ಬೆಂಗಳೂರು: ನಗರದ 32 ಹಾಟ್ ಸ್ಪಾಟ್ಗಳಲ್ಲಿ ಇನ್ನಷ್ಟು ಕಟ್ಟೆಚ್ಚರ ವಹಿಸಲು ಬಿಬಿಎಂಪಿ ಸಿದ್ಧತೆ ನಡೆಸುತ್ತಿದೆ. ಈ ಕುರಿತು ಮಾಹಿತಿ ನೀಡಿರುವ ಬಿಬಿಎಂಪಿ ಆಯುಕ್ತ ಬಿ.ಹೆಚ್. ಅನಿಲ್ ಕುಮಾರ್, ರಾಜ್ಯ ಸರ್ಕಾರ ಲಾಕ್ಡೌನ್ಗೆ ಹೊಸ ಸುತ್ತೋಲೆ ಹೊರಡಿಸಿದೆ. ನಿಯಂತ್ರಿತ ವಲಯ, ಬಫರ್ ಝೋನ್ ಹೇಗಿರಬೇಕು ಎಂದು ಸರ್ಕಾರ ನಿರ್ದೇಶನ ಕೊಟ್ಟಿದೆ ಎಂದು ತಿಳಿಸಿದ್ದಾರೆ.
ನಗರದ 32 ಹಾಟ್ ಸ್ಪಾಟ್ಗೂ ನಿಯಂತ್ರಿತ ವಲಯ ಹಾಗೂ ಬಫರ್ ಝೋನ್ ಮಾಡಿ ಆದೇಶ ಹೊರಡಿಸಲಾಗಿದೆ. ನಿಯಂತ್ರಿತ ವಲಯದಲ್ಲಿ ಒಬ್ಬ ಕಮಾಂಡರ್ ಇರ್ತಾರೆ. ಅವರ ಕೆಳಗೆ ಆರೋಗ್ಯ ಅಧಿಕಾರಿಗಳು, ಇಂಜಿನಿಯರ್ಗಳು, ಆಶಾ ಕಾರ್ಯಕರ್ತೆಯರು, ಪೌರ ಕಾರ್ಮಿಕರು ಇರುತ್ತಾರೆ. ಕಮಾಂಡರ್ ಅವರಿಗೆ ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್ ಪವರ್ ಇರುತ್ತದೆ. ಅವರು ಆ ವಲಯಕ್ಕೆ ಜವಾಬ್ದಾರರು ಆಗಿರುತ್ತಾರೆ. ಅವರ ಉಸ್ತುವಾರಿಯಲ್ಲಿ ಡೋರ್ ಟು ಡೋರ್ ಸರ್ವೇ, ಪ್ರತಿ ಮನೆಯ ಆರೋಗ್ಯ ಸಮೀಕ್ಷೆ ನಡೆಸಲಾಗುತ್ತದೆ. ಇವತ್ತು ಆ ಕಮಾಂಡರ್ಗಳನ್ನು ನೇಮಕ ಮಾಡಿ ಆದೇಶ ಹೊರಡಿಸುತ್ತೇವೆ ಎಂದು ಬಿಬಿಎಂಪಿ ಆಯುಕ್ತರು ವಿವರಿಸಿದರು.
ಇನ್ನು ಒಂದು ಕಮಾಂಡರ್ ತಂಡದಲ್ಲಿ 6 ರಿಂದ 7 ಜನ ಇರ್ತಾರೆ. ನಿಯಂತ್ರಿತ ವಲಯದಲ್ಲಿ ಯಾವುದೇ ವ್ಯಕ್ತಿ ಒಳಗೆ ಹಾಗೂ ಹೊರಗೆ ಬರುವ ಹಾಗಿಲ್ಲ. ಅಗತ್ಯ ವಸ್ತುಗಳನ್ನು ಸರಬರಾಜು ಮಾಡಲು ನಿಗದಿಪಡಿಸಿದ ವ್ಯಕ್ತಿಗಳೇ ಇರಬೇಕು ಎಂದರು. ಎಲ್ಲೆಲ್ಲಿ ಹೆಚ್ಚು ಕೊರೊನಾ ಪ್ರಕರಣಗಳಿವೆಯೋ ಆ ಏರಿಯಾಗಳು ಕಂಟೋನ್ಮೆಂಟ್ ಝೋನ್ಗಳಾಗಲಿವೆ ಎಂದು ತಿಳಿಸಿದರು. ಪಾಸಿಟಿವ್ ಕೇಸ್ ಕಾಣಿಸಿಕೊಂಡ ಮನೆಯನ್ನು ಎಪಿಸೆಂಟರ್ ಎಂದು ಗುರುತಿಸಿ, ಎಪಿಸೆಂಟರ್‌ನಿಂದ ಮೂರು ಕಿಲೋ ಮೀಟರ್ ಕಂಟೋನ್ಮೆಂಟ್ ಝೋನ್ ಮಾಡಲಾಗುತ್ತಿದೆ. ಬ್ಯಾರಿಕೇಡ್ ಹಾಕಿ ರಸ್ತೆಗಳ‌್ನು ಮುಚ್ಚಲಾಗುತ್ತಿದೆ ಎಂದು ಹೇಳಿದರು.
ಮೂರು ಕಿಲೋ ಮೀಟರ್ ನಂತರದ ಐದು ಕಿಲೋ ಮೀಟರ್ ವ್ಯಾಪ್ತಿ ಬಫರ್ ಝೋನ್ ಇರಲಿದೆ. ಒಟ್ಟು ಎಂಟು ಕಿಲೋ ಮೀಟರ್ವರೆಗೂ ಕಂಟೋನ್ಮೆಂಟ್ ಝೋನ್ ಹಾಗೂ ಬಫರ್ ವಲಯ ವ್ಯಾಪ್ತಿ ಇರಲಿದೆ. ಏರಿಯಾದ ಮನೆಗಳನ್ನು ಸೆಕ್ಟರ್ ಗಳಾಗಿ ವಿಭಾಗಿಸಿ, ತಲಾ 50 ಮನೆಗಳಿರೋ ಜಾಗ ಒಂದು ಸೆಕ್ಟರ್ ಆಗಲಿದೆ. ಸೆಕ್ಟರ್ ವೈಸ್ ಹೆಲ್ತ್ ಚೆಕಪ್ ಮಾಡಲಾಗುತ್ತದೆ. ಈ ಝೋನ್ನ ಪ್ರತಿಯೊಬ್ಬರ ಚಲನವಲನದ ಮೇಲೆ ಹದ್ದಿನ ಕಣ್ಣು ಇಡಲಾಗುತ್ತದೆ. ಆ ಪ್ರದೇಶದಿಂದ ಅನುಮತಿ ಇಲ್ಲದೇ ವಾಹನಗಳು ಹೊರ ಬರುವ ಹಾಗಿಲ್ಲ. ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಅವಕಾಶ ಇರುತ್ತದೆ ಎಂದು ಬಿಬಿಎಂಪಿ ಆಯುಕ್ತ ಅನೀಲ್ ಕುಮಾರ್ ಮಾಹಿತಿ ನೀಡಿದ್ದಾರೆ.