ಬೆಂಗಳೂರು: ಕೋವಿಡ್ 3ನೇ ಅಲೆಯನ್ನು ಎಲ್ಲರ ಸಹಾಯದಿಂದ ಯಶಸ್ವಿಯಾಗಿ ನಿಭಾಯಿಸಲಾಗಿದ್ದು, ನಮ್ಮ ಮುಂದಿನ ಗುರಿ ಭವಿಷ್ಯದಲ್ಲಿ ಸಂಭಾವ್ಯ ಅಲೆಗಳನ್ನು ಎದುರಿಸುವ ಬಗೆಗಿರಬೇಕು ಎಂದು ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತ ಹೇಳಿದರು.
ಪಾಲಿಕೆಯ ಕೋವಿಡ್-19 ತಜ್ಞರ ಸಮಿತಿಯೊಂದಿಗೆ ಬುಧವಾರ ನಡೆದ ವರ್ಚುಯಲ್ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಪಾಲಿಕೆ ವ್ಯಾಪ್ತಿಯಲ್ಲಿ ಕ್ರಿಯಾಶೀಲ ಸಂಚಾರಿ ಟ್ರಯಾಜ್ ಘಟಕ ಮತ್ತು ಟೆಲಿ ಟ್ರಯಾಜ್ ಘಟಕ, ವೈದ್ಯರು ಮತ್ತು ಸಿಬ್ಬಂದಿಗಳ ತಂಡದ ನೆರವಿನಿಂದ ದಿನಕ್ಕೆ 3,000ಕ್ಕೂ ಹೆಚ್ಚು ಕೋವಿಡ್ ಸೋಂಕಿತರಿಗೆ ಅವರವರ ಮನೆಯಲ್ಲಿ ಟ್ರಯಾಜ್ ಮಾಡಲಾಗುತ್ತಿದೆ. ಕೋವಿಡ್ ಪ್ರಕರಣಗಳ ಸಂಖ್ಯೆ ತಗ್ಗುತ್ತಿದ್ದು, ಎಲ್ಲರ ಶ್ರಮದಿಂದ ಕೊರೊನಾ ಮೂರನೇ ಅಲೆಯನ್ನು ನಿಭಾಯಿಸಲಾಗುತ್ತಿದೆ. ಮುಂದೇನಾದರೂ ಹೊಸ ಅಲೆಗಳು ಬಂದಲ್ಲಿ ಅವನ್ನು ಎದುರಿಸುವ ಬಗ್ಗೆ ನಾವು ಸಿದ್ಧರಾಗಿರಬೇಕಿದೆ ಎಂದು ತಿಳಿಸಿದರು.
![ಕೋವಿಡ್-19 ತಜ್ಞರ ಸಮಿತಿಯೊಂದಿಗೆ ಗೌರವ್ ಗುಪ್ತ ಸಭೆ](https://etvbharatimages.akamaized.net/etvbharat/prod-images/kn-bng-07-bbmp-comssionr-gaurav-guptha-on-future-covid-waves-ka10032_02022022191924_0202f_1643809764_800.jpg)
ನಗರದಲ್ಲಿ ಮೂರನೇ ಅಲೆಯ ಬಗ್ಗೆ ಜನರಲ್ಲಿನ ಭಯ ಹೋಗಲಾಡಿಸಿ ಅವರಿಗೆ ಧೈರ್ಯ ತುಂಬುವ ಕಾರ್ಯ ಮಾಡಲಾಯಿತು. ಪರಿಸ್ಥಿತಿ ಎದುರಿಸುವ ಬಗ್ಗೆ ಗಮನ ಹರಿಸಲಾಯಿತು. ಲಸಿಕಾಕರಣವನ್ನು ಮಾಡಲಾಗುತ್ತಿದೆ. ಶೀಘ್ರದಲ್ಲಿಯೇ ಮುನ್ನೆಚ್ಚರಿಕೆ ಡೋಸ್ ಲಸಿಕಾಕರಣವು ನಿರ್ದೇಶಿತ ಗುರಿ ತಲುಪಲಿದೆ. ಇನ್ನೊಂದೆಡೆ, ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆಯೂ ಕಡಿಮೆಯಿದೆ ಎಂದು ಹೇಳಿದರು.
ಜನವರಿ ತಿಂಗಳಲ್ಲಿ ಕೋವಿಡ್ ದಾಖಲಾತಿಗಳಲ್ಲಿ ಕೇವಲ ಶೇ. 1.8 ಸಕ್ರಿಯ ಪ್ರಕರಣಗಳಿದ್ದವು. ಅದರಲ್ಲಿ ಹೆಚ್ಚಿನವರು 60 ವರ್ಷ ಮೇಲ್ಪಟ್ಟವರು. ನಗರದಲ್ಲಿ ಕೋವಿಡ್ ಸೋಂಕು ದೃಢಪಟ್ಟು ಐಸಿಯೂ ನಲ್ಲಿ ದಾಖಲಾಗುವ ಎಲ್ಲ ಪ್ರಕರಣಗಳನ್ನು ಮೇಲ್ವಿಚಾರಣೆ ಮಾಡಲು ಸೂಚಿಸಲಾಗಿದೆ. ಈ ಸಂಬಂಧ ಗಂಭೀರ ಪ್ರಕರಣಗಳ ಪೈಕಿ ಆಸ್ಪತ್ರೆಗೆ ದಾಖಲಾಗಿರುವವರ ಮಾದರಿಗಳನ್ನು ಜೀನೋಮಿಕ್ ಸೀಕ್ವೆನ್ಸಿಂಗ್ಗೆ ಕಳುಹಿಸಲಾಗುತ್ತದೆ. ಪ್ರಸ್ತುತ ಅಂತಹ ಎಲ್ಲ ಮಾದರಿಗಳನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಸಭೆಯಲ್ಲಿ ವಿಶೇಷ ಆಯುಕ್ತರಾದ ಡಾ. ತ್ರಿಲೋಕ್ ಚಂದ್ರ, ಮುಖ್ಯ ಆರೋಗ್ಯಾಧಿಕಾರಿ ಡಾ. ಬಾಲಸುಂದರ್, ಕೋವಿಡ್ ತಜ್ಞರ ಸಮಿತಿ ಸದಸ್ಯರು ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ