ಬೆಂಗಳೂರು : ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ವ್ಯಕ್ತಿಯೊಬ್ಬ ತನ್ನ ಹೆಂಡತಿಯ ಪ್ರಿಯಕರನಾದ ಗಾರೆ ಮೇಸ್ತ್ರಿಯನ್ನು ದೊಣ್ಣೆಯಿಂದ ಬಡಿದು ಕೊಲೆಗೈದ ಘಟನೆ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಬೇಗಿಹಳ್ಳಿಯಲ್ಲಿ ನಡೆದಿದೆ. ಬೆಂಗಳೂರು-ಬನ್ನೇರುಘಟ್ಟ ಮುಖ್ಯರಸ್ತೆಯ ವೀವರ್ಸ್ ಕಾಲೋನಿ ನಿವಾಸಿ ದಿಲೀಪ್(27) ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ.
ರಾಯಚೂರು ಮೂಲದ ಮಹಿಳೆ ಮತ್ತು ಗಂಡ ಹೊನ್ನಪ್ಪ ಬೇಗಿಹಳ್ಳಿಯ ಬಡಾವಣೆಯೊಂದರಲ್ಲಿ ದಿಲೀಪ್ ಎಂಬಾತನ ಬಳಿ ಗಾರೆ ಕೆಲಸ ಮಾಡುತ್ತಿದ್ದರು. ಈ ನಡುವೆ ಮಹಿಳೆಯು ದಿಲೀಪನ ಪ್ರೀತಿಯ ಬಲೆಗೆ ಬಿದ್ದಿದ್ದರು. ಆಗಾಗ್ಗೆ ಕೆಲಸ ಮಾಡುವ ಸಂದರ್ಭದಲ್ಲಿ ಬೇಕೆಂತಲೇ ಗಂಡನನ್ನು ಬೇರೆ ಕಟ್ಟಡ ಕಾಮಗಾರಿಗೆ ಕಳುಹಿಸಿ ರೇಣುಕಾಳನ್ನು ತನ್ನ ಬಳಿಯೇ ಕೆಲಸಕ್ಕೆ ಇರಿಸಿಕೊಳ್ಳುತ್ತಿದ್ದನಂತೆ. ಇದರಿಂದ ಗಂಡನಿಗೆ ಸಂಶಯ ಮೂಡಿದೆ. ಗುರುವಾರ ಕೂಡ ಇದೇ ಘಟನೆ ಪುನರಾವರ್ತನೆಯಾಗಿದೆ. ನೀರು ಕುಡಿಯುವ ನೆಪದಲ್ಲಿ ಕೆಲಸದ ಜಾಗಕ್ಕೆ ಬಂದಾಗ ಹೆಂಡತಿ ಮತ್ತು ಮೇಸ್ತ್ರಿ ಕಂಡುಬರಲಿಲ್ಲ. ಮನೆಯ ಮೇಲಂತಸ್ತಿನಲ್ಲಿ ಹೆಂಡತಿ ಮತ್ತು ಮೇಸ್ತ್ರಿ ಸಿಕ್ಕಿಬಿದ್ದಿದ್ದರು. ಕೋಪದಲ್ಲಿದ್ದ ಹೊನ್ನಪ್ಪ ದೊಣ್ಣೆಯಿಂದ ಹಲವು ಬಾರಿ ದಿಲೀಪ್ನ ತಲೆಗೆ ಹೊಡೆದಿದ್ದಾನೆ.
ಪರಿಣಾಮ, ತಲೆ ಸೀಳಿ ತೀವ್ರವಾಗಿ ದಿಲೀಪ್ ಗಾಯಗೊಂಡಿದ್ದಾನೆ. ಸ್ಥಳೀಯರು 112 ಸಂಖ್ಯೆಗೆ ಕರೆ ಮಾಡಿ ಆಸ್ಪತ್ರೆಗೆ ಸಾಗಿಸುವಾಗ ತೀವ್ರ ರಕ್ತಸ್ರಾವದಿಂದ ಆತ ಮೃತಪಟ್ಟಿದ್ದಾನೆ. ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ್ದ ಬನ್ನೇರುಘಟ್ಟ ಪೊಲೀಸರು ಹೊನ್ನಪ್ಪನನ್ನು ಬಂಧಿಸಿದ್ದಾರೆ. ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಅವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಸೇನೆ ಸೇರ್ಪಡೆ ವಿಳಂಬ, ಯುವಕ ಆತ್ಮಹತ್ಯೆ : ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಬೇಕೆಂಬ ಕನಸು ನನಸಾಗದೆ ಯುವಕನೋರ್ವ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ನಡೆದಿದೆ. ಅಪ್ಪಾಸೋ ಶಿವಾಜಿ ಪಣದೆ (24) ಮೃತ ಯುವಕ. ಆ.16 ರಂದು ಬುಧವಾರ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಹಲವು ಬಾರಿ ಸೇನೆ ಸೇರಬೇಕೆಂದು ಪರೀಕ್ಷೆ ಬರೆದರೂ ಉತ್ತೀರ್ಣನಾಗದೇ ಇರುವುದರಿಂದ ಯುವಕ ನೊಂದು ಕಳೆದ 2 ವರ್ಷಗಳಿಂದ ಮಹಾರಾಷ್ಟ್ರದ ಖಾಸಗಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ. ಹಾಗೂ ಸೇನೆ ಸೇರ್ಪಡೆ, ಪೊಲೀಸ್ ಇಲಾಖೆಗೆ ಸಂಬಂಧಿಸಿದ ಪರೀಕ್ಷೆಗಳನ್ನು ಹಲವು ಬಾರಿ ಬರೆದಿದ್ದನು. ಪ್ರಯತ್ನ ಫಲ ಕೊಡದೆ ಸೇನೆ ಸೇರ್ಪಡೆಯಾಗುವ ಕನಸೂ ಈಡೇರಲಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೂಡ್ಸ್ ವಾಹನ ಡಿಕ್ಕಿ, ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಸಾವು : ಇತ್ತೀಚಿಗೆ ಮನೆ ಪಾಠ ಮುಗಿಸಿ ಮನೆಗೆ ವಾಪಸ್ ಹೋಗುತ್ತಿದ್ದ ಮಕ್ಕಳಿಗೆ ಗೂಡ್ಸ್ ವಾಹನ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ಮತ್ತೋರ್ವ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮೃತಪಟ್ಟಿದ್ದಾನೆ.
ಸುಚಿತ್ (10) ಮೃತ ಬಾಲಕ ಎನ್ನಲಾಗಿದ್ದು, ಕಳೆದ ವಾರ ರಾಮನಗರ ತಾಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿ ಟ್ಯೂಷಮ್ ಮುಗಿಸಿ ಮನೆಗೆ ಹೋಗುತ್ತಿದ್ದ ಐವರು ಮಕ್ಕಳಿಗೆ ಗೂಡ್ಸ್ ವಾಹನ ಡಿಕ್ಕಿ ಹೊಡೆದಿತ್ತು. ಇಬ್ಬರು ಮಕ್ಕಳು ಅಪಘಾತದ ದಿನದಂದೇ ಮೃತಪಟ್ಟಿದ್ದರು.
ಗಂಭೀರ ಗಾಯಗೊಂಡಿದ್ದ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಮೂವರಲ್ಲಿ ಓರ್ವ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಮಗುವನ್ನು ಕಳೆದುಕೊಂಡ ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿದೆ. ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ : ಆಹ್ವಾನ ಪತ್ರ ಕೊಡುವ ನೆಪದಲ್ಲಿ ಬಂದ ಅಪರಿಚಿತರು: ದಂಪತಿಗೆ ಚಾಕುವಿನಿಂದ ಇರಿದು ಪರಾರಿ