ಬೆಂಗಳೂರು: ಮಳೆಗಾಲ ಹಾಗೂ ಪ್ರವಾಹದ ಸಂದರ್ಭಗಳಲ್ಲಿ ಯಾವುದೇ ರಾಜ್ಯ ತನ್ನ ಜಲಾಶಯಗಳಿಂದ ಹೆಚ್ಚುವರಿ ನೀರನ್ನು ಹೊರಬಿಡುವ ಮುನ್ನ ನದಿ ಹರಿದು ಹೋಗುವ ರಾಜ್ಯಗಳಿಗೆ ಕಡ್ಡಾಯವಾಗಿ ಮಾಹಿತಿ ನೀಡುವಂತೆ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿ ಆದೇಶ ಹೊರಡಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೈಕೋರ್ಟ್‍ಗೆ ಮಾಹಿತಿ ನೀಡಿದೆ.
ತುಮಕೂರಿನ ಮಲ್ಲಿಕಾರ್ಜುನ ಎಂಬುವರು ಸಲ್ಲಿಸಿರುವ ಪಿಐಎಲ್ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠಕ್ಕೆ ಕೇಂದ್ರ ಸರ್ಕಾರದ ಪರ ವಕೀಲರು ಈ ಮಾಹಿತಿ ನೀಡಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯು ಆ.8ರಂದು ಕೇಂದ್ರ ಜಲ ಸಂಪನ್ಮೂಲ ಸಚಿವಾಲಯಕ್ಕೆ ಆದೇಶ ನೀಡಿ, ಮಳೆಗಾಲ ಹಾಗೂ ಪ್ರವಾಹದ ಸಂದರ್ಭಗಳಲ್ಲಿ ಯಾವುದೇ ರಾಜ್ಯ ತನ್ನ ಜಲಾಶಯಗಳಿಂದ ಹೆಚ್ಚುವರಿ ನೀರನ್ನು ಹೊರಬಿಡುವ ಮುನ್ನ ನದಿ ಹರಿದು ಹೋಗುವ ರಾಜ್ಯಗಳಿಗೆ ಮುಂಚಿತವಾಗಿ ಮಾಹಿತಿ ನೀಡುವಂತೆ ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಹಾಗೂ ಸಂಬಂಧಿತ ಪ್ರಾಧಿಕಾರಗಳಿಗೆ ಸೂಚನೆ ನೀಡವಂತೆ ಸೂಚಿಸಿದೆ.ಅದರಂತೆ, ಆ. 9ರಂದು ಕೇಂದ್ರ ಜಲ ಸಂಪನ್ಮೂಲ ಸಚಿವಾಲಯ ಎಲ್ಲಾ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳು, ಸಂಬಂಧಪಟ್ಟ ಪ್ರಾಧಿಕಾರಗಳಿಗೆ ಆದೇಶ ಹೊರಡಿಸಿದೆ ಎಂದು ಕೇಂದ್ರ ಸರ್ಕಾರದ ಪರ ವಕೀಲರು ಲಿಖಿತವಾಗಿ ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ:
ತೀವ್ರ ಮಳೆಗಾಲದ ಸಂದರ್ಭಗಳಲ್ಲಿ ಪೂರ್ವ ಮಾಹಿತಿ ಇಲ್ಲದೆ ಡ್ಯಾಮ್ ಗಳಿಂದ ನೀರು ಹೊರಬಿಟ್ಟಾಗ ನೆರೆ ರಾಜ್ಯಗಳಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣವಾಗುತ್ತದೆ. ಈ ವೇಳೆ ರಾಜ್ಯಗಳ ನಡುವೆ ಅನಗತ್ಯ ಗೊಂದಲ ಮತ್ತು ಸಂಘರ್ಷದ ವಾತಾವರಣ ನಿರ್ಮಾಣವಾಗುತ್ತದೆ. ಮಳೆಗಾಲ ಅಥವಾ ಪ್ರವಾಹದ ಸಂದರ್ಭಗಳಲ್ಲಿ ಒಂದು ರಾಜ್ಯದ ಡ್ಯಾಂಗಳಿಂದ ಹೆಚ್ಚುವರಿ ನೀರನ್ನು ನೆರೆ ರಾಜ್ಯದ ಡ್ಯಾಂಗಳಿಗೆ ಹರಿಸುವ ಮುನ್ನ ಪೂರ್ವ ಮಾಹಿತಿ ಹಂಚಿಕೊಳ್ಳುವ ವ್ಯವಸ್ಥೆ ಇಲ್ಲ. ಈ ಸಂಬಂಧ ಯಾವುದೇ ಕಾನೂನು ಅಥವಾ ನಿಯಮಗಳಿಲ್ಲ. ಹಾಗಾಗಿ ಶಾಶ್ವತ ವ್ಯವಸ್ಥೆಯೊಂದನ್ನು ರೂಪಿಸುವಂತೆ ಕೇಂದ್ರ ಹಾಗೂ ರಾಜ್ಯಗಳಿಗೆ ನಿರ್ದೇಶನ ನೀಡುವಂತೆ ಅರ್ಜಿ ಸಲ್ಲಿಸಲಾಗಿದೆ.