ಬೆಂಗಳೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನವಿರೋಧಿ ಆಡಳಿತ ನಡೆಸುತ್ತಿವೆ. ನೆರೆ ಪರಿಹಾರ ವಿತರಣೆ ಸಮರ್ಪಕವಾಗಿ ಆಗಿಲ್ಲ. ದೇಶದ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಜನರ ಸಮಸ್ಯೆಗೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ ನೇತೃತ್ವದಲ್ಲಿ ಪ್ರತಿಭಟನಾ ಸಭೆ ಹಾಗೂ ರಾಜಭವನ ಮುತ್ತಿಗೆ ಹಮ್ಮಿಕೊಳ್ಳಲಾಗಿತ್ತು. ಮೌರ್ಯ ವೃತ್ತದಿಂದ ರಾಜಭವನ ಮುತ್ತಿಗೆ ಹಾಕಲು ಹೊರಟ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ.
ನೂರಾರು ಸಂಖ್ಯೆಯಲ್ಲಿ ತೆರಳುತ್ತಿದ್ದ ಕಾರ್ಯಕರ್ತರನ್ನು ರೇಸ್ ವ್ಯೂ ಹೋಟೆಲ್ ಮುಂಭಾಗ ಪೊಲೀಸರು ಬಂಧಿಸಿ ಕರೆದೊಯ್ದರು. ಯುವ ಕಾಂಗ್ರೆಸ್ ಘಟಕದ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್, ಯುವ ಕಾಂಗ್ರೆಸ್ ರಾಜ್ಯ ಅಧ್ಯಕ್ಷ ಬಸನಗೌಡ ಬಾದರ್ಲಿ ಮತ್ತಿತರ ನಾಯಕರನ್ನು ಬಂಧಿಸಲಾಯಿತು.
ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಮಾತನಾಡಿ, ರಾಜ್ಯಕ್ಕೆ ಮೊದಲ ಬಾರಿಗೆ ಯುವ ಕಾಂಗ್ರೆಸ್ ಘಟಕದ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ಸಿಕ್ಕಿದೆ. ರಾಜ್ಯದ ಬಿ.ವಿ.ಶ್ರೀನಿವಾಸ ಇದೀಗ ರಾಷ್ಟ್ರೀಯ ಯುವ ಕಾಂಗ್ರೆಸ್ನ ಅಧ್ಯಕ್ಷರಾಗಿದ್ದಾರೆ. ಅವರಿಗೆ ಅಭಿನಂದನೆಗಳು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನೀತಿಗಳನ್ನ ನಾವು ಖಂಡಿಸಬೇಕಿದೆ. ಬಿಜೆಪಿ ಸುಳ್ಳು ಪ್ರಚಾರ ಮಾಡ್ತಿದೆ. ಕಾಂಗ್ರೆಸ್ ನಾಯಕರ ತೇಜೋವಧೆ ಮಾಡುವ ಕೆಲಸ ನಡೆದಿದೆ. ಇದು ಆಘಾತಕಾರಿ. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಪಕ್ಷದ ಬಗ್ಗೆ ಅಪಪ್ರಚಾರ ಮಾಡಲಾಗ್ತಿದೆ. ಬಿಜೆಪಿಯವರು ಬ್ರೈನ್ ವಾಶ್ ಮಾಡ್ತಿದ್ದಾರೆ. ಕಾಂಗ್ರೆಸ್ನವರನ್ನೇ ಎತ್ತಿಕಟ್ಟುವ ಕೆಲಸ ಮಾಡ್ತಿದ್ದಾರೆ. 70 ವರ್ಷ ಕಾಂಗ್ರೆಸ್ ಮಾಡಿದ್ದೇನು ಅಂತಾರೆ. ನೆಹರೂ ದೇಶ ಸರಿಯಾಗಿ ಆಳದಿದ್ದರೆ ನೀವು ಇರ್ತಿರಲಿಲ್ಲ. ನಮ್ಮ ತ್ಯಾಗ ಬಲಿದಾನದಿಂದಲೇ ನೀವು ಅಧಿಕಾರದಲ್ಲಿರುವುದು ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ, ಇತಿಹಾಸ ಅರಿಯದವರು ಇತಿಹಾಸ ಸೃಷ್ಠಿಸಲ್ಲ. ನೆಹರೂ, ರಾಜೀವ್ ಗಾಂಧಿ ಕೊಡುಗೆ ದೇಶದ ಅಭಿವೃದ್ಧಿ. ಎಲ್ಲಾ ರಂಗಗಳಲ್ಲೂ ಅಭಿವೃದ್ಧಿಗೆ ಕಾರಣರಾದವರು. ಉತ್ತರ ಕರ್ನಾಟಕದ ಜನ ಪ್ರವಾಹಕ್ಕೆ ತತ್ತರಿಸಿದ್ದಾರೆ. ಚಂದ್ರಯಾನಕ್ಕೆ ಬಂದ ಪ್ರಧಾನಿ ಮೋದಿ ಅಲ್ಲಿಗೆ ಭೇಟಿ ನೀಡಲಿಲ್ಲ. ಸಂತ್ರಸ್ತರ ಪರವಾಗಿ ಬೆಂಬಲ ವ್ಯಕ್ತಪಡಿಸಲಿಲ್ಲ. ಹೋಗಲಿ ನೆರವನ್ನಾದ್ರೂ ಕೊಟ್ರಾ? ಅದೂ ಇಲ್ಲ. ಉದ್ಯೋಗ ಖಾತ್ರಿ, ಅನ್ನಭಾಗ್ಯ ಕೊಟ್ಟಿದ್ದು ಕಾಂಗ್ರೆಸ್. ಎಲ್ಲಾ ಅಭಿವೃದ್ಧಿಗೆ ಕಾರಣ ಕಾಂಗ್ರೆಸ್. ಕಾಶ್ಮೀರ ಭಾರತಕ್ಕೆ ಸೇರಿಸ್ತೇವೆ ಅಂತ ಹೊಸ ವರಾತು ಶುರು ಮಾಡಿದ್ದಾರೆ. ಈ ಮೂಲಕ ಯುವಕರನ್ನ ದಾರಿ ತಪ್ಪಿಸುತ್ತಿದ್ದಾರೆ ಎಂದು ದೂರಿದರು.
ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ, ಭ್ರಷ್ಟ ಸರ್ಕಾರದ ವಿರುದ್ಧ ನಾವು ಹೋರಾಡಬೇಕಿದೆ. ಬ್ಯಾರಿಕೇಡ್ ಮುಂದೆ ಹೋರಾಡುವ ಛಲ ಬೆಳೆಸಿಕೊಳ್ಳಿ. ರಾಜ್ಯಕ್ಕೆ ನಿರ್ಮಲಾ ಸೀತಾರಾಮನ್ ಬಂದರೆ ಪ್ರತಿಭಟನೆ ನಡೆಸಿ. ರಾಜ್ಯದಿಂದ ಆಯ್ಕೆ ಆಗಿ ಹೋಗಿ ದ್ರೋಹ ಬಗೆದಿದ್ದಾರೆ. ನಮ್ಮ ತಾಳ್ಮೆಯನ್ನ ನೀವು ಪರೀಕ್ಷಿಸಬೇಡಿ. ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡ್ತೇವೆ ಅಂದ್ರು. ಆರು ವರ್ಷಕ್ಕೆ 12 ಕೋಟಿ ಜನರಿಗೆ ಉದ್ಯೋಗ ನೀಡಬೇಕಿತ್ತು. ಆದರೆ ಒಂದು ಲಕ್ಷ ಜನರಿಗೆ ಸಹ ಉದ್ಯೋಗ ನೀಡಿಲ್ಲ. ಹಣಕಾಸು ಸಚಿವರೇ ನಿಮಗೆ ನಾವು ಟ್ಯೂಶನ್ ಕೊಡಿಸ್ತೇವೆ. ಮನಮೋಹನ್ ಸಿಂಗ್ ಅವರಿಂದ ಕೊಡಿಸ್ತೇವೆ. ದಿನಕ್ಕೆ ಅರ್ಧ ಗಂಟೆ ಟ್ಯೂಶನ್ ಪಡೆದುಕೊಳ್ಳಿ ಎಂದರು.