೀದಿಸಿದ್ದ. ಡ್ರಗ್ಸ್ ವಿಚಾರವಾಗಿ ವಾಟ್ಸಾಪ್ ಮತ್ತು ಟೆಲಿಗ್ರಾಮ್‌ನಲ್ಲಿ ಇಬ್ಬರೂ 147 ಬಾರಿ ಮಾಹಿತಿ ಹಂಚಿಕೊಂಡಿದ್ದರು. 2019ರಿಂದ ಆದಂ ಪಾಷಾ ಒಟ್ಟು 2 ಲಕ್ಷ ರೂ.ನ್ನು ಅನಿಕಾ ಖಾತೆಗೆ ಹಾಕಿದ್ದ. ಆರೋಪಿಗಳಿಂದ ಜಪ್ತಿ ಮಾಡಲಾದ ಮಾದಕ ವಸ್ತುಗಳು ಹಾಗೂ ದಾಖಲೆಗಳ ವಿವರಗಳನ್ನೂ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದೆ.