ಬೆಂಗಳೂರು: ಹಳೇ ದ್ವೇಷಕ್ಕೆ ವ್ಯಕ್ತಿವೋರ್ವ ತನ್ನ ಆಟೋ ಚಾಲಕ ಸ್ನೇಹಿತನೇ ಮಾರಕಾಸ್ತ್ರದಿಂದ ಇರಿದು ಹತ್ಯೆಗೈದಿರುವ ಘಟನೆ ಬೈಯಪ್ಪನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ನಡೆದಿದೆ. ಕೃತ್ಯ ನಡೆದ 15 ನಿಮಿಷದಲ್ಲೇ ಪೊಲೀಸರು ಆರೋಪಿಯನ್ನು ಬೆನ್ನಟ್ಟಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸುದ್ದುಗುಂಟೆಪಾಳ್ಯ ನಿವಾಸಿ ಸಂತೋಷ್ ಮೃತ ಆಟೋ ಚಾಲಕ. ಕೃಷ್ಣಪ್ಪ ಗಾರ್ಡನ್ ನಿವಾಸಿ ಆನಂದ್ (26) ಬಂಧಿತನಾಗಿದ್ದು, ಆರೋಪಿಯನ್ನು ವಿಚಾರಣೆಗೊಳಪಡಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಆಟೋ ಚಾಲಕ ಸಂತೋಷ್ ವಿರುದ್ಧ ಮಹದೇವಪುರ ಠಾಣೆಯಲ್ಲಿ ರೌಡಿಪಟ್ಟಿ ಇದ್ದು, ಹಲವು ವರ್ಷಗಳಿಂದ ಆಟೋ ಚಾಲನೆ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಮೂರು ವರ್ಷಗಳ ಹಿಂದೆ ಸಂತೋಷ್ ಮದುವೆಯಾಗಿದ್ದು, ಸುದ್ದುಗುಂಟೆ ಪಾಳ್ಯದಲ್ಲಿ ದಂಪತಿ ವಾಸವಾಗಿದ್ದರು. ಆರೋಪಿ ಆನಂದ್ ಕೂಡ ಆಟೋ ಚಾಲಕನಾಗಿದ್ದು, ಸಂತೋಷ್‌ನ ಸ್ನೇಹಿತನಾಗಿದ್ದಾನೆ. ಕೆಲ ದಿನಗಳ ಹಿಂದೆ ಆಟೋ ಪಾರ್ಕಿಂಗ್ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿತ್ತು. ಆಗ ಸಂತೋಷ್, ಆನಂದ್ ಮೇಲೆ ಹಲ್ಲೆ ನಡೆಸಿದ್ದ. ಅದರಿಂದ ಆಕ್ರೋಶಗೊಂಡಿದ್ದ ಆನಂದ್ ಆತನ ವಿರುದ್ಧ ದ್ವೇಷ ಸಾಧಿಸುತ್ತಿದ್ದರು. ಶನಿವಾರ ಸಂಜೆ ಮದ್ಯ ಸೇವಿಸಿ ಸಂತೋಷ್‌ಗೆ ಕರೆ ಮಾಡಿದ ಆನಂದ್, ಮತ್ತೊಮ್ಮೆ ವಾಗ್ವಾದ ನಡೆಸಿದ್ದರು. ಅಲ್ಲದೆ, ಎಲ್ಲಿರುವೆ ಅಲ್ಲಿಗೆ ಬಂದು ಮಾತನಾಡುತ್ತೇನೆ ಎಂದು ಖಚಿತ ಪಡಿಸಿಕೊಂಡು, ಸಂಜೆ ಏಳು ಗಂಟೆ ಸುಮಾರಿಗೆ ಸಂತೋಷ್ ಮನೆಗೆ ನುಗ್ಗಿ ಚಾಕುವಿನಿಂದ ಇರಿದಿದ್ದಾನೆ.
ತೀವ್ರ ರಕ್ತಸ್ರಾವವಾಗಿ ಗಾಯಾಳು ಕೆಳಗೆ ಬಿದ್ದಿದ್ದು, ಸಂತೋಷ್‌ನ ಚೀರಾಟದ ಶಬ್ಧ ಕೇಳಿ ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಸಾರ್ವಜನಿಕರನ್ನು ಕಂಡ ಆರೋಪಿ ಸ್ಥಳದಿಂದ ಪರಾರಿಯಾಗುತ್ತಿದ್ದ. ಆದರೂ ಕೆಲವರು ಆರೋಪಿಯನ್ನು ಬೆನ್ನಟ್ಟಿದ್ದರು ಎಂದು ಪೊಲೀಸರು ಹೇಳಿದರು.
ಅದೇ ವೇಳೆ ಗಸ್ತು ತಿರುಗುತ್ತಿದ್ದ ಬೈಯಪ್ಪನಹಳ್ಳಿ ಠಾಣೆ ಇನ್‌ಸ್ಪೆಕ್ಟರ್ ಹಾಗೂ ಸಿಬ್ಬಂದಿ, ನೂರಾರು ಮಂದಿ ಜಮಾಯಿಸಿದ್ದನ್ನು ಗಮನಿಸಿ ಸ್ಥಳಕ್ಕೆ ಆಗಮಿಸಿದ್ದಾರೆ. ಬಳಿಕ ಸ್ಥಳೀಯರಿಂದ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಈ ಮಧ್ಯೆ ಪೊಲೀಸರು ಗಸ್ತು ತಿರುಗುತ್ತಿದ್ದ ಮಾರ್ಗದಲ್ಲೇ ಆರೋಪಿ ಓಡಿ ಹೋಗುತ್ತಿದ್ದನ್ನು ಗಮನಿಸಿದ ಸಿಬ್ಬಂದಿಯೊಬ್ಬರು ಇನ್‌ಸ್ಪೆಕ್ಟರ್‌ಗೆ ಮಾಹಿತಿ ನೀಡಿದರು. ಕೂಡಲೇ ಆರೋಪಿಯನ್ನು ಬೆನ್ನಟ್ಟಿದ್ದ ಇನ್‌ಸ್ಪೆಕ್ಟರ್ ನೇತೃತ್ವದ ತಂಡ, ಘಟನೆ ನಡೆದ 15 ನಿಮಿಷದಲ್ಲೇ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಘಟನೆ ನಡೆದ ವೇಳೆ ಸಂತೋಷ್ ಮನೆಯಲ್ಲಿ ಪತ್ನಿ ಇರಲಿಲ್ಲ. ಆಕೆಗೂ ಮಾಹಿತಿ ನೀಡಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು. ಈ ಬಗ್ಗೆ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.