ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ವಾರ್ಡ್ ವಿಂಗಡಣೆಯ ನಂತರ ರಾಜ್ಯ ಸರ್ಕಾರ 243 ವಾರ್ಡ್‌ಗಳಿಗೆ ಮೀಸಲಾತಿ ಅಧಿಸೂಚನೆ ಪ್ರಕಟಿಸಿದೆ. ಇದು ಕೆಲವು ಪಕ್ಷದ ಮುಖಂಡರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಪ್ರಮುಖ ವಾರ್ಡ್‌ಗಳ ಮೇಲೆ ನಿಗಾ ಇರಿಸಿದ್ದ ಬಿಬಿಎಂಪಿ ಹಿರಿಯ ಮಾಜಿ ಸದಸ್ಯರಿಗೆ, ಇದೀಗ ವಾರ್ಡ್ಗಳೇ ಇಲ್ಲದಂತೆ ಆಗಿದೆ. ಜತೆಗೆ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಿರುವುದು ಪಾಲಿಕೆಯ ಹಲವು ಮಾಜಿ ಸದಸ್ಯರಿಗೆ ತಲೆಬಿಸಿ ಉಂಟುಮಾಡಿದೆ.
ಮಾಜಿ ಮೇಯರ್ ಮಡಿವಾಳ ವಾರ್ಡ್ನ ಮಂಜುನಾಥ್ ರೆಡ್ಡಿ, ಗೋರಪ್ಪನಪಾಳ್ಯದ ರಿಜ್ವಾನ್ ನವಾಬ್ ವಾರ್ಡ್‌ಗೆ ಸಾಮಾನ್ಯ ವರ್ಗ (ಮಹಿಳೆ) ಮೀಸಲಿಡಲಾಗಿದೆ. ಡಿ.ಜೆ.ಹಳ್ಳಿಯ ಮಾಜಿ ಮೇಯರ್ ಆರ್.ಸಂಪತ್ ರಾಜ್ ತಮ್ಮ ವಾರ್ಡ್ನಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲದಂತಾಗಿದ್ದು, ಒಬಿಸಿ ಮಹಿಳೆಗೆ ಮೀಸಲು ಒದಗಿಸಲಾಗಿದೆ.
ಗೌತಮ್ ಜೈನ್ ಸ್ಪರ್ಧೆ ಇಲ್ಲ: ಜೋಗುಪಾಳ್ಯ ವಾರ್ಡ್ ಸಾಮಾನ್ಯ ಮಹಿಳೆಗೆ ಮೀಸಲಾಗಿರುವುದರಿಂದ ಮಾಜಿ ಮೇಯರ್ ಗೌತಮ್ ಜೈನ್ ಅವರಿಗೂ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ. 234 ವಾರ್ಡ್‌ಗಳ ಪಟ್ಟಿಯ ಪ್ರಕಾರ, ಸಾಮಾನ್ಯ ವರ್ಗ ಮತ್ತು ಸಾಮಾನ್ಯ ವರ್ಗದ ಮಹಿಳೆಯರು 129 ವಾರ್ಡ್‌ಗಳಲ್ಲಿ ಸ್ಪರ್ಧಿಸಬಹುದು.
ಇದನ್ನೂ ಓದಿ: ಮೋದಿ ದೂರದೃಷ್ಟಿ ನಾಯಕ, ಅಮಿತ್ ಶಾ ದಕ್ಷ ನಾಯಕ: ಸಿಎಂ ಬೊಮ್ಮಾಯಿ ಬಣ್ಣನೆ
ಮಹಿಳೆಯರಿಗೆ ಆದ್ಯತೆ: ಸಾಮಾನ್ಯ, ಹಿಂದುಳಿದ ವರ್ಗ ಎ, ಬಿ, ಎಸ್‌ಸಿ ಮತ್ತು ಎಸ್ಟಿ ಮೀಸಲಾತಿಯಡಿ ಮಹಿಳೆಯರಿಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಸದ್ಯ ಅಧಿಸೂಚನೆ ದಿನಾಂಕದಿಂದ 7 ದಿನಗಳವರೆಗೆ ಸಾರ್ವಜನಿಕರಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. ಆಕ್ಷೇಪಣೆಗಳನ್ನು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ, ಕೊಠಡಿ ಸಂಖ್ಯೆ 436, 4ನೇ ಮಹಡಿ, ವಿಧಾನಸೌಧ, ಬೆಂಗಳೂರು 560001 ಸಲ್ಲಿಸಬೇಕಿದೆ.