ಬೆಂಗಳೂರು: ತಡರಾತ್ರಿ ಎರಡು ಗುಂಪಿನ ರೌಡಿಗಳ ನಡುವೆ ನಡೆಯಬೇಕಿದ್ದ ಗ್ಯಾಂಗ್ವಾರ್ ಅನ್ನು ಸಿಸಿಬಿ ಪೊಲೀಸರು ತಡೆದಿದ್ದಾರೆ. ಹಳೆ ದ್ವೇಷದ ಹಿನ್ನೆಲೆ ಎದುರಾಳಿ ಗುಂಪಿನವರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ ನಾಲ್ವರು ರೌಡಿಶೀಟರ್ಗಳು ಸೇರಿದಂತೆ 11 ಆರೋಪಿಗಳನ್ನು ಸಿಸಿಬಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಹರೀಶ್, ವೆಂಕಟೇಶ್, ಕಿರಣ್ ಗೌಡ, ವಿಶ್ವನಾಥ್ ಭಂಡಾರಿ, ಸತೀಶ್, ಹೇಮಂತ್, ಗಣೇಶ್ ಟಿ, ಗಣೇಶ್ ಎನ್, ವಿನೋದ್, ಕಿರಣ್ ಕುಮಾರ್ ಹಾಗೂ ಅಣ್ಣಾಮಲೈ ಬಂಧಿತರು. ಬಂಧಿತರಿಂದ 18 ಲಾಂಗ್, ಎರಡು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆನೇಕಲ್ ಹರೀಶ್, ಸರ್ಜಾಪುರದ ವೆಂಕಟೇಶ್, ಮಂಗಳೂರಿನ ಕಿರಣ್ ಗೌಡ, ಉಲ್ಲಾಳದ ವಿಶ್ವನಾಥ ಭಂಡಾರಿ ಬಂಧಿತ ರೌಡಿಶೀಟರ್ಗಳಾಗಿದ್ದಾರೆ.
ಮಾರತ್ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹಾರಿಜಾನ್ ರಸ್ತೆಯಲ್ಲಿ ಎರಡು ಕಾರಿನಲ್ಲಿ ಮಾರಕಾಸ್ತ್ರಗಳನ್ನು ಇಟ್ಟುಕೊಂಡು, ರಸ್ತೆಯಲ್ಲಿ ಓಡಾಡುವ ಶ್ರೀಮಂತರನ್ನು ಗುರುತಿಸಿಕೊಂಡು ಹಲ್ಲೆ ಮಾಡಿ ದರೋಡೆ ಹಾಗೂ ವಿರೋಧಿ ಗುಂಪಿನ ಮೇಲೆ ಸವಾರಿ ಮಾಡಲು ಸಂಚು ರೂಪಿಸಿದ್ದರು. ಖಚಿತ ಮಾಹಿತಿ ಪಡೆದ ಸಿಸಿಬಿ ಸಂಘಟಿತ ಅಪರಾಧ ದಳದ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿ 11 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗ್ಯಾಂಗ್ ವಾರ್ ಮಾಸ್ಟರ್ ಮೈಂಡ್ ಆಗಿದ್ದ ನಾಪತ್ತೆಯಾಗಿರುವ ರೋಹಿತ್ ಹಾಗೂ ಕಾಡುಬೀಸನಹಳ್ಳಿ ಸೋಮು ಗ್ಯಾಂಗ್ ನೊಂದಿಗೆ ವೈರತ್ವ ಬೆಳೆಸಿಕೊಂಡಿದ್ದ. ಎರಡು ಗುಂಪುಗಳು ತೆರೆಮರೆಯಲ್ಲೇ ಕತ್ತಿ ಮಸೆಯುತ್ತಿದ್ದವು. ಏರಿಯಾದಲ್ಲಿ ಸೋಮು ರೌಡಿ ಚಟುವಟಿಕೆ ಹೆಚ್ಚಾಗಿದ್ದನ್ನು ಸಹಿಸದ ರೋಹಿತ್, ಸೋಮು ಹಾಗೂ ಆತನ ಸಹಚರರನ್ನು ಮುಗಿಸಲು ಒಳಸಂಚು ರೂಪಿಸಿದ್ದ. ಅದಕ್ಕಾಗಿಯೇ ಮಂಗಳೂರು ಮೂಲದ ಇಬ್ಬರು ರೌಡಿಶೀಟರ್ ಗಳಾದ ಕಿರಣ್ ಗೌಡ ಹಾಗೂ ವಿಶ್ವನಾಥ್ ನನ್ನು ಬೆಂಗಳೂರಿಗೆ ಕಳೆದ 20 ದಿನಗಳ ಹಿಂದೆ ಕರಿಯಮ್ಮನ ಅಗ್ರಹಾರದಲ್ಲಿ ಇರಿಸಿಕೊಂಡಿದ್ದ.
20 ದಿನಗಳಿಂದ ಕಾಡುಬಿಸನಹಳ್ಳಿ ಸೋಮ ಆ್ಯಂಡ್ ಟೀಂ ಚಲನವಲನವನ್ನು ಈ ಗ್ಯಾಂಗ್ ವಾಚ್ ಮಾಡುತಿತ್ತು. ಅದೇ ರೀತಿ ಮಂಗಳವಾರ ರಾತ್ರಿ ವಿರೋಧಿ ಗುಂಪಿನ ಸದಸ್ಯರನ್ನು ಮುಗಿಸಲು ಸಂಚು ರೂಪಿಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿಗಳ ವಿರುದ್ಧ ಮಾರತ್ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಕ್ಷಮೆ ಯಾಚಿಸಿದ ನಿರ್ದೇಶಕ ನಂದಕಿಶೋರ್ : 'ಪೊಗರು' ವಿವಾದಿತ ದೃಶ್ಯಕ್ಕೆ ಕತ್ತರಿ ಹಾಕುವ ಭರವಸೆ