ಬೆಂಗಳೂರು: ಬಿಬಿಎಂಪಿ ಕೋವಿಡ್ ವಾರ್ ರೂಮ್ಗಳಲ್ಲಿ ನಡೆದಿದೆ ಎನ್ನಲಾದ ಬೆಡ್ ಬ್ಲಾಕಿಂಗ್ ಪ್ರಕರಣದಲ್ಲಿ 17 ಮಂದಿ ನೌಕರರನ್ನು ಅಮಾನತು ಮಾಡಿದ್ದನ್ನು ಪ್ರಶ್ನಿಸಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಿಚಾರಣೆಗೆ ನಿರಾಕರಿಸಿದೆ.
ಓದಿ: ಬೆಡ್ ಬ್ಲಾಕ್ ದಂಧೆ.. ಸಂಸದ ಹಾಗೂ ಶಾಸಕರ ವಿರುದ್ಧ ಕಾಂಗ್ರೆಸ್‌ನಿಂದ ಡಿಜಿಗೆ ದೂರು
ಅರ್ಜಿದಾರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿನ ವಿಚಾರಗಳು ರಾಜಕೀಯ ಪ್ರೇರಿತವಾಗಿವೆ. ಹೀಗಾಗಿ ಅರ್ಜಿ ವಿಚಾರಣೆ ನಡೆಸುವುದು ಸೂಕ್ತವಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟು ಅರ್ಜಿಯನ್ನು ಇತ್ಯರ್ಥಪಡಿಸಿದೆ.
ಬೆಡ್ ಬ್ಲಾಕಿಂಗ್ ಪ್ರಕರಣದಲ್ಲಿ ಕೋವಿಡ್ ವಾರ್ ರೂಮ್ನ 17 ಮಂದಿ ನೌಕರರನ್ನು ಅಮಾನತು ಮಾಡಿದ ಕ್ರಮ ಪ್ರಶ್ನಿಸಿ ನಗರದ ಯುವ ಕಾಂಗ್ರೆಸ್ ಮುಖಂಡ ವೈ.ಬಿ.ಶ್ರೀವತ್ಸ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಅರ್ಜಿದಾರರ ಪರ ವಕೀಲರು ವಾದಿಸಿ, ಒಂದೇ ಕೋಮಿನ ನೌಕರರನ್ನು ಗುರಿಯಾಗಿಸಿಕೊಂಡು ಸಂಸದರು ಮಾಡಿರುವ ಆರೋಪದ ಮೇರೆಗೆ ನೌಕರರನ್ನು ಅಮಾನತು ಮಾಡಲಾಗಿದೆ. ಹೀಗಾಗಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶಿಸಿಬೇಕು ಎಂದು ಕೋರಿದರು.
ವಾದ ಆಲಿಸಿದ ಪೀಠ, ಈಗಾಗಲೇ ಬೆಡ್ ಬ್ಲಾಕಿಂಗ್ ಪ್ರಕರಣ ಸಂಬಂಧ ಎಫ್ಐಆರ್ ದಾಖಲಾಗಿದ್ದು, ಈ ಸಂಬಂಧ ತನಿಖೆ ನಡೆಯುತ್ತಿದೆ. ಹೈಕೋರ್ಟ್ಗೆ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಲಾಗಿದೆ. ಅರ್ಜಿದಾರರು ರಾಜಕೀಯ ಪ್ರೇರಿತವಾಗಿ ಅರ್ಜಿ ಸಲ್ಲಿಸಿರುವಂತೆ ಕಾಣುತ್ತದೆ. ಹೀಗಾಗಿ ಈ ಅರ್ಜಿಯ ವಿಚಾರಣೆ ನಡೆಸುವ ಅಗತ್ಯವಿಲ್ಲ ಎಂದು ತಿಳಿಸಿ ಅರ್ಜಿ ಇತ್ಯರ್ಥಪಡಿಸಿತು.