ಬೆಂಗಳೂರು: ಹಾಸಿಗೆ ಬ್ಲಾಕಿಂಗ್ ಸಂಬಂಧ ಸಿಸಿಬಿ ಪೊಲೀಸರು ಆರೋಗ್ಯ ಮಿತ್ರದ ಅಧಿಕಾರಿ ಶಶಿಧರ್ ಎಂಬುವವರನ್ನು ಬಂಧಿಸಿದ್ದಾರೆ.
ಬೆಡ್ ಬ್ಲಾಕಿಂಗ್ ಸಂಬಂಧ ಖಾಸಗಿ ಆಸ್ಪತ್ರೆ ನೌಕರರಾದ ಸುಧೀರ್ ಹಾಗೂ ವೆಂಕೋಬ್ ರಾವ್ ಅವರನ್ನು ನಿನ್ನೆ ಬೆಳಗ್ಗೆ ಬಂಧಿಸಲಾಗಿತ್ತು. ಸಂಜೆಯ ವೇಳೆಗೆ ಮತ್ತೋರ್ವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.
ಬಂಧಿತ ಆರೋಪಿಗಳು ಆಸ್ಪತ್ರೆಯಿಂದ ಬಿಡುಗಡೆಯಾದ ಹಾಗೂ ಮೃತ ರೋಗಿಗಳ ವಿವರಗಳನ್ನು ಬಿಬಿಎಂಪಿ ಸಿಬ್ಬಂದಿಗೆ ತಿಳಿಸುತ್ತಿರಲಿಲ್ಲ. ಬದಲಿಗೆ, ಖಾಸಗಿ ವ್ಯಕ್ತಿಗಳಿಗೆ ಮಾಹಿತಿ ನೀಡುತ್ತಿದ್ದರು ಎಂಬುದು ತಿಳಿದುಬಂದಿದೆ.
ಇದೇ ಮಾಹಿತಿ ಬಳಸಿಕೊಂಡು ಖಾಸಗಿ ವ್ಯಕ್ತಿಗಳು ಹಾಸಿಗೆ ಬ್ಲಾಕ್ ಮಾಡುತ್ತಿದ್ದರು. ಇವರ ಕೃತ್ಯದಿಂದ ಸಾಕಷ್ಟು ರೋಗಿಗಳು ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾರೆ. ಇನ್ನಷ್ಟು ಸಿಬ್ಬಂದಿ ಬೆಡ್ ಬ್ಲಾಕ್ ಹಗರಣದಲ್ಲಿ ಭಾಗಿ ಆಗಿದ್ದರ ಕುರಿತು ದಾಳಿ ಮುಂದುವರೆಯಲಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ಬೆಡ್ ಬ್ಲಾಕ್ ತನಿಖೆ ಹಿನ್ನಲೆ : ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ಬಿಬಿಎಂಪಿ ಬೆಡ್ ಬ್ಲಾಕ್ ಪ್ರಕರಣ ಸಂಬಂಧ ತನಿಖೆ ಚುರುಕುಗೊಳಿಸಿರುವ ಸಿಸಿಬಿ ನಿನ್ನೆ ನಗರದ ಪ್ರತಿಷ್ಠಿತ ಮೂರು ಆಸ್ಪತ್ರೆಗಳಲ್ಲಿ ಬೆಡ್ ಬ್ಲಾಕ್ ಆಗಿರುವುದು ಸಂಗತಿ ಬಯಲಿಗೆಳೆದಿತ್ತು.
ಈ ಹಿಂದೆ ವಾರ್ ರೂಂ ಸಿಬ್ಬಂದಿ, ಡೇಟಾ ಎಂಟ್ರಿ ಆಪರೇಟರ್, ನರ್ಸ್ ಸೇರಿದಂತೆ 18 ಮಂದಿಯನ್ನು ಸಿಸಿಬಿ ವಿಚಾರಣೆ ನಡೆಸಿತ್ತು. ಅಲ್ಲದೆ ಬಂಧನಕ್ಕೊಳಗಾಗಿರುವ ಇಬ್ಬರು ವೈದ್ಯರು ಸೇರಿ ನಾಲ್ವರನ್ನು ಆರೋಪಿಗಳನ್ನು ಕೂಲಂಕುಶ ವಿಚಾರಣೆ ನಡೆಸಿತ್ತು.
ವಾರ್ ರೂಂಗಳ ಮೇಲೆ ದಾಳಿ ಮಾಡಿ ಬೆಡ್ ಬ್ಲಾಕ್ ಮಾಡಿರುವ ದತ್ತಾಂಶ ಹಾಗೂ ವಾರ್ ರೂಂಗಳಿಗೆ ಯಾರು ಬಂದಿದ್ದರು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಿರುವ ಪೊಲೀಸರು ಮೂರು ಖಾಸಗಿ ಆಸ್ಪತ್ರೆಗಳಲ್ಲಿ ದಂಧೆ ನಡೆಯುತಿತ್ತು ಎಂಬುದನ್ನು ಪತ್ತೆ ಹಚ್ಚಿದ್ದರುಬೆಡ್ ಬ್ಲಾಕ್ ಆಗುತ್ತಿದ್ದ ಆಸ್ಪತ್ರೆಗಳಿಗೆ ತೆರೆಳುತ್ತಿರುವ ಸಿಸಿಬಿ ಪೊಲೀಸರು ಬೆಡ್ ಬ್ಲಾಕ್ ಆಗುವಾಗ ಪಾಳಿಯಲ್ಲಿ ಯಾವ ವೈದ್ಯರು ಕರ್ತವ್ಯದಲ್ಲಿದ್ದರು ಸಿಬ್ಬಂದಿ ಯಾರು ಯಾರು ಇದ್ದರು ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು.
ಈ ಸಂಬಂಧ ಸಂಬಂಧಪಟ್ಟ ವೈದ್ಯಕೀಯ ಸಿಬ್ಬಂದಿ ಹಾಗೂ ಆರೋಗ್ಯ ಮಿತ್ರ ಸಿಬ್ಬಂದಿಯನ್ನು ಕೂಲಂಕುಶವಾಗಿ ವಿಚಾರಣೆಗೆ ಒಳಪಡಿಸಿದ್ದರು.