ಬೆಂಗಳೂರು: ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ನಡೆಸುತ್ತಿರುವ ಕಡೆಯ ದಿನದ ಪಾದಯಾತ್ರೆ ಆರಂಭವಾಗಿದೆ. ನಗರದ ಅರಮನೆ ಮೈದಾನದಿಂದ ಹೊರಟ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರನ್ನು ಒಳಗೊಂಡ ಪಾದಯಾತ್ರೆ, ಮಧ್ಯಾಹ್ನದ ವೇಳೆಗೆ ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜ್ ಆವರಣ ತಲುಪಲಿದೆ.
ಇಂದು ಸಂಜೆ 3 ಗಂಟೆಗೆ ನ್ಯಾಷನಲ್ ಕಾಲೇಜು ಆವರಣದಲ್ಲಿ ಸಮಾರೋಪ ಸಮಾರಂಭ ನೆರವೇರಲಿದೆ. ರಾಜ್ಯ ನಾಯಕರಾದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಸೇರಿದಂತೆ ಹಲವು ಮುಖಂಡರು ಪಾಲ್ಗೊಳ್ಳಲಿದ್ದಾರೆ. ವಿವಿಧ ಎಂಟು ರಾಜ್ಯಗಳ ಯುವ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಕೆಲ ರಾಷ್ಟ್ರೀಯ ನಾಯಕರು ಸಹ ಇಂದಿನ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಇಂದಿನ ಪಾದಯಾತ್ರೆ ಮಾರ್ಗದ ವಿವರ: ಇಂದು ಅರಮನೆ ಮೈದಾನದಿಂದ ಹೊರಡುವ ಪಾದಯಾತ್ರೆ ಕಾವೇರಿ ಥಿಯೇಟರ್, ಸ್ಯಾಂಕಿ ಟ್ಯಾಂಕ್, 18ನೇ ಕ್ರಾಸ್ ಮಲ್ಲೇಶ್ವರಂ, ಮಾರ್ಗೋಸಾ ರಸ್ತೆ, ಕೆ.ಸಿ. ಜನರಲ್ ಆಸ್ಪತ್ರೆ, ಲಿಂಕ್ ರಸ್ತೆ, ಶೇಷಾದ್ರಿಪುರಂ, ರಾಜೀವ್ ಗಾಂಧಿ ಪ್ರತಿಮೆ, ಫ್ಲಾಟ್‌ಫಾರಂ ರಸ್ತೆಯಿಂದ ಸಂಗೊಳ್ಳಿ ರಾಯಣ್ಣ ಪ್ರತಿಮೆ, ಕಾಟನ್‌ಪೇಟೆ ಮುಖ್ಯರಸ್ತೆ, ಬ್ರಿಯಾಂಡ್ ಸರ್ಕಲ್, ರಾಯನ್ ಸರ್ಕಲ್, ಈದ್ಗಾ ಮೈದಾನದಿಂದ ನ್ಯಾಶನಲ್ ಕಾಲೇಜ್ ಆಟದ ಮೈದಾನ ತಲುಪಲಿದೆ.
'ನಮ್ಮ ನೀರು, ನಮ್ಮ ಹಕ್ಕು' ಅಭಿಯಾನದಡಿ ಕಾಂಗ್ರೆಸ್ ಪಕ್ಷವು ಹಮ್ಮಿಕೊಂಡಿರುವ ಮೇಕೆದಾಟು ಪಾದಯಾತ್ರೆಯು ಇಂದು ಬಹುತೇಕ ನಗರ ಕೇಂದ್ರ ಭಾಗದಲ್ಲಿಯೇ ಸಂಚರಿಸಲಿದೆ. ಶಾಸಕರು ಹಾಗೂ ಎಐಸಿಸಿ ನಾಯಕರಾದ ದಿನೇಶ್ ಗುಂಡೂರಾವ್ ಅವರು ಪ್ರತಿನಿಧಿಸುವ ಬೆಂಗಳೂರು ನಗರದ ಹೃದಯ ಭಾಗವೆನಿಸಿರುವ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಮಲ್ಲೇಶ್ವರ ವೃತ್ತದಿಂದ ಪಾದಯಾತ್ರೆ ಪ್ರಾರಂಭವಾಗಿದೆ.
ಇದನ್ನೂ ಓದಿ: ಉಕ್ರೇನ್ನಲ್ಲಿ ಭಾರತೀಯರ ಒತ್ತೆ: ರಷ್ಯಾ ಆರೋಪಕ್ಕೆ ಭಾರತ ಹೇಳಿದ್ದೇನು?
ಮಲ್ಲೇಶ್ವರದ ಕುವೆಂಪು ವೃತ್ತದಿಂದ ಪ್ರಾರಂಭಗೊಳ್ಳುವ ಮೇಕೆದಾಟು ಪಾದಯಾತ್ರೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರು ಹಾಗೂ ಸಾವಿರಾರು ಸಂಖ್ಯೆಯ ಕಾರ್ಯಕರ್ತರು ಪಾಲ್ಗೊಂಡಿದ್ದಾರೆ. ಗಾಂಧಿನಗರ ವಿಧಾನಸಭಾ ಕ್ಷೇತ್ರದಿಂದಲೇ ಸುಮಾರು 5 ರಿಂದ 6 ಸಾವಿರ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಪಾದಯಾತ್ರೆ ಸಾಗುವ ಹಾದಿಯಲ್ಲಿ ಕಾರ್ಯಕರ್ತರ ದಣಿವನ್ನು ನೀಗಿಸುವ ಸಲುವಾಗಿ ಕುಡಿಯುವ ನೀರು, ಜ್ಯೂಸ್, ಮಜ್ಜಿಗೆ ಹಾಗೂ ಲಘು ಉಪಹಾರದ ವ್ಯವಸ್ಥೆ ಮಾಡಲಾಗಿದೆ.
ಸಂಚಾರ ದಟ್ಟಣೆ: ಬೆಂಗಳೂರು ನಗರ ಕೇಂದ್ರ ಭಾಗದಲ್ಲಿ ಪಾದಯಾತ್ರೆ ತೆರಳುವ ಹಿನ್ನೆಲೆ ಸಾಕಷ್ಟು ಕಡೆ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ. ಪ್ರತಿಪಕ್ಷದ ಕಾರ್ಯಕ್ರಮ ವಾಗಿರುವ ಹಿನ್ನೆಲೆ ಸಾಕಷ್ಟು ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲಾಗಿದೆ. ಆದರೂ ಸಾವಿರಾರು ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಪಾಲ್ಗೊಳ್ಳುತ್ತಿರುವ ಹಿನ್ನೆಲೆ ಸಹಜವಾಗಿಯೇ ವಾಹನ ಸಂಚಾರ ಅಸ್ತವ್ಯಸ್ತಗೊಳ್ಳುವುದರಲ್ಲಿ ಸಂಶಯವಿಲ್ಲ.
ಅರಮನೆ ಮೈದಾನ ಮುಂಭಾಗ ಪಾದಯಾತ್ರೆ ಆರಂಭಕ್ಕೂ ಮುನ್ನವೇ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸಂಚಾರ ದಟ್ಟಣೆ ಗೋಚರಿಸಿತು. ಬೆಳಗ್ಗೆ 10 ಗಂಟೆಗೆ ಆರಂಭವಾಗಬೇಕಿದ್ದ ಪಾದಯಾತ್ರೆ ವಿಳಂಬವಾಗಿ ಆರಂಭವಾಗುವ ಸೂಚನೆ ತೋರಿಸಿತು. ಅದಾಗಲೇ ಮಧ್ಯಾಹ್ನವಾದ ಹಿನ್ನೆಲೆ ಸಾಕಷ್ಟು ವಾಹನಗಳ ಸಂಚಾರವೂ ಹೆಚ್ಚಾಯಿತು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗಮಿಸಿದ ವೇಳೆ ಉಂಟಾದ ಸಂಚಾರದಟ್ಟಣೆಯಲ್ಲಿ ಆ್ಯಂಬುಲೆನ್ಸ್ ಸಹ ಟ್ರಾಫಿಕ್ನಲ್ಲಿ ಸಿಲುಕಿಕೊಂಡಿದ್ದ ದೃಶ್ಯ ಗೋಚರಿಸಿತು.