ಬೆಂಗಳೂರು: ಚಿಲುಮೆ ಸಂಸ್ಥೆಯಿಂದ ಮತದಾರರ ಮಾಹಿತಿ ದುರುಪಯೋಗ ಪ್ರಕರಣ ಸಂಬಂಧ ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರನ್ನು ಅಮಾನತುಗೊಳಿಸಿರುವ ಸರ್ಕಾರದ ಕ್ರಮಕ್ಕೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ. ಪ್ರಕರಣ ಸಂಬಂಧ ದಾಖಲೆಗಳ ಪರಿಶೀಲನೆ ಮಾಡಬೇಕಾಗಿದೆ. ಅಲ್ಲದೆ, ಆರೋಪ ಸಂಬಂಧ ಈವರೆಗೂ ನಡೆದಿರುವ ತನಿಖಾ ವರದಿಯನ್ನು ಸಲ್ಲಿಸುವಂತೆ ಸೂಚನೆ ನೀಡಿದ ಹೈಕೋರ್ಟ್ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.
ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ಕೆ. ಶ್ರೀನಿವಾಸ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಜಿ.ನರೇಂದರ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಶ್ರೀನಿವಾಸ್ ಪರ ವಾದ ಮಂಡಿಸಿದ ವಕೀಲರು, ಅರ್ಜಿಯ ಅಂತಿಮ ಆದೇಶದವರೆಗೂ ಶ್ರೀನಿವಾಸ್ ಅವರ ಹುದ್ದೆಗೆ ಯಾವುದೇ ಅಧಿಕಾರಿಯನ್ನು ನೇಮಕ ಮಾಡಬಾರದಾಗಿತ್ತು. ಆದರೆ, ಈಗಾಗಲೇ ಮತ್ತೊಬ್ಬ ಅಧಿಕಾರಿಯನ್ನು ನೇಮಕ ಮಾಡಲಾಗಿದೆ ಎಂದು ವಿವರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಅರ್ಜಿದಾರರ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಪರಿಶೀಲಿಸಬೇಕಾಗಿದೆ. ಅಲ್ಲದೆ, ಚುನಾವಣಾ ಕಾರ್ಯಗಳಿಗಾಗಿ ನೇಮಕ ಮಾಡಿರುವ ಅಧಿಕಾರಿಯ ಕರ್ತವ್ಯ ನಿರ್ವಹಣೆಗೆ ಯಾವುದೇ ಅಡ್ಡಿ ಮಾಡದಂತೆ ಸೂಚನೆ ನೀಡಿ ವಿಚಾರಣೆ ಮುಂದೂಡಿದೆ.
ಇದನ್ನೂ ಓದಿ: ಮತ ಪರಿಷ್ಕರಣೆ ಅಕ್ರಮ: ಇಬ್ಬರು ಅಧಿಕಾರಿಗಳ ಅಮಾನತಿಗೆ ಚುನಾವಣೆ ಆಯೋಗದಿಂದ ಖಡಕ್ ನಿರ್ದೇಶನ
ಪ್ರಕರಣದ ಹಿನ್ನೆಲೆ: ಮತದಾರರ ದಾಖಲೆ ನಾಪತ್ತೆ ಪ್ರಕರಣ ಸಂಬಂಧ ಕೇಂದ್ರ ಚುನಾವಣಾ ಆಯೋಗವು 2022ರ ನವೆಂಬರ್ 25ರಂದು ಬೆಂಗಳೂರು ಪತ್ರ ಆಧರಿಸಿ ತಮ್ಮನ್ನು ಸೇವೆಯಿಂದ ಅಮಾನತುಪಡಿಸಿ ನ.26ರಂದು ರಾಜ್ಯ ಸರ್ಕಾರ ಆದೇಶಿಸಿದೆ. ಆದೇಶ ಹೊರಡಿಸುವ ಮುನ್ನ ಸರ್ಕಾರ ಸರಿಯಾಗಿ ವಿವೇಚನೆ ಬಳಸಿಲ್ಲ. ಲಭ್ಯವಿರುವ ದಾಖಲೆ ಪರಿಶೀಲಿಸಿಲ್ಲ ಎಂದು ಕೆ.ಶ್ರೀನಿವಾಸ್ ಅರ್ಜಿಯಲ್ಲಿ ತಿಳಿಸಿದ್ದಾರೆ.
ಅಲ್ಲದೆ, ತಮಗೆ ಅವಕಾಶ ನೀಡಿ ಯಾವುದೇ ವಿವರಣೆ ಪಡೆದಿಲ್ಲ. ತಮ್ಮ ವಿರುದ್ಧದ ಆರೋಪಗಳು ದುರ್ನಡತೆಗೆ ಸಂಬಂಧಿಸಿದ ಆರೋಪವಲ್ಲ ಎಂಬುದನ್ನು ಪರಿಗಣಿಸುವಲ್ಲಿ ಸರ್ಕಾರ ವಿಫಲವಾಗಿದೆ. ಅಮಾನತು ಆದೇಶಕ್ಕೆ ತಡೆ ನೀಡಲು ಡಿಸೆಂಬರ್ 1ರಂದು ನ್ಯಾಯಾಧೀಕರಣ ನಿರಾಕರಿಸಿದೆ. ಆದ್ದರಿಂದ ಸರ್ಕಾರದ ಆದೇಶದ ಅನ್ವಯ ಮುಂದಿನ ಯಾವುದೇ ಪ್ರಕ್ರಿಯೆ ಕೈಗೊಳ್ಳದಂತೆ ಮಧ್ಯಂತರ ತಡೆಯಾಜ್ಞೆ ನೀಡಬೇಕು ಎಂದು ಅರ್ಜಿದಾರರು ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಮತದಾರರ ಮಾಹಿತಿ ಕಳವು ಆರೋಪದಲ್ಲಿ ಅಮಾನತು: ಹೈಕೋರ್ಟ್ ಮೆಟ್ಟಿಲೇರಿದ ಜಿಲ್ಲಾಧಿಕಾರಿ