ಬೆಂಗಳೂರು : ಅಭಿವೃದ್ಧಿ ಪ್ರಾಧಿಕಾರ ತಿದ್ದುಪಡಿ ವಿಧೇಯಕವನ್ನು ಸಚಿವ ಮಾಧುಸ್ವಾಮಿ ವಿಧಾನ ಪರಿಷತ್‌ನಲ್ಲಿ ಪ್ರಸ್ತಾಪಿಸಿದರು. ಈ ಕುರಿತು ಮಾತನಾಡಿದ ಅವರು, ಬಿಡಿಎ ನಿವೇಶನ ಇಲ್ಲವೇ ಒತ್ತುವರಿ ಮಾಡಿಕೊಂಡಿದ್ರೆ ಒಂದು ಹಂತದಲ್ಲಿ ದಂಡ ಪಾವತಿಸಿ ಸಕ್ರಿಯಗೊಳಿಸಲು ಕ್ರಮಕೈಗೊಳ್ಳುತ್ತೇವೆ. ಒಂದು ವರ್ಷ ಕಾಯುತ್ತೇವೆ. ಒತ್ತುವರಿ ಅರ್ಜಿ ಸಲ್ಲಿಸಿದವರಿಗೆ ಅವಕಾಶ ಮಾಡಿಕೊಡುತ್ತೇವೆ.
ಅರ್ಜಿ ಸಲ್ಲಿಸದವರ ಭೂಮಿ ವಶಪಡಿಸಿಕೊಳ್ಳುತ್ತೇವೆ. ಅಗತ್ಯವಿದ್ದರೆ ಡೆಮಾಲಿಶ್ ಮಾಡುತ್ತೇವೆ. ಶೇ.10 ರಿಂದ ಶೇ.40ರವರೆಗೆ ನಿವೇಶನ ಗಾತ್ರ ಆಧರಿಸಿ ದಂಡ ವಿಧಿಸುತ್ತೇವೆ. ಈ ತಿದ್ದುಪಡಿ ವಿಧೇಯಕ ಅನುಮೋದನೆ ನೀಡಬೇಕೆಂದು ಮನವಿ ಮಾಡಿದರು. ಸದಸ್ಯರಾದ ಪಿ ಆರ್ ರಮೇಶ್ ಮಾತನಾಡಿ, ಸರ್ಕಾರದ ಮೂಲ ಉದ್ದೇಶಕ್ಕೆ ಇದು ವ್ಯತಿರಿಕ್ತವಾಗಿದೆ. ಯೋಜನೆ ಹಾಗೂ ಅಭಿವೃದ್ಧಿಗೆ ಇದು ಮಾರಕವಾಗಲಿದೆ. ಬಿಡಿಎ ಜಾಗ ಬಹುತೇಕ ಬಿಬಿಎಂಪಿ ವ್ಯಾಪ್ತಿಗೆ ಬಂದಿದೆ. ಅಲ್ಲಿಗೆ ಹೋಗಿ ನೀವು ಹೇಗೆ ಕಾರ್ಯ ನಿರ್ವಹಿಸುತ್ತೀರಿ ಎಂದು ಪ್ರಶ್ನಿಸಿದರು. ಈ ವೇಳೆ ಸಚಿವ ಮಾಧುಸ್ವಾಮಿ ಮಧ್ಯಪ್ರವೇಶಿಸಿ ಮಾತನಾಡಿ, ಇಲ್ಲಿ ಕೇವಲ ಬಿಡಿಎ ಜಾಗ ಮಾತ್ರ ಬರಲಿದೆ.
ಇತರೆ ಭೂಮಿ ಇದರ ವ್ಯಾಪ್ತಿಗೆ ಬರಲ್ಲ. ನಿವೇಶನದ ಇಶ್ಯು ಇಲ್ಲಿಲ್ಲ. ನಿವೇಶನ ಹಂಚಿಕೆ ಆಗಲ್ಲ. 12 ವರ್ಷದಿಂದ ವಾಸವಾಗಿರುವ 70 ಸಾವಿರ ಮನೆಗಳಿವೆ. ಎಲ್ಲರನ್ನೂ ಖಾಲಿ ಮಾಡಿಸಿಲ್ಲ. ಮಾಡಿಸೋಕೂ ಆಗಲ್ಲ. ಇದರಿಂದ ದಂಡ ಕಟ್ಟಿಸಿಕೊಳ್ಳುವುದು ಮಾತ್ರ ಮಾರ್ಗ. ಎಲ್ಲಾ ಬಿಡಿಎ ಬಡಾವಣೆಗಳಲ್ಲಿವೆ. ಮಾನವೀಯತೆ ದೃಷ್ಟಿಯಿಂದ ಬಿಡಿಎಗೂ ಆದಾಯ ಬರುವ ದಾರಿ ಕಂಡುಕೊಂಡಿದ್ದೇವೆ ಎಂದರು.
ಇದಕ್ಕೆ ಸಚಿವ ಸುರೇಶ್‌ಕುಮಾರ್ ಸಹ ಸಹಮತ ವ್ಯಕ್ತಪಡಿಸಿದರು. ಇಲ್ಲೇ 12 ವರ್ಷ ಮೇಲ್ಪಟ್ಟು ವಾಸವಾಗಿರುವ ಮನೆ ಬಿಡುತ್ತೇವೆ. ನಿವೇಶನ ಇದ್ದರೆ ಅದನ್ನು ವಶಪಡಿಸಿಕೊಂಡು ನಮ್ಮ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು. ಸದಸ್ಯರಾದ ಸಿ ಎಂ ಇಬ್ರಾಹಿಂ, ಬಿ ಕೆ ಹರಿಪ್ರಸಾದ್, ಅಪ್ಪಾಜಿಗೌಡ, ತಿಪ್ಪೇಸ್ವಾಮಿ ಮತ್ತಿತರ ಸದಸ್ಯರು ತಿದ್ದುಪಡಿ ವಿಧೇಯಕ ಸಂಬಂಧ ಮಾತನಾಡಿದರು.
ಸಚಿವರ ಪ್ರತಿಕ್ರಿಯೆ : ತುಂಬಾ ಒಳ್ಳೆಯ ಉದ್ದೇಶದಿಂದ ತಿದ್ದುಪಡಿ ಮಾಡುತ್ತಿದ್ದೇವೆ. ಮುಂದೆ ಏನಾಗಲಿದೆ ಎಂಬ ಚರ್ಚೆ ನಡೆಯುತ್ತದೆ. ಸಾಕಷ್ಟು ಸರ್ಕಸ್ ನಡೆದಿದೆ. ಕೋರ್ಟ್ ಮೂಲಕವೂ ಪ್ರಯತ್ನಿಸಲಾಗಿದೆ. ಇದು ಬೇರೆ ದಾರಿಯಿಲ್ಲದೇ ಈ ಹಾದಿ ಹಿಡಿದಿದ್ದೇವೆ. ಪ್ರಸ್ತಾವ ಅನುಮೋದಿಸಿ ಎಂದು ಮನವಿ ಮಾಡಿದ್ರು. ಧ್ವನಿಮತದ ಮೂಲಕ ಪ್ರಸ್ತಾವ ಅಂಗೀಕಾರವಾಯಿತು.