ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ (BDA) ಖಾಲಿ ಇರುವ ಟೈಪಿಸ್ಟ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಪರಿಶಿಷ್ಟ ಪಂಗಡದ ಬ್ಯಾಕ್ಲಾಗ್ ಹುದ್ದೆಗಳು ಇವಾಗಿವೆ. ಒಟ್ಟು ಎರಡು ಹುದ್ದೆಗಳು ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಪಿಯುಸಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಈ ಹುದ್ದೆ ನೇಮಕಾತಿ ಅರ್ಜಿ ಸಲ್ಲಿಕೆ, ವೇತನ ಸೇರಿದಂತೆ ಇನ್ನಿತರ ಮಾಹಿತಿ ಇಲ್ಲಿದೆ.
ಹುದ್ದೆ ವಿವರ: ಬಿಡಿಎಯಲ್ಲಿ ಅರ್ಜಿ ಆಹ್ವಾನಿಸಿರುವ ಹುದ್ದೆಗಳ ಮಾಹಿತಿ ಇಂತಿದೆ. ಬೆರಳಚ್ಚುಗಾರ 1, ಶೀಘ್ರ ಲಿಪಿಗಾರ 1 ಒಟ್ಟು 2 ಹುದ್ದೆ ಭರ್ತಿ ಮಾಡಲಾಗುವುದು.
ವಿದ್ಯಾರ್ಹತೆ: ಅಭ್ಯರ್ಥಿಗಳು ಪಿಯುಸಿ ಉತ್ತೀರ್ಣರಾಗಿರಬೇಕು. ಬೆರಳಚ್ಚುಗಾರ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯಿಂದ ನಡೆಸಲಾಗುವ ಕನ್ನಡ ಮತ್ತು ಇಂಗ್ಲೀಷ್ ಸೀನಿಯರ್ ಗ್ರೇಡ್ ಟೈಪ್ ರೈಟಿಂಗ್ ಪರೀಕ್ಷೆಯಲ್ಲೂ ಉತ್ತೀರ್ಣರಾಗಿರಬೇಕು. ಶೀಘ್ರ ಲಿಪಿಗಾರ ಹುದ್ದೆಗೆ ಟೈಪ್ರೈಟಿಂಗ್ ಅರ್ಹತೆ ಜೊತೆಗೆ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯಿಂದ ನಡೆಸಲಾಗುವುದು ಕನ್ನಡ ಮತ್ತು ಇಂಗ್ಲಿಷ್ ಸೀನಿಯರ್ ಗ್ರೇಡ್ ಶೀಘ್ರಲಿಪಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ವಯೋಮಿತಿ: ಈ ಹುದ್ದೆಗೆ ಪರಿಶಿಷ್ಟ ಪಂಗಡ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಕೆಗೆ ಅರ್ಹರಾಗಿದ್ದು, ಅಭ್ಯರ್ಥಿಗಳು ಕನಿಷ್ಠ 18 ವರ್ಷ ಮತ್ತು ಗರಿಷ್ಠ 40 ವರ್ಷ ಮೀರರಬಾರದು.
ಅರ್ಜಿ ಸಲ್ಲಿಕೆ: ಈ ಹುದ್ದೆಗೆ ಅಭ್ಯರ್ಥಿಗಳು ಅಂಚೆ ಮತ್ತು ಖುದ್ದಾಗಿ ಕಚೇರಿಯಲ್ಲಿ ಅರ್ಜಿ ಸಲ್ಲಿಕೆ ಮಾಡಬೇಕಿದೆ. ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲಾತಿ ಜೊತೆಗೆ ಈ ಕೆಳಗಿನ ವಿಳಾಸಕ್ಕೆ ಸಲ್ಲಿಕೆ ಮಾಡಬಹುದಾಗಿದೆ. ಅರ್ಜಿ ಸಲ್ಲಿಕೆ ವೇಳೆ ಎಸ್ಎಸ್ಎಲ್ಸಿ ಪರೀಕ್ಷೆಯ ದೃಢೀಕೃತ ಪ್ರಮಾಣಪತ್ರ, ನಿಗದಿತ ವಿದ್ಯಾರ್ಹತೆ ದೃಢೀಕೃತ ಅಂಕಪಟ್ಟಿ, ಜಾತಿ ದೃಢೀಕರಣ ಪತ್ರಗಳು ಲಗತ್ತಿಸುವುದು ಕಡ್ಡಾಯ. ಎರಡು ಹುದ್ದೆಗೆ ಅರ್ಜಿ ಸಲ್ಲಿಸುವವರು ಪ್ರತ್ಯೇಕ ಅರ್ಜಿ ಸಲ್ಲಿಕೆ ಮಾಡಬೇಕು.
ಅರ್ಜಿ ಸಲ್ಲಿಸುವ ವಿಳಾಸ: ಆಯುಕ್ತರು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಟಿ ಚೌಡಯ್ಯ ರಸ್ತೆ, ಕುಮಾರ ಪಾರ್ಕ್ ಪಶ್ಚಿಮ, ಬೆಂಗಳೂರು- 560020
ಈ ಹುದ್ದೆಗೆ ನವೆಂಬರ್ 9ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಡಿಸೆಂಬರ್ 8 ಆಗಿದೆ. ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ eng.bdabangalore.org ಇಲ್ಲಿಗೆ ಭೇಟಿ ನೀಡಬಹುದಾಗಿದೆ.