ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳ ಪರಮಾಧಿಕಾರವಾಗಿದ್ದು, ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ. ನಮ್ಮ ಜಿಲ್ಲೆಯಲ್ಲಿ ನನಗಿಂತ ಹಿರಿಯರಿದ್ದಾರೆ. ಯಾರಿಗೆ ಕೊಟ್ಟರೂ ಸಂತೋಷ ಎಂದು ಕಡೂರು ಶಾಸಕ ಬಳ್ಳಿ ಪ್ರಕಾಶ್ ಹೇಳಿದ್ದಾರೆ.
ಸಿಎಂ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಜಿಲ್ಲೆಯಲ್ಲಿ ನನಗಿಂತಲೂ ಹಿರಿಯರಿದ್ದಾರೆ. ಮೂಡಿಗೆರೆ ಶಾಸಕ ಎಂ. ಪಿ ಕುಮಾರಸ್ವಾಮಿ ಇದ್ದಾರೆ. ತರೀಕೆರೆ ಸುರೇಶ್ ಇದ್ದಾರೆ. ಅವರಿಗೆ ಕೊಡಲಿ. ಪಕ್ಷದ ಹಿರಿಯ ನಾಯಕ ಸಿ ಟಿ ರವಿ ಮಾರ್ಗದರ್ಶನದಲ್ಲಿ ನಾವೆಲ್ಲ ಮುಂದೆ ಹೋಗುತ್ತೇವೆ. ಸಂಪುಟ ವಿಸ್ತರಣೆ ಸಮಯದಲ್ಲಿ ನಮ್ಮ ಜಿಲ್ಲೆಗೆ ಸಿಕ್ಕರೆ ಸಿಗಬಹುದು. ಸಿಗದೆಯೂ ಇರಬಹುದು. ಯಾರಿಗೆ ಕೊಟ್ಟರೂ ಸಂತೋಷ. ಕೊಡಲಿಲ್ಲ ಅಂದರೂ ಸಂತೋಷ ಎಂದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಬಿಜೆಪಿ ಶಾಸಕರು ಕಾಂಗ್ರೆಸ್ ಪಕ್ಷದವರ ಸಂಪರ್ಕದಲ್ಲಿರುವ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಪಕ್ಷದಿಂದ ಯಾರೂ ಹೊರಗೆ ಹೋಗೋದಿಲ್ಲ. ಚುನಾವಣೆ ಹತ್ತಿರ ಬಂದಾಗ ಏನ್ ಆಗುತ್ತೆ ಅನ್ನೋದು ದೇವರೊಬ್ಬರಿಗೆ ಮಾತ್ರ ಗೊತ್ತು. ಒಮ್ಮೆ ಪಕ್ಷಕ್ಕೆ ಸೇರ್ಪಡೆಯಾದರೆ ಅಲ್ಲಿ ವಲಸಿಗ ಮೂಲ ಅನ್ನೋದು ಬರೋದಿಲ್ಲ ಎಂದು ತಿಳಿಸಿದರು.
ಬಿಜೆಪಿ ಹಿರಿಯ ನಾಯಕ ಕೆ. ಎಸ್ ಈಶ್ವರಪ್ಪ ಜಿಲ್ಲಾ ಉಸ್ತುವಾರಿಯಾಗಿ ಬಂದಿರೋದನ್ನ ನಾವು ಸ್ವಾಗತ ಮಾಡುತ್ತೇವೆ. ಇದರಲ್ಲಿ ನಮಗೆ ಯಾವುದೇ ಅಸಮಾಧಾನ ಇಲ್ಲ. ಸಿ ಟಿ ರವಿ ನೇತೃತ್ವದಲ್ಲಿ ನಮ್ಮ ಪಕ್ಷದ ಚಿಕ್ಕಮಗಳೂರು ಶಾಸಕರೆಲ್ಲ ಸಿಎಂ ಭೇಟಿ ಮಾಡಿದ್ದೇವೆ. ಚಿಕ್ಕಮಗಳೂರು ಜಿಲ್ಲೆ ಸಮಸ್ಯೆ ಬಗ್ಗೆ ಚರ್ಚೆಗೆ ತೆರಳಿದ್ದೇವೆ. ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಮತ್ತು ಮೂಡಿಗೆರೆಯಲ್ಲಿ ತೋಟಗಾರಿಕೆ ವಿಶ್ವವಿದ್ಯಾಲಯ ಹಾಗು ಭದ್ರಾ ಉಪಕಣಿವೆಯ ಕಾಮಗಾರಿ, ಜಿಲ್ಲೆಯ ಜಲಧಾರೆಯ ಯೋಜನೆ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿ ಮನವಿ ಸಲ್ಲಿಸಿ ಬಂದಿದ್ದೇವೆ ಎಂದು ಹೇಳಿದರು.
ಓದಿ: ಸಿಎಂ ಭೇಟಿ ಮಾಡಿದ ಚಿಕ್ಕಮಗಳೂರು ಶಾಸಕರ ನಿಯೋಗ: ಬಜೆಟ್ನಲ್ಲಿ ಅನುದಾನ ನೀಡುವಂತೆ ಮನವಿ