ಬೆಂಗಳೂರು: ಡಾರ್ಕ್ ವೆಬ್ ಮೂಲಕ ಡ್ರಗ್ ಖರೀದಿ ಮಾಡಿದ ಗ್ಯಾಂಗ್ ಬಂಧನ ಪ್ರಕರಣದಲ್ಲಿ ಇಂಟರ್ ನ್ಯಾಷನಲ್ ಹ್ಯಾಕರ್ ಶ್ರೀಕೃಷ್ಣ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದೆ. ಸಿಸಿಬಿ ಅಧಿಕಾರಿಗಳ ತನಿಖೆ ವೇಳೆ ಹಲವು ಮಾಹಿತಿ ಬಯಲಾಗಿವೆ.
ಆರೋಪಿ ಶ್ರೀಕೃಷ್ಣ ಬಿಬಿಎಂಪಿ ಟೆಂಡರ್ ವೆಬ್ಸೈಟ್ ಹ್ಯಾಕ್ ಮಾಡಿ ಟೆಂಡರ್ ಡೀಲ್ ಮಾಡಿದ್ದ ವಿಚಾರ ಬಯಲಿಗೆ ಬಂದಿದೆ. ತನ್ನ ಸ್ನೇಹಿತ ಹಾರ್ದಿಕ್ ಗೌಡಗೆ ಟೆಂಡರ್ ಸಿಗುವಂತೆ ಮಾಡಲು ವೆಬ್ಸೈಟ್ ಹ್ಯಾಕ್ ಮಾಡಿ ಟೆಂಡರ್ ಸಿಗುವಂತೆ ಮಾಡುತ್ತಿದ್ದ. ನೂರಾರು ಕೋಟಿ ಟೆಂಡರ್ ಡೀಲ್ ಮಾಡಲು ಮೊದಲೇ ಹ್ಯಾಕ್ ಮಾಡಿ ಎಲ್ಲರೂ ಟೆಂಡರ್ ಮಾಡಿರುವ ಕೊಟೇಷನ್ ತಿಳಿತಿದ್ದ. ಅದಕ್ಕೆ ಹತ್ತಿರವಾದ ತೀರಾ ಕಡಿಮೆ ಮೊತ್ತಕ್ಕೆ ಬಿಡ್ ಮಾಡಿಸುತ್ತಿದ್ದ.
ಹಾಗೆ ಕೆಲವರ ಟೆಂಡರ್ ಅರ್ಜಿಯನ್ನೇ ಮಂಗಮಾಯ ಮಾಡಿರುವ ವಂಚನೆ ಪತ್ತೆಯಾಗಿದೆ. ಇನ್ನು ಈ ಆರೋಪಿ ಮೂಲಕ ಬಿಬಿಎಂಪಿಯಲ್ಲಿ ಹಲವಾರು ಮಂದಿ ನೂರಾರು ಕೋಟಿ ಟೆಂಡರ್ ಪಡೆದಿದ್ದಾರೆ. ಈತನಿಗೆ ಹಾರ್ದಿಕ್ ಗೌಡ ಕೂಡ ಸಹಾಯ ಮಾಡಿರುವ ಕಾರಣ ಈತನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲು ಸಿಸಿಬಿ ಮುಂದಾಗಿದೆ. ಸದ್ಯ ಬಿಬಿಎಂಪಿ ಟೆಂಡರ್ ಹ್ಯಾಕ್ ವಿಚಾರಕ್ಕೆ ಪ್ರತ್ಯೇಕ ಕೇಸ್ ಮಾಡಿ ಹೆಚ್ಚಿನ ಮಾಹಿತಿ ಪಡೆಯಲು ಮುಂದಾಗಿದ್ದಾರೆ.
ಹಿನ್ನೆಲೆ:
ಬಂಧಿತ ಶ್ರೀಕೃಷ್ಣ ಸರ್ಕಾರಿ ವೆಬ್ಸೈಟ್ ಹ್ಯಾಕ್ ಮಾಡುತ್ತಿದ್ದ. ಡಾರ್ಕ್ ವೆಬ್ ಮೂಲಕ ಡ್ರಗ್ ಖರೀದಿ ಮಾಡಿ ಸಫ್ಲೇ ಮಾಡಿದ ಆರೋಪಿಗಳನ್ನು ಸಿಸಿಬಿ ಖೆಡ್ಡಾಕ್ಕೆ ಕೆಡವಿತ್ತು. ಸದ್ಯ ಆರೋಪಿ ಹಲವಾರು ಸರ್ಕಾರಿ ವೆಬ್ಸೈಟ್ ಹ್ಯಾಕ್ ಮಾಡಿದ ಕಾರಣ ಸಿಸಿಬಿ ವಶದಲ್ಲಿದ್ದು ತನಿಖೆ ಮುಂದುವರೆದಿದೆ.