ಬೆಂಗಳೂರು: ಕೊನೆಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಕ್ರಮ-ಸಕ್ರಮ ಯೋಜನೆಗೆ ಚಾಲನೆ ನೀಡಿದ್ದು, ಕಟ್ಟಡಗಳ ಸಕ್ರಮಕ್ಕೆ ಅರ್ಜಿ ಆಹ್ವಾನಿಸುವ ಮೂಲಕ ಯೋಜನೆಗೆ ಹಸಿರು ನಿಶಾನೆ ತೋರಿದೆ. ಈಗ ಆನ್‌ಲೈನ್ ಮುಖಾಂತರ ಅರ್ಜಿ ಆಹ್ವಾನಿಸಿದ್ದು, ಇದರಿಂದ ಬಿಡಿಎ ಬಡಾವಣೆಗಳಲ್ಲಿ ಕಟ್ಟಡ ನಿರ್ಮಿಸಿದವರಿಗೆ ಕೊಂಚ ರಿಲೀಫ್ ಸಿಗಲಿದೆ.
ಬಿಡಿಎ ಬಡಾವಣೆಗಳಲ್ಲಿ 12 ವರ್ಷಗಳ ಹಿಂದೆ ನಿಯಮ ಉಲ್ಲಂಘಿಸಿ ನಿರ್ಮಿಸಲಾದ ಕಟ್ಟಡ ಮಾಲೀಕರಿಗೆ ಈ ಅಕ್ರಮ-ಸಕ್ರಮ ಅನ್ವಯವಾಗಲಿದ್ದು, ಯಾರು ಬಿಲ್ಡಿಂಗ್ ಪ್ಲಾನ್ ಉಲ್ಲಂಘಿಸಿದ್ದಾರೋ ಅಂಥಹವರಿಗೆ ದಂಡ ಸಮೇತ ಸಕ್ರಮ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.
ನಿಗದಿತ ಅರ್ಜಿ ನಮೂನೆಯೊಂದಿಗೆ ಜಮೀನಿನ ಮೂಲ ಖಾತೆದಾರರಿಂದ ಖರೀದಿಸಲ್ಪಟ್ಟ ಕಂದಾಯ ನಿವೇಶನಗಳಲ್ಲಿನ ಕಟ್ಟಡದ ಕ್ರಯಪತ್ರಗಳ ದೃಢೀಕೃತ ಪ್ರತಿ, ಜಮೀನಿನ ಮೂಲ ಖಾತೆದಾರರಿಂದ ಖರೀದಿಸಲ್ಪಟ್ಟ ಕಂದಾಯ ನಿವೇಶನದಲ್ಲಿನ ಕಟ್ಟಡ ಕ್ರಯಪತ್ರಗಳ ಇತ್ತೀಚಿನವರೆಗಿನ ನಮೂನೆ-15ರಲ್ಲಿ ಮೂಲ ಋಣಭಾರ ಪ್ರಮಾಣಪತ್ರ, ನಿಗದಿತ ನಮೂನೆಯಲ್ಲಿ ಇತ್ತೀಚಿನ ಭಾವಚಿತ್ರ / ಮಾದರಿ ಸಹಿ ದೃಢೀಕರಣ ಪತ್ರ (ಗೆಜೆಟೆಡ್ ಅಧಿಕಾರಿಯ ದೃಢೀಕರಣ), ಸ್ವಪ್ರಮಾಣ ಪತ್ರ.
ಇತ್ತೀಚಿನ ಕಂದಾಯ ರಶೀದಿ, ಖಾತಾ ದೃಢೀಕರಣ ಪತ್ರ, ಖಾತಾ ನಕಲು ಪ್ರತಿ, ಮಂಜೂರಾದ ಕಟ್ಟಡದ ನಕ್ಷೆ, ನೀರಿನ ಸಂಪರ್ಕ ಕಾರ್ಯಾದೇಶ, ವಿದ್ಯುಚ್ಛಕ್ತಿ ಸಂಪರ್ಕ ಕಾರ್ಯಾದೇಶ, ವಾಸದ ವಿಳಾಸಕ್ಕೆ ಪುರಾವೆ (ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ ಮತ್ತು ಇತರೆ) ಈ ಎಲ್ಲಾ ದಾಖಲಾತಿಗಳನ್ನು ನಿಗದಿತ ಶುಲ್ಕದೊಂದಿಗೆ ಕಡ್ಡಾಯವಾಗಿ ಆನ್‌ಲೈನ್ ಮುಖಾಂತರವೇ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.
ಮೊದಲ ಹಂತದಲ್ಲಿ ಪಿಳ್ಳಣ್ಣ ಗಾರ್ಡನ್ 3ನೇ ಹಂತದ ಬಡಾವಣೆಯಲ್ಲಿ 783 ಅನಧಿಕೃತ ಕಟ್ಟಡಗಳನ್ನು ಗುರುತಿಸಲಾಗಿದ್ದು, ಈ ಪೈಕಿ 516 ಅನಧಿಕೃತ ಕಟ್ಟಡದಾರರಿಗೆ ಡಿಮಾಂಡ್ ನೋಟಿಸ್ ಜಾರಿಗೊಳಿಸಲಾಗಿರುತ್ತದೆ. ಆರ್.ಎಂ.ವಿ. ಬಡಾವಣೆಯಲ್ಲಿ 160 ಅನಧಿಕೃತ ಕಟ್ಟಡದಾರರು ಮತ್ತು ಹೆಚ್ಆರ್ಬಿಆರ್ ಬಡಾವಣೆಯಲ್ಲಿ 41 ಅನಧಿಕೃತ ಕಟ್ಟಡದಾರರಿಗೆ ಡಿಮಾಂಡ್ ನೋಟಿಸ್ಅನ್ನು ಪ್ರಾಧಿಕಾರ ಜಾರಿಗೊಳಿಸಿದೆ.
ಪೂರ್ವ ವಿಭಾಗಕ್ಕೆ ಸಂಬಂಧಪಟ್ಟಂತೆ ಹೆಚ್ಎಸ್ಆರ್ ಬಡಾವಣೆಯಲ್ಲಿ 555 ಅನಧಿಕೃತ ಕಟ್ಟಡಗಳನ್ನು ಗುರುತಿಸಿದ್ದು, ಈ ಪೈಕಿ 113 ಅನಧಿಕೃತ ಕಟ್ಟಡದಾರರಿಗೆ ಡಿಮಾಂಡ್ ನೋಟಿಸ್ ಜಾರಿಗೊಳಿಸಲಾಗಿದ್ದು. ಉಳಿದ ಪ್ರಾಧಿಕಾರ ವ್ಯಾಪ್ತಿಯ ಬಡಾವಣೆಗಳಿಗೆ ಹಂತ ಹಂತವಾಗಿ ನೋಟಿಸ್ ಜಾರಿಗೊಳಿಸುವ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ ಎಂದು ಬಿಡಿಎ ತಿಳಿಸಿದೆ.
ಬಿಡಿಎ ಬಡಾವಣೆಗಳಿಗೆ ಸಂಬಂಧಿಸಿದಂತೆ ಪ್ರಾಧಿಕಾರದ ಕಂದಾಯ ಅಧಿಕಾರಿಗಳು ಮತ್ತು ಅಭಿಯಂತರರ ಸಹಯೋಗದೊಂದಿಗೆ ಅನಧಿಕೃತ ನಿರ್ಮಾಣ ಮಾಡಿಕೊಂಡಿರುವ ಕಟ್ಟಡಗಳ ಮಾಲೀಕರುಗಳಿಗೆ ತಿಳುವಳಿಕೆ ಪತ್ರಗಳನ್ನು ಜಾರಿಗೊಳಿಸುವ ಕಾರ್ಯವು ಪ್ರಗತಿಯಲ್ಲಿದೆ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಇನ್ಮುಂದೆ 24x7 ಗಂಟೆ ತೆರೆದಿರಲಿವೆ ವಾಣಿಜ್ಯ ಮಳಿಗೆಗಳು!