ಬೆಂಗಳೂರು: ಅವಧಿ ಮೀರಿ ಪಾರ್ಟಿ ಆಯೋಜನೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ವರದಿ ನೀಡುವಂತೆ ತನಿಖಾಧಿಕಾರಿಗಳಿಗೆ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಕೇಳಿದ್ದಾರೆ. ಈವರೆಗಿನ ತನಿಖೆಯ ವರದಿ ನೀಡುವಂತೆ ಮಲ್ಲೇಶ್ವರಂ ಉಪವಿಭಾಗದ ಎಸಿಪಿಗೆ ಕಮಿಷನರ್ ಬಿ. ದಯಾನಂದ್ ಕೇಳಿದ್ದಾರೆ ಎಂಬ ಮಾಹಿತಿ ಇದೆ.
ಕಾಟೇರ ಸಕ್ಸಸ್ ಸೆಲೆಬ್ರೇಶನ್: ಜನವರಿ 3 ರಂದು ಸುಬ್ರಹ್ಮಣ್ಯ ನಗರ ಠಾಣಾ ವ್ಯಾಪ್ತಿಯ ಜೆಟ್ ಲ್ಯಾಗ್ ಪಬ್ನಲ್ಲಿ ಕಾಟೇರ ಸಕ್ಸಸ್ ಸೆಲೆಬ್ರೇಶನ್ ನಡೆದಿತ್ತು. ಡಿಸೆಂಬರ್ ಕೊನೆಗೆ ತೆರೆಕಂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರ ಅಭೂತಪೂರ್ವ ಯಶ ಕಂಡಿದೆ. ಬಾಕ್ಸ್ ಆಫೀಸ್ನಲ್ಲಿ ಕೋಟಿ ಕೋಟಿ ಕಲೆಕ್ಷನ್ ಮಾಡುವ ಮೂಲಕ ಎಲ್ಲರ ಹುಬ್ಬೇರಿಸಿದೆ. 2023ರ ಕೊನೆಗೆ ತೆರೆಕಂಡು, 2024ರ ಆರಂಭದಲ್ಲಿ ಸ್ಯಾಂಡಲ್ವುಡ್ನ ಯಶಸ್ವಿ ಚಿತ್ರವಾಗಿ 'ಕಾಟೇರ' ಹೊರಹೊಮ್ಮಿದೆ. ಸಿನಿಮಾ ಯಶಸ್ಸಿನಲೆಯಲ್ಲಿದ್ದ ಚಿತ್ರತಂಡ ಜನವರಿ 3 ರಂದು (ಬುಧವಾರ) ಸಕ್ಸಸ್ ಸೆಲೆಬ್ರೇಶನ್ ಪಾರ್ಟಿ ಆಯೋಜಿಸಿತ್ತು. ಅವಧಿ ಮುಗಿದ ಬಳಿಕವೂ ಪಾರ್ಟಿ ಮುಂದುವರೆದಿತ್ತು.
ಹಲವರಿಗೆ ನೋಟಿಸ್: ಈ ಹಿನ್ನೆಲೆ ನಿರ್ಲಕ್ಷ್ಯ ಆರೋಪದಡಿ ಜೆಟ್ ಲ್ಯಾಗ್ ರೆಸ್ಟೋ ಬಾರ್ ಮಾಲೀಕರು ಹಾಗೂ ಮ್ಯಾನೇಜರ್ ವಿರುದ್ಧ ಸ್ವಯಂಪ್ರೇರಿತ (ಸುಮೋಟೋ) ಪ್ರಕರಣ ದಾಖಲಿಸಿಕೊಂಡಿದ್ದ ಸುಬ್ರಹ್ಮಣ್ಯ ನಗರ ಠಾಣಾ ಪೊಲೀಸರು ನಟ ದರ್ಶನ್ ತೂಗುದೀಪ, ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ನಟರಾದ ಧನಂಜಯ, ಅಭಿಷೇಕ್ ಅಂಬರೀಶ್, ನೀನಾಸಂ ಸತೀಶ್, ಚಿಕ್ಕಣ್ಣ, ನಿರ್ದೇಶಕ ತರುಣ್ ಸುಧೀರ್ ಸೇರಿದಂತೆ ಮತ್ತಿತರರಿಗೆ ನೋಟಿಸ್ ನೀಡಿದ್ದರು.
ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಹೇಳಿದ್ದಿಷ್ಟು: ನೋಟಿಸ್ ಪಡೆದವರು ಶುಕ್ರವಾರ ಮಧ್ಯಾಹ್ನ ಒಟ್ಟಾಗಿ ಬಂದು ಪೊಲೀಸರ ವಿಚಾರಣೆ ಎದುರಿಸಿದ್ದರು. ಬಳಿಕ ಮಾತನಾಡಿದ್ದ ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ''ಪಬ್ ಮುಚ್ಚುವ ಸಂದರ್ಭದಲ್ಲಿ ಮನವಿ ಮಾಡಿಕೊಂಡು ಊಟದ ವ್ಯವಸ್ಥೆ ಮಾಡಿದ್ದು ನಿಜ. ಆದರೆ, ಮದ್ಯಪಾನ ಮಾಡಿರಲಿಲ್ಲ. ಅಲ್ಲದೇ ಪೊಲೀಸರು ಸಹ ಬಂದು ನಮ್ಮ ಬಳಿ ಪಬ್ ಮುಚ್ಚುವಂತೆ ಯಾವುದೇ ಸೂಚನೆ ನೀಡಿರಲಿಲ್ಲ'' ಎಂದಿದ್ದರು.
ಇದನ್ನೂ ಓದಿ: ಅವಧಿ ಮೀರಿ ಪಬ್ನಲ್ಲಿ ಪಾರ್ಟಿ ಆರೋಪ: ದರ್ಶನ್ ಸೇರಿ ಎಂಟು ಮಂದಿ ವಿಚಾರಣೆ ನಡೆಸಿದ ಪೊಲೀಸರು
ಇದೆಲ್ಲದರ ಮಾಹಿತಿ ಪಡೆದಿರುವ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್, ಪ್ರಕರಣದ ವಿಚಾರವಾಗಿ ಇದುವರೆಗಿನ ವಿಚಾರಣೆಯ ಮಾಹಿತಿ, ಪಾರ್ಟಿ ನಡೆದ ದಿನ ಪಬ್ ಬಳಿ ಪೊಲೀಸ್ ಸಿಬ್ಬಂದಿ ಎಷ್ಟು ಗಂಟೆಗೆ ಹೋಗಿದ್ದರು? ಮತ್ತಿತರ ಮಾಹಿತಿ ನೀಡುವಂತೆ ತನಿಖಾಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ರಾಮ್ ಚರಣ್ - ಉಪಾಸನಾ: ಸಂಕ್ರಾಂತಿ ಸಂಭ್ರಮದಲ್ಲಿ ತಾರಾ ಕುಟುಂಬ