ಬೆಂಗಳೂರು: ಕರ್ನಾಟಕ ಸರ್ಕಾರದ ಶಕ್ತಿ ಯೋಜನೆ ವಿರುದ್ಧ ಅಸಮಾಧಾನ, ಖಾಸಗಿ ವಾಹನ ಚಾಲಕರಿಗೆ ಮಾಸಿಕ 10 ಸಾವಿರ ರೂಪಾಯಿ ಧನಸಹಾಯ, ರಸ್ತೆ ತೆರಿಗೆ ರದ್ದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟವು ಬೆಂಗಳೂರಿನಲ್ಲಿ ಇಂದು ಖಾಸಗಿ ಸಾರಿಗೆ ಬಂದ್‌ಗೆ ಕರೆ ನೀಡಿದೆ. ಭಾನುವಾರ ಮಧ್ಯರಾತ್ರಿಯಿಂದ ಸೋಮವಾರ ರಾತ್ರಿ 12ರವರೆಗೆ ಖಾಸಗಿ ವಾಹನಗಳ ಸಂಚಾರ ಸ್ಥಗಿತಗೊಳಿಸಿ ಬಂದ್‌ಗೆ ಒಕ್ಕೂಟ ನಿರ್ಧರಿಸಿದೆ. ಇದರಿಂದ ಸಾರ್ವಜನಿಕರ ಸಂಚಾರಕ್ಕೆ ಅಡಚಣೆಯಾಗಿದೆ.
ಬೆಂಗಳೂರು ನಗರದಲ್ಲಿ ಸುಮಾರು 4 ಲಕ್ಷ ಆಟೋ, 2 ಲಕ್ಷ ಟ್ಯಾಕ್ಸಿ, 30 ಸಾವಿರ ಗೂಡ್ಸ್ ವಾಹನಗಳು, 8 ಸಾವಿರಕ್ಕೂ ಹೆಚ್ಚು ಖಾಸಗಿ ಶಾಲಾ ವಾಹನಗಳು, 90 ಸಾವಿರ ಸಿಟಿ ಟ್ಯಾಕ್ಸಿ, ಕಾರ್ಪೊರೇಟ್ ಕಂಪನಿ ಬಸ್‌ಗಳು ಸಂಚಾರ ನಿಲ್ಲಿಸಲಿವೆ. ಓಲಾ, ಉಬರ್ ಆಟೋ ಟ್ಯಾಕ್ಸಿ ಸಹ ಬಂದ್ ಆಗಲಿವೆ. ಕಾರ್ಪೊರೇಟ್ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿರುವ ಬಸ್‍ಗಳು ಕೂಡ ಮುಷ್ಕರಕ್ಕೆ ಬೆಂಬಲ ಸೂಚಿಸಿವೆ.
ಏನೆಲ್ಲಾ ಬಂದ್?: ಖಾಸಗಿ ವಾಹನಗಳು ಸಾರ್ವಜನಿಕರಿಗೆ ಸಂಪೂರ್ಣವಾಗಿ ಅಲಭ್ಯ. ಆಟೋ, ಟ್ಯಾಕ್ಸಿ, ಕ್ಯಾಬ್, ಖಾಸಗಿ ಬಸ್, ಗೂಡ್ಸ್ ವಾಹನ, ಶಾಲಾ ವಾಹನಗಳು ಸೇರಿ ಎಲ್ಲ ಖಾಸಗಿ ವಾಹನಗಳ ಸಂಚಾರವೂ ಸ್ತಬ್ಧವಾಗಲಿದೆ.
ಈ ಸೇವೆಗಳು ಲಭ್ಯ: ಕೆಎಸ್ಆರ್ಟಿಸಿ, ಬಿಎಂಟಿಸಿ, ನಮ್ಮ ಮೆಟ್ರೋ ಸಂಚಾರದಲ್ಲಿ ಯಾವುದೇ ಅಡಚಣೆ ಇಲ್ಲ. ಈ ಸಂಚಾರ ಸೇವೆಗಳು ಎಂದಿನಂತೆ ಸಾರ್ವಜನಿಕರಿಗೆ ಲಭ್ಯವಾಗಿವೆ. ಬಿಎಂಟಿಸಿ 500 ಹೆಚ್ಚುವರಿ ಬಸ್‌ಗಳನ್ನು ಓಡಿಸುತ್ತಿದೆ.
ಅಂಗಡಿ-ಮುಂಗಟ್ಟು ಓಪನ್: ಅಂಗಡಿ-ಮುಂಗಟ್ಟುಗಳು, ತರಕಾರಿ ಮಾರುಕಟ್ಟೆ, ಮೆಡಿಕಲ್ ಶಾಪ್ ಮತ್ತು ಆಸ್ಪತ್ರೆಗಳು ಓಪನ್ ಇರಲಿವೆ.
ಶಾಲೆಗಳಿಗೆ ರಜೆ?: ಸರ್ಕಾರಿ ಶಾಲೆಗಳಿಗೆ ರಜೆ ಘೋಷಣೆ ವಿಚಾರವನ್ನು ಜಿಲ್ಲಾಧಿಕಾರಿಗೆ ಬಿಡಲಾಗಿದೆ. ನಗರದಲ್ಲಿ ಕೆಲವು ಖಾಸಗಿ ಶಾಲಾ ಕಾಲೇಜುಗಳು ತಮ್ಮದೇ ವಾಹನ ವ್ಯವಸ್ಥೆ ಹೊಂದಿವೆ. ಇನ್ನು ಹಲವು ಶಾಲಾ ಕಾಲೇಜುಗಳು ಖಾಸಗಿ ವಾಹನ ಸಂಚಾರದ ಮೇಲೆ ಅವಲಂಬಿಸಿವೆ. ಆದ್ದರಿಂದ ಇಂದು ರಜೆ ಘೋಷಿಸುವ ನಿರ್ಧಾರವನ್ನು ಶಿಕ್ಷಣ ಸಂಸ್ಥೆಗಳು ಮಾಡಿವೆ. ಅಂತೆಯೇ ಕೆಲ ಶಾಲೆಗಳು ರಜೆ ಘೋಷಣೆ ಮಾಡಿ ಈಗಾಗಲೇ ಸಂದೇಶ ರವಾನಿಸಿವೆ.
ಕಚೇರಿಗಳು ಓಪನ್: ಎಂದಿನಂತೆ ಎಲ್ಲ ಕಚೇರಿಗಳು ತೆರೆದಿರಲಿವೆ. ಐಟಿ ಸೇರಿದಂತೆ ಖಾಸಗಿ ಸಂಸ್ಥೆಗಳು ಕೂಡ ಕಾರ್ಯನಿರ್ವಹಿಸುತ್ತವೆ.
ಇದನ್ನೂ ಓದಿ: ನಾಳೆ ಬೆಂಗಳೂರು ಬಂದ್.. ಇಂದು ಮಧ್ಯರಾತ್ರಿಯಿಂದ BMTC ಹೆಚ್ಚುವರಿ ಬಸ್ ಸೇವೆ