ಬೆಂಗಳೂರು: ಸಾಲಗಾರರ ಕಾಟಕ್ಕೆ ಬೇಸತ್ತ ವ್ಯಕ್ತಿ ತನ್ನ ಹೆಂಡತಿ ಮತ್ತು ಮಗನಿಗೇ ನೇಣು ಬಿಗಿದು ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ಕೊಲೆ ಮಾಡಲು ಕಾರಣ ಏನು : ಬೆಂಗಳೂರಿನ ಹೆಚ್ಎಎಲ್‌ನ ವಿಭೂತಿಪುರದಲ್ಲಿ ಈ ಘಟನೆ ನಡೆದಿದೆ. ಸಾಲಗಾರರ ಕಾಟ ತಾಳಲಾರದೇ ಪತ್ನಿ ಗೀತಾಬಾಯಿ, ಹಾಗೂ ಮಗ ವರುಣರಾವ್ ಎಂಬುವರಿಗೆ ಸುರೇಶ್ ಎಂಬ ಕ್ರೂರಿ ನೇಣು ಹಾಕಿದ್ದಾನೆ. ಮತ್ತೊಂದು ಆಘಾತಕಾರಿ ಏನಂದ್ರೇ, ತನ್ನ ತಂದೆಯೇ ತಾಯಿ ಮತ್ತು ಸೋದರನಿಗೆ ನೇಣು ಹಾಕುತ್ತಿರುವಾಗ ಹಿರಿಯ ಮಗಳು ಮೊಬೈಲ್ನಲ್ಲಿ ಈ ಎಲ್ಲ ದೃಶ್ಯವನ್ನೂ ಸೆರೆಯಿಡಿದಿದ್ದಾಳೆ. ಇದೇ ದೃಶ್ಯ ಈಟಿವಿ ಭಾರತ್‌ಗೆ ಲಭ್ಯವಾಗಿದೆ.
ಹೆಚ್ಎಎಲ್‌ನ ವಿಭೂತಿಪುರದ ನಿವಾಸಿಗಳಾದ ಗೀತಾಬಾಯಿ ಹಾಗೂ ಸುರೇಶ್ ಎಂಬ ದಂಪತಿ ತಮ್ಮ ಮಗನ ಜೊತೆ ವಾಸವಿದ್ದರು. ಸುರೇಶ್ ಸ್ವೀಗಿ ಡೆಲಿವರಿ ನೌಕರನಾಗಿ ಕೆಲಸ ಮಾಡುತ್ತಿದ್ದ. ಗೀತಾ ಖಾಸಗಿ ಕಂಪೆನಿಯಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡಿ ಜೀವನ ನಡೆಸುತ್ತಿದ್ದರು.
ವಿಭೂತಿಪುರದ ಫೈನಾನ್ಸಿಯರ್ ಸುಧಾ ಎಂಬುವರ ಬಳಿ ಎರಡು ವರ್ಷಗಳ ಹಿಂದೆ ನಲವತ್ತು ಸಾವಿರ ಸಾಲ ಪಡೆದು ಅದಕ್ಕೆ ಬಡ್ಡಿ ಸಮೇತ ಸಾಲವನ್ನೂ ತೀರಿಸಿದ್ರು. ಆದರೂ ಕೂಡ ಪ್ರತಿ ಬಾರಿ ಸುಧಾ ಕಡೆಯವರು ಹಣ ಕೇಳಿ ಪೀಡಿಸುತ್ತಿದ್ದರಂತೆ. ಕಳೆದ ನಾಲ್ಕು ದಿನಗಳ ಹಿಂದೆ ಸುಧಾ ಕಡೆಯವರು ಮನೆ ಬಳಿ ಬಂದು ಗೀತಾಬಾಯಿಯನ್ನು ಸಾರ್ವಜನಿಕರ ಮುಂದೆ ಹಲ್ಲೆ ಮಾಡಿ ಹೋಗಿದ್ದರಂತೆ. ಇದರಿಂದ ನಿನ್ನೆ ಗೀತಾಬಾಯಿ ಪತಿ ಸುರೇಶ್ ಮನೆಯಲ್ಲಿಯೇ ಪ್ಲಾನ್ ಮಾಡಿ ಎಲ್ಲರನ್ನೂ ಸಾಯಿಸಿ ತಾನೂ ಆತ್ಮಹತ್ಯೆ ಮಾಡಿಕೊಳ್ಳುವ ಪ್ಲಾನ್ ಮಾಡಿದ್ದರಂತೆ.
ಹೆಂಡತಿ ಮತ್ತು ಮಗನನ್ನು ಕೊಲೆ ಮಾಡಿದ ಬಳಿಕ ತನ್ನ ಮಗಳನ್ನು ಕೊಲೆ ಮಾಡುವ ಪ್ರಯತ್ನಕ್ಕೆ ಇಳಿದಿದ್ದ, ಈ ವಿಷಯ ತಿಳಿಯುತ್ತಿದ್ದಂತೆ ಅಕ್ಕಪಕ್ಕದವರು ಬಂದು ಸುರೇಶ್ ಮಗಳನ್ನು ರಕ್ಷಿಸಿದ್ದಾರೆ. ಈ ಘಟನೆ ಸಂಬಂಧ ಹೆಚ್‌ಎಎಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಸುರೇಶ್ನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.