ಬೆಂಗಳೂರು: ಬೆಡ್ ಬ್ಲಾಕಿಂಗ್ ಹಗರಣ ಬಯಲಾದ ಹಿನ್ನೆಲೆ ದಕ್ಷಿಣ ವಲಯದ ವಾರ್ ರೂಂನ 17 ಮಂದಿ ಗುತ್ತಿಗೆ ಸಿಬ್ಬಂದಿಯನ್ನು ಕೆಲಸದಿಂದ ತೆಗೆದು ಹಾಕಲಾಗಿದೆ.
ಮಂಗಳವಾರ ಸಂಸದ ತೇಜಸ್ವಿ ಸೂರ್ಯ ಹೆಸರು ಬಯಲು ಮಾಡಿದ ಎಲ್ಲಾ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತೆ ತುಳಸಿ ಮದ್ದಿನೇನಿ ಮಾಹಿತಿ ನೀಡಿದ್ದಾರೆ. ಸಂಸದರು ಓದಿದ ಪಟ್ಟಿಯಲ್ಲಿದ್ದ ಎಲ್ಲರನ್ನು ಅಮಾನತು ಮಾಡಲಾಗಿದೆ. ಕೆಲಸಕ್ಕೆ ಬರುವುದು ಬೇಡ ಎಂದು ಹೇಳಲಾಗಿದೆ. ಉಳಿದ ತನಿಖೆಯನ್ನು ಪೊಲೀಸರು ಮಾಡಲಿದ್ದಾರೆ. ಆ ವರದಿಯ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಉಳಿದಂತೆ ಜನ ಕೆಲಸಕ್ಕೆ ಬರಲಿದ್ದಾರೆ. 9ರಿಂದ ಬೆಳಗಿನ ಶಿಫ್ಟ್ನವರು ಕೆಲಸ ಮಾಡಲಿದ್ದಾರೆ. ಆದರೆ ಎಷ್ಟು ಜನ ಬರಲಿದ್ದಾರೆ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.
ಕ್ರಿಸ್ಟಲ್ ಕಂಪನಿ ಮೊದಲಿನಿಂದಲೂ ಪಾಲಿಕೆ ಸಂಪರ್ಕದಲ್ಲಿದೆ. ಕಳೆದ ವರ್ಷವೂ ಅವರೇ ವಾರ್ ರೂಂಗೆ ಸಿಬ್ಬಂದಿಯನ್ನು ನೇಮಿಸಿದ್ದಾರೆ. ಮಧ್ಯರಾತ್ರಿಯಲ್ಲೇ ಬೆಡ್ ಬ್ಲಾಕ್ ಅಂತಾರೆ. ನಮ್ಮದೊಂದೇ ಝೋನ್ನಿಂದ ಆಗಿದೆಯೇ? ಎಂಬುದನ್ನು ತಿಳಿಯಬೇಕಿದೆ. ಸಂಸದರು ತಿಳಿಸಿದಂತೆ ರಾತ್ರಿ ಬೆಡ್ ಬ್ಲಾಕ್ ಆಗುತ್ತಿರುವುದು ನಮ್ಮದೊಂದೇ ಝೋನ್ನಿಂದ ಅಲ್ಲ. ಯಾವ ಯಾವ ವಲಯದಿಂದ ಬ್ಲಾಕ್ ಆಗಿದೆ ಎಂಬ ಬಗ್ಗೆ ತನಿಖೆ ಆದಾಗ ಮತ್ತಷ್ಟು ವಲಯಗಳ ಮಾಹಿತಿ ಹೊರಬರಲಿದೆ. ಪ್ರಕರಣದ ಸತ್ಯಾಸತ್ಯತೆ ತಿಳಿಯಲು ಸಾಕ್ಷಿ ನಾಶ ಆಗಬಾರದೆಂದು ಇರುವ ಸಿಬ್ಬಂದಿಯನ್ನ ತೆಗೆದು ಹೊಸ ಸಿಬ್ಬಂದಿ ನೇಮಿಸುವಂತೆ ಸೂಚಿಸಲಾಗಿದೆ. ಅಲ್ಲದೇ ಪ್ರಕರಣದ ಬಗ್ಗೆ ಮುಖ್ಯ ಆಯುಕ್ತರಿಗೆ ವರದಿ ಕೊಡಬೇಕಿದೆ. ಸಂಸದರು ತಿಳಿಸಿರುವ 10 ಪ್ರಕರಣಗಳ ವಿವರ ನೀಡಬೇಕಿದೆ ಎಂದರು.
ಬೆಡ್ ಬ್ಲಾಕ್ ದಂಧೆಯಲ್ಲಿದ್ದ ಗುತ್ತಿಗೆ ಸಿಬ್ಬಂದಿ ಕ್ರಿಸ್ಟಲ್ ಇನ್ಫೋ ಸಿಸ್ಟಮ್ಸ್ ಅಂಡ್ ಸರ್ವೀಸಸ್ ಸಂಸ್ಥೆಗೆ ಸೇರಿದ ಸಿಬ್ಬಂದಿಯಾಗಿದ್ದಾರೆ. ಕಳೆದ ಹಲವು ದಿನಗಳಿಂದ ಮುಖ್ಯ ಕಚೇರಿ ತೆರೆದಿಲ್ಲ. ರಾಜಾಜಿನಗರದಲ್ಲಿರುವ ಮುಖ್ಯ ಕಚೇರಿ ಬಂದ್ ಆಗಿದ್ದು, ಮಾಲೀಕ ವಿಜಯ ಕುಮಾರ್ ಕೂಡ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಮಾಹಿತಿ ನೀಡಿದರು.
ಓದಿ: ಬೆಡ್ ಬ್ಲಾಕಿಂಗ್ ದಂಧೆ: ಗೃಹ ಸಚಿವರು, ಮುಖ್ಯ ಕಾರ್ಯದರ್ಶಿ, ತೇಜಸ್ವಿ ಸೂರ್ಯ ಜತೆ ಸಿಎಂ ಸಭೆ