ಬೆಂಗಳೂರು : ಮೊದಲ ಬಾರಿಗೆ, ನಗರದ ಹೃದಯಭಾಗದಲ್ಲಿರುವ 13.41 ಕಿಮೀ ಉದ್ದದ 12 ಟೆಂಡರ್‌ಶೂರ್ ರಸ್ತೆಗಳನ್ನು ನಿರ್ವಹಿಸಲು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ನಿಧಿಯನ್ನು ಕೇಳಲು ಪಾಲಿಕೆ ಮುಂದಾಗಿದೆ. ಈ ರಸ್ತೆಗಳನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಗತ್ಯವಿದ್ದಾಗ ಡಾಂಬರೀಕರಣಗೊಳಿಸುತ್ತದೆ. ಪ್ರತಿಯಾಗಿ ಕಂಪನಿಗಳು ಬ್ರ್ಯಾಂಡಿಂಗ್‌ಗಾಗಿ ಮೀಸಲಾದ ಸ್ಥಳವನ್ನು ಪಡೆಯಲಿದೆ.
ಬಿಬಿಎಂಪಿ ಈ ರಸ್ತೆಗಳ ನಿರ್ವಹಣಾ ವೆಚ್ಚವನ್ನು ವರ್ಷಕ್ಕೆ ಪ್ರತಿ ಕಿ.ಮೀಗೆ 50 ಲಕ್ಷ ಎಂದು ಅಂದಾಜಿಸಿದೆ. ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ನಿರ್ವಹಣೆಗಾಗಿ ಗುರುತಿಸಲಾದ ರಸ್ತೆಗಳಲ್ಲಿ ಚರ್ಚ್ ಸ್ಟ್ರೀಟ್, ಕನ್ನಿಂಗ್ಹ್ಯಾಮ್ ರಸ್ತೆ, ರೆಸಿಡೆನ್ಸಿ ರಸ್ತೆ, ರಿಚ್ಮಂಡ್ ರಸ್ತೆ ಮತ್ತು ಸೇಂಟ್ ಮಾರ್ಕ್ಸ್ ರಸ್ತೆ ಸೇರಿವೆ. ಪಾಲಿಕೆ ಬ್ರ್ಯಾಂಡಿಂಗ್‌ಗಾಗಿ ಒಂದು ಕಿಲೋಮೀಟರ್‌ನಲ್ಲಿ ನಾಲ್ಕು ಸ್ಥಳಗಳಲ್ಲಿ 3 x 2 ಅಡಿ ಜಾಗವನ್ನು ನೀಡುತ್ತದೆ. ಆದರೆ ಯಾವುದೇ ವಾಣಿಜ್ಯ ಜಾಹೀರಾತುಗಳನ್ನು ಅನುಮತಿಸುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಸ್ತೆಗಳ ವಾರ್ಷಿಕ ನಿರ್ವಹಣೆಗೆ ಖಾಸಗಿ ಸಂಸ್ಥೆಗಳನ್ನು ತೊಡಗಿಸಿಕೊಳ್ಳುವ ಪರಿಕಲ್ಪನೆ ಬೆಂಗಳೂರಿಗೆ ಹೊಸದಾದರೂ, ಬಿಬಿಎಂಪಿ ಮತ್ತು ನಮ್ಮ ಮೆಟ್ರೊ ಎರಡೂ ನಗರದ ಹಲವಾರು ಭಾಗಗಳಲ್ಲಿ ರಸ್ತೆ ಮೀಡಿಯನ್‌ಗಳನ್ನು ನಿರ್ವಹಿಸಲು ಬಿಲ್ಡರ್‌ಗಳು ಸೇರಿದಂತೆ ಕಾರ್ಪೊರೇಟ್ ಸಂಸ್ಥೆಗಳ ಸಹಾಯವನ್ನು ಪಡೆಯಲಾಗುತ್ತದೆ ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಬಿಬಿಎಂಪಿ ಇಂಜಿನಿಯರಿಂಗ್ ಇನ್ ಚೀಫ್ ಬಿ ಎಸ್ ಪ್ರಹ್ಲಾದ್, 12 ಟೆಂಡರ್‌ಶೂರ್ ರಸ್ತೆಗಳನ್ನು ವಿಶ್ವ ದರ್ಜೆಯ ಮಟ್ಟಕ್ಕೆ ತರಲಾಗುತ್ತದೆ. ಆದರೆ ಗುತ್ತಿಗೆದಾರರಿಗೆ ವಿಳಂಬ ಪಾವತಿ ಸೇರಿದಂತೆ ವಿವಿಧ ಕಾರಣಗಳಿಂದ ಬಿಬಿಎಂಪಿಗೆ ಅವುಗಳನ್ನು ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸಿಎಸ್ಆರ್ ಹಣವನ್ನು ಬಳಸಿಕೊಳ್ಳಲು ಮುಂದಾಗಿದ್ದೇವೆ. ಖಾಸಗಿ ಕಂಪನಿಗಳಿಗೆ ನಗರಕ್ಕೆ ಕೊಡುಗೆ ನೀಡಲು ಅವಕಾಶವನ್ನು ನೀಡಲಾಗುತ್ತದೆ ಎಂದಿದ್ದಾರೆ.
ಯುನೈಟೆಡ್ ವೇ ಸ್ವಯಂ ಸೇವಾ ಸಂಸ್ಥೆಯ ಬೆಂಗಳೂರು ಘಟಕದ ಅಧ್ಯಕ್ಷ ಪ್ರಶಾಂತ್ ಪ್ರಕಾಶ್ ಮಾತನಾಡಿ, ರಸ್ತೆಗಳು ತಮ್ಮ ಕಚೇರಿಗಳಿಗೆ ಹತ್ತಿರವಾಗಿದ್ದರೆ ಕಂಪನಿಗಳು ಆಸಕ್ತಿ ವಹಿಸುತ್ತವೆ. ಕಂಪನಿಗಳು ಸರಕಾರಿ ಅಧಿಕಾರಿಗಳೊಂದಿಗೆ ಸುಗಮ ಮತ್ತು ಪಾರದರ್ಶಕ ರೀತಿಯಲ್ಲಿ ತೊಡಗಿಸಿಕೊಳ್ಳುವ ಕಾರ್ಯವಿಧಾನವೂ ಇರಬೇಕು. ಆದರೆ ಸಿಎಸ್ಆರ್ ಹಣಕಾಸಿನ ಸಮಸ್ಯೆ ಏನಿಲ್ಲ ಎಂದು ವಿವರಿಸಿದ್ದಾರೆ.
ಗುರುತಿಸಲಾಗಿರುವ ರಸ್ತೆಗಳು : ರೆಸಿಡೆನ್ಸಿ ರಸ್ತೆ, ರಿಚ್ಮಂಡ್ ರಸ್ತೆ, ಮ್ಯೂಸಿಯಂ ರಸ್ತೆ, ವಿಟ್ಟಲ್ ಮಲ್ಯ ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆ,ಕಮಿಷನರೇಟ್ ರಸ್ತೆ, ಕನ್ನಿಂಗ್ಹ್ಯಾಮ್ ರಸ್ತೆ, ಕೆ.ಜಿ.ರಸ್ತೆ, ನೃಪತುಂಗ ರಸ್ತೆ, ಮೋದಿ ಆಸ್ಪತ್ರೆ ರಸ್ತೆ, ಚರ್ಚ್ ಸ್ಟ್ರೀಟ್ ರಸ್ತೆಗಳನ್ನು ಆಯ್ಕೆ ಮಾಡಲಾಗಿದೆ.
ಇದನ್ನೂ ಓದಿ : ಕೆಆರ್ಎಸ್ ಡ್ಯಾಂ ಸುತ್ತಮುತ್ತ ಗಣಿಗಾರಿಕೆ ನಿಷೇಧ: ಹೈಕೋರ್ಟ್ ಆದೇಶ ಸ್ವಾಗತಿಸಿದ ಸಂಸದೆ ಸುಮಲತಾ, ಹೋರಾಟಗಾರರು