ಬೆಂಗಳೂರು: ರೆಧನ್ ದಿ ಸಿನಿಮಾ ಕಂಪನಿ ಮೇಲೆ ಜಾಗೃತ ದಳ ದಾಳಿ ನಡೆಸಿದ ನಂತರ ಬಿಡಿಎ ಅಧ್ಯಕ್ಷ ಎಸ್.ಆರ್ ವಿಶ್ವನಾಥ್ ಭ್ರಷ್ಟರಿಗೆ ಎಚ್ಚರಿಕೆ ನೀಡಿದ್ದಾರೆ.
ಏಜೆಂಟರೊಂದಿಗೆ ಸೇರಿ ಬಿಡಿಎ ದಾಖಲೆ ಸೃಷ್ಟಿಸಿ ನಿವೇಶನ ಹಂಚಿಕೆ ಪತ್ರಗಳನ್ನು ಸಿದ್ಧಪಡಿಸುವ ಜಾಲದ ಮೇಲೆ ಬಿಡಿಎ ಜಾಗೃತ ದಳದ ಪೊಲೀಸರು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಭ್ರಷ್ಟಾಚಾರ ನಡೆಸಿ ಬಿಡಿಎಗೆ ಕಳಂಕ ತರುವ ಅಧಿಕಾರಿಗಳು ಮತ್ತು ನೌಕರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಲಾಗುತ್ತದೆ ಎಂದಿದ್ದಾರೆ.
ಬಿಡಿಎ ಸಂಸ್ಥೆಯಲ್ಲಿದ್ದುಕೊಂಡು ಸಂಸ್ಥೆಯ ದಾಖಲೆಗಳನ್ನು ದುರ್ಬಳಕೆ ಮಾಡಿಕೊಂಡಿರುವುದು ಸಂಸ್ಥೆಗೆ ಮಾಡಿದ ದ್ರೋಹವಷ್ಟೇ ಅಲ್ಲ, ದೇಶಕ್ಕೆ ಮಾಡಿರುವ ದ್ರೋಹವಾಗಿದೆ. ಬಿಡಿಎಗೆ ಹೊರಗಿನ ಶತೃಗಳಿಗಿಂತ ಒಳಗಿನ ಶತೃಗಳೇ ಹೆಚ್ಚಾಗಿದ್ದಾರೆ. ಇಂತಹ ಭ್ರಷ್ಟ ಅಧಿಕಾರಿಗಳು ಕೆಲವು ಏಜೆಂಟರ ಜೊತೆ ಸೇರಿ ತಿಂದ ಮನೆಗೆ ದ್ರೋಹ ಬಗೆಯುತ್ತಿರುವುದು ನೋವು ತರುವ ವಿಚಾರವಾಗಿದೆ. ಅಧಿಕಾರಿಗಳಾದ ಶಿವೇಗೌಡ, ಕಮಲಮ್ಮ ಸೇರಿದಂತೆ ಐವರು ಸಿಬ್ಬಂದಿ ಪ್ರಕರಣದಲ್ಲಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಪ್ರಕರಣದಲ್ಲಿ ಇನ್ನೂ ಹಲವಾರು ಸಿಬ್ಬಂದಿ ಭಾಗಿಯಾಗಿರುವ ಗುಮಾನಿ ಇದ್ದು, ಅವರನ್ನು ಪತ್ತೆ ಮಾಡಿ ಶಿಸ್ತುಕ್ರಮ ಜರುಗಿಸಲಾಗುತ್ತದೆ ಎಂದು ಸ್ಪಷ್ಟ ಪಡಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನನ್ನ ಮೇಲೆ ವಿಶ್ವಾಸವಿಟ್ಟು ಬಿಡಿಎ ಅಧ್ಯಕ್ಷ ಪದವಿ ನೀಡಿದ್ದಾರೆ ಮತ್ತು ಸಂಸ್ಥೆಯನ್ನು ಹಿಂದಿನ ರೀತಿಯಲ್ಲಿ ಜನ ಸ್ನೇಹಿಯನ್ನಾಗಿ ಮಾಡುವ ಜವಾಬ್ದಾರಿ ವಹಿಸಿದ್ದಾರೆ. ಈ ಕಾರ್ಯವನ್ನು ಮಾಡುವುದರಿಂದ ನಾನು ಹಿಂದೆ ಸರಿಯುವುದಿಲ್ಲ. ಈಗಿನ ದಾಳಿ ಕೇವಲ ಆರಂಭವಷ್ಟೆ, ಎಷ್ಟೇ ಪ್ರಭಾವಿಗಳಾಗಿದ್ದರೂ ಭ್ರಷ್ಟರನ್ನು ಮಟ್ಟ ಹಾಕುವ ವಿಚಾರದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಬಿಡಿಎ ಆಯುಕ್ತರಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಮತ್ತು ಇಂತಹ ಭ್ರಷ್ಟರ ವಿರುದ್ಧದ ದಾಳಿ ಮುಂದುವರಿಯಲಿದೆ ಎಂದು ಎಚ್ಚರಿಸಿದ್ದಾರೆ.