ಬೆಂಗಳೂರು: ರಾಜಧಾನಿಯಲ್ಲಿನ ರಸ್ತೆ ಗುಂಡಿಗಳ ಸಮಸ್ಯೆ ಹೋಗಲಾಡಿಸಲು ಬಿಬಿಎಂಪಿ ತಯಾರಿ ಆರಂಭಿಸಿದೆ. ನಗರದಲ್ಲಿ 9,207 ರಸ್ತೆ ಗುಂಡಿಗಳನ್ನು ಪತ್ತೆ ಹಚ್ಚಲಾಗಿದ್ದು, ಇಂದಿನಿಂದ ಸಮರೋಪಾದಿಯಲ್ಲಿ ರಸ್ತೆ ಗುಂಡಿ ಮುಚ್ಚುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಳೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ರಸ್ತೆ ಗುಂಡಿ ಮುಚ್ಚುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಬಿಬಿಎಂಪಿ ಮುಂದಾಗಿದೆ. ಫಿಕ್ಸ್ ಮೈ ಸ್ಟ್ರೀಟ್ ಆಫ್ ಮೂಲಕ ಸರ್ವೇ ಮಾಡಿರುವ ಬಿಬಿಎಂಪಿ, ನಗರದಲ್ಲಿ ಅಪಾಯಕಾರಿ ಗುಂಡಿಗಳನ್ನು ಪತ್ತೆ ಹಚ್ಚಿದೆ. ಎಲ್ಲ ಗುಂಡಿಗಳನ್ನು ಮುಚ್ಚಿ ಗುಂಡಿ ಮುಕ್ತ ಬೆಂಗಳೂರು ನಿರ್ಮಿಸುವ ಗುರಿ ಇರಿಸಿಕೊಂಡಿದೆ. ನಗರದ ಪೂರ್ವ ವಲಯದಲ್ಲಿ ಅತಿ ಹೆಚ್ಚು ರಸ್ತೆ ಗುಂಡಿಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪೂರ್ವ ವಲಯದಲ್ಲಿ ಅತಿ ಹೆಚ್ಚು: ಅತಿಯಾದ ವಾಹನದಟ್ಟಣೆ ಪ್ರದೇಶ ಎನಿಸಿಕೊಂಡಿರುವ ಪೂರ್ವ ವಲಯದಲ್ಲಿ 2,066 ಗುಂಡಿಗಳಿರುವುದು ಪತ್ತೆಯಾಗಿದೆ. ದಾಸರಹಳ್ಳಿ, ಯಲಹಂಕ ಮತ್ತು ಮಹದೇವಪುರ ವಲಯಗಳಲ್ಲಿ ಸಾವಿರಕ್ಕಿಂತ ಕಡಿಮೆ ಗುಂಡಿಗಳು ಪತ್ತೆಯಾಗಿವೆ ಎಂದು ಮಾಹಿತಿ ನೀಡಿದ್ದಾರೆ.
ಗುಂಡಿ ಮುಚ್ಚಲು ಕಾರ್ಯಾದೇಶ: ಈಗಾಗಲೇ ಐದು ವಿಧಾನಸಭಾ ಕ್ಷೇತ್ರಗಳಲ್ಲಿರುವ ರಸ್ತೆ ಗುಂಡಿಗಳನ್ನು ಮುಚ್ಚಲು ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲಾಗಿದೆ. ಉಳಿದ 22 ಪ್ರದೇಶಗಳಲ್ಲಿರುವ ಗುಂಡಿಗಳನ್ನು ಪಾಲಿಕೆ ವತಿಯಿಂದಲೇ ಮುಚ್ಚಲು ತೀರ್ಮಾನಿಸಲಾಗಿದೆ. ಸಾರ್ವಜನಿಕರು ತಮ್ಮ ಪ್ರದೇಶಗಳಲ್ಲಿರುವ ರಸ್ತೆ ಗುಂಡಿಗಳ ಬಗ್ಗೆ ಫಿಕ್ಸ್ ಮೈ ಸ್ಟ್ರೀಟ್ ಮೂಲಕ ಮಾಹಿತಿ ನೀಡಬಹುದಾಗಿದೆ ಎಂದಿದ್ದಾರೆ.
- ವಲಯ - ಗುಂಡಿಗಳು
- ಬೊಮ್ಮನಹಳ್ಳಿ - 1,076
- ದಾಸರಹಳ್ಳಿ - 867
- ಪೂರ್ವ - 2,066
- ಮಹದೇವಪುರ - 729
- ಆರ್ಆರ್ ನಗರ - 1,068
- ದಕ್ಷಿಣ - 1,414
- ಪಶ್ಚಿಮ - 1,232
- ಯಲಹಂಕ - 755
- ಒಟ್ಟು - 9,207