ಬೆಂಗಳೂರು: ಬಿಬಿಎಂಪಿಯ ಎರಡು ವಾರ್ಡ್ ಗಳಿಗೆ ಮೇ.29 ರಂದು ನಡೆಯಲಿರುವ ಉಪಚುನಾವಣೆಗೆ ಮೈತ್ರಿ ಪಕ್ಷದ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಂಡಿದ್ದು, ನಾಳೆ ನಾಮಪತ್ರ ಸಲ್ಲಿಸಲಿದ್ದಾರೆ. ಸಗಾಯಪುರ ವಾರ್ಡ್ನ ಕಾಂಗ್ರೆಸ್ ಬೆಂಬಲಿತ ಪಕ್ಷೇತರ ಸದಸ್ಯ ಏಳುಮಲೈ ಹಾಗೂ ಕಾವೇರಿಪುರ ವಾರ್ಡ್ನ ಜೆಡಿಎಸ್ ಸದಸ್ಯೆ ರಮೀಳಾ ನಿಧನದಿಂದ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆಯುತ್ತಿದೆ. ಅದರಂತೆ ಸಗಾಯಪುರ ವಾರ್ಡ್ನಿಂದ ಮೈತ್ರಿ ಬೆಂಬಲಿತ ಕಾಂಗ್ರೆಸ್ ಅಭ್ಯರ್ಥಿಯಾಗಿ ಏಳುಮಲೈ ಸಹೋದರಿ ಪಳಿನಿಯಮ್ಮಾಳ್, ಕಾವೇರಿಪುರ ವಾರ್ಡ್ನಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸುಶೀಲಾ ಸುರೇಶ್ ಅವರನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ.
ಕಾವೇರಿಪುರ ವಾರ್ಡ್ನಿಂದ ರಮೀಳಾ ಉಮಾಶಂಕರ್ ಅವರ ಕುಟುಂಬ ಸದಸ್ಯರಿಗೆ ಟಿಕೆಟ್ ನೀಡುವ ಕುರಿತು ಸೋಮವಾರ ಜೆಡಿಎಸ್ ಮುಖಂಡರು ಚರ್ಚೆ ನಡೆಸಿದ್ದರು. ಆ ಕುರಿತು ಮುಖಂಡರು ಒಮ್ಮತದ ನಿರ್ಧಾರ ಬರಲು ಸಾಧ್ಯವಾಗದ ಕಾರಣ, ಅಂತಿಮವಾಗಿ ಜೆಡಿಎಸ್ ಕಾರ್ಯಕರ್ತೆ ಸುಶೀಲಾ ಸುರೇಶ್ ಅವರಿಗೆ ಟಿಕೆಟ್ ನೀಡಲು ತೀರ್ಮಾನಿಸಲಾಯಿತು.
ಸಗಾಯಪುರ ವಾರ್ಡ್ನಲ್ಲಿ ಮೈತ್ರಿ ಪಕ್ಷದ ಬೆಂಬಲಿತ ಅಭ್ಯರ್ಥಿಯಾಗಿ ಕಾಂಗ್ರೆಸ್ನಿಂದ ಏಳುಮಲೈ ಸಹೋದರಿ ಪಳಿನಿಯಮ್ಮಾಳ್ ಅವರಿಗೆ ಟಿಕೆಟ್ ನೀಡಲಾಗಿದೆ. ಆದರೆ, ಕಳೆದ ಬಾರಿ ಜೆಡಿಎಸ್ನಿಂದ ಸ್ಪರ್ಧೆ ಮಾಡಿ ಪರಾಭವಗೊಂಡಿದ್ದ ಮಾರಿಮುತ್ತು ಜೆಡಿಎಸ್ನಿಂದ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಗೆ ಮುಂದಾಗಿದ್ದಾರೆ.
ಬಿಜೆಪಿ ಅಭ್ಯರ್ಥಿಗಳು ಇಂದು ಅಂತಿಮ:
ಕಾವೇರಿಪುರ ವಾರ್ಡ್ನಿಂದ ಬಿಜೆಪಿ ಅಭ್ಯರ್ಥಿಯಾಗಿ ಪಾಲಿಕೆ ಮಾಜಿ ಸದಸ್ಯ ಚನ್ನಪ್ಪ ಪುತ್ರಿ ಸಿ.ಪಲ್ಲವಿ ಸ್ಪರ್ಧಿಸಲಿದ್ದಾರೆ. ಸಗಾಯಪುರ ವಾರ್ಡ್ನಿಂದ ಬಿಜೆಪಿ ಅಭ್ಯರ್ಥಿಯ ಆಯ್ಕೆ ಇನ್ನು ಅಂತಿಮವಾಗಿಲ್ಲ. ಇಂದು ರಾತ್ರಿ ಸಭೆಯ ಬಳಿಕ ಅಂತಿಮಗೊಳಿಸಲಾಗುತ್ತದೆ ಎಂದು ವಿಪಕ್ಷ ನಾಯಕ ಪದ್ಮನಾಭ ರೆಡ್ಡಿ ತಿಳಿಸಿದ್ದಾರೆ. ಇನ್ನೊಂದೆಡೆ ಪೌರಕಾರ್ಮಿಕ ಸಂಘಟನೆಯ ಮುಖಂಡರಿಗೆ ಟಿಕೆಟ್ ನೀಡುವ ಸಾಧ್ಯತೆಯಿದ್ದು, ಟಿಕೆಟ್ಗಾಗಿ ಪೌರಕಾರ್ಮಿಕ ಸಂಘದ ಜೈರೀಂ, ಪ್ರಕಾಶ್ ಸೇರಿ ಹಲವರು ಲಾಬಿ ನಡೆಸುತ್ತಿದ್ದಾರೆ.
ಸಗಾಯಪುರ ವಾರ್ಡ್ಗೆ ಸೋಮವಾರ ಮೂವರು ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಇರ್ಷಾದ್ ಅಹಮದ್, ಎಸ್. ಏಳುಮಲೈ ಹಾಗೂ ಪಿ.ಸೆಲ್ವಿ ಎಂಬುವವರು ಉಮೇದುವಾರಿಕೆ ಸಲ್ಲಿಕೆ ಮಾಡಿದ್ದಾರೆ.