ಬೆಂಗಳೂರು: ಮಹಾಮಾರಿ ಕೋವಿಡ್ ದೇಶಕ್ಕೆ ವಕ್ಕರಿಸಿದ ಆರಂಭದಲ್ಲಿ ಕೊರೊನಾ ಭೀತಿಯ ಜೊತೆಗೆ ಸೋಂಕು ತಗುಲಿದ ವ್ಯಕ್ತಿಗಳನ್ನು ಸಾರ್ವಜನಿಕರು ತಾರತಮ್ಯದಿಂದ ನೋಡಲು ಆರಂಭಿಸಿದರು. ಆದ್ರೆ ಕೊರೊನಾ ಇಡೀ ಸಮುದಾಯಕ್ಕೆ ಹರಡುತ್ತಿದ್ದು, ನಿಯಂತ್ರಣ ಕೈ ತಪ್ಪಿದೆ. ಹಾಗಾಗಿ ಪಾಲಿಕೆ ನಗರದಲ್ಲಿ ಹೆಚ್ಚು ಹೆಚ್ಚು ಪರೀಕ್ಷೆ ಮಾಡಿಸುವುದರಿಂದಲೇ ಸೋಂಕನ್ನು ನಿಯಂತ್ರಣಕ್ಕೆ ಸಾಧ್ಯ ಎಂದು ನಗರದ ರಸ್ತೆ ರಸ್ತೆಗಳಲ್ಲೂ ಮೊಬೈಲ್ ವಾಹನದ ಮೂಲಕ ಕೋವಿಡ್ ಸೋಂಕು ಪರೀಕ್ಷೆ ನಡೆಸಲು ಮುಂದಾಗುತ್ತಿದೆ. ಜೊತೆಗೆ ಸೋಂಕಿತರಿಗಾಗುವ ಮುಜುಗರ ತಪ್ಪಿಸಲು ಮನೆ ಸುತ್ತಮುತ್ತ ಕಂಟೈನ್ಮಂಟ್ ಮಾಡುವುದನ್ನು ಸ್ಥಗಿತ ಮಾಡಿದೆ. ಹಾಗೆಯೇ ಮನೆ ಮುಂದೆ ಪೋಸ್ಟರ್ ಅಂಟಿಸುವುದನ್ನೂ ಸಹ ನಿಲ್ಲಿಸಿದೆ.
ಸೋಂಕಿತರಿಗೆ ಸೌಜನ್ಯದ ಮಾತುಗಳನ್ನಾಡಿ ಧೈರ್ಯ ತುಂಬಬೇಕಾದ ನೆರೆಹೊರೆಯವರು, ಮನೆಮಂದಿ, ಕುಟುಂಬಸ್ಥರೇ ಅನುಮಾನದಿಂದ, ಸಮಾಜಕ್ಕೆ ಕಳಂಕ ಎನ್ನುವ ರೀತಿಯಲ್ಲಿ ವರ್ತಿಸತೊಡಗಿದ್ದರು. ಆದ್ರೆ ಇಂದು ಕೋವಿಡ್ ಸಮುದಾಯಕ್ಕೆ ಹರಡಿದೆ. ದಿನಕ್ಕೆ ಕನಿಷ್ಠ ಮೂರು ಸಾವಿರ ಜನರಿಗೆ ಸೋಂಕಿನ ಲಕ್ಷಣಗಳು ಕಂಡು ಬರುತ್ತಿವೆ. ರಾಜ್ಯದ ಮುಖ್ಯಮಂತ್ರಿಗಳು ಸೇರಿದಂತೆ ಸಾಕಷ್ಟು ಸೆಲೆಬ್ರೆಟಿಗಳು, ಗಣ್ಯರು, ಪೊಲೀಸರು, ವೈದ್ಯರಿಗೂ ಕೊರೊನಾ ಬಾಧಿಸಿದೆ. ಆದ್ರೆ ಸೋಂಕಿತರು ಗುಣಮುಖರಾಗಿ ಬಂದ್ರೂ ಕೂಡ ಅನುಮಾನದಿಂದ ನೋಡುವ ದೃಷ್ಟಿ ಬದಲಾಗಿಲ್ಲ.
ಉದ್ಯೋಗದ ಅನಿವಾರ್ಯತೆಯಿಂದಾಗಿ ಹೊರಗೆ ಹೋದಾಗ ಮಾರುಕಟ್ಟೆಗೆ ಅಗತ್ಯ ವಸ್ತುಗಳನ್ನು ತರಲು ಹೋದಾಗಲೂ ಸೋಂಕು ತಗುಲುತ್ತಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ. ತೀವ್ರ ಲಕ್ಷಣ ಹೊರತುಪಡಿಸಿ ಸಣ್ಣಪುಟ್ಟ ಲಕ್ಷಣ ಇರುವವರು ಆಸ್ಪತ್ರೆಗಳಿಗೆ ಹೋಗಲು ನಿರಾಕರಿಸಿ, ಮನೆಯಲ್ಲೇ ಆರೈಕೆಗೆ ಒಳಪಡುತ್ತಿದ್ದಾರೆ. ಎಷ್ಟೋ ಜನ ಸಾಮಾಜಿಕ ಕಳಂಕದ ಭಯದಿಂದಲೇ ಟೆಸ್ಟ್ ಮಾಡಿಸಲು ಹಿಂದೇಟು ಹಾಕುತ್ತಿದ್ದಾರೆ. ಆದರೆ ಪಾಲಿಕೆ ನಗರದಲ್ಲಿ ಹೆಚ್ಚೆಚ್ಚು ಟೆಸ್ಟ್ ಮಾಡಿಸುವುದರಿಂದಲೇ ಕೋವಿಡ್ ಸೋಂಕು ಕಡಿಮೆ ಮಾಡಲು ಸಾಧ್ಯ ಎಂದು ನಗರದ ರಸ್ತೆ ರಸ್ತೆಗಳಲ್ಲೂ ಮೊಬೈಲ್ ವಾಹನದ ಮೂಲಕ ಕೋವಿಡ್ ಸೋಂಕು ಪರೀಕ್ಷೆ ನಡೆಸಲು ಮುಂದಾಗುತ್ತಿದೆ.
ದಿನಕ್ಕೆ 35 ಸಾವಿರ ಟೆಸ್ಟ್ ನಡೆಸುತ್ತಿದೆ. ಆದರೆ ಹೆಚ್ಚಿನ ಕಡೆ ಜನರೇ ಪರೀಕ್ಷೆ ಮಾಡಿಸಲು ಮುಂದಾಗುತ್ತಿಲ್ಲ. ಇದಕ್ಕೆ ಪ್ರಮುಖ ಕಾರಣ ಸಮಾಜದ ಭಯವೇ ಆಗಿದೆ. ಕೊರೊನಾ ಬಂದ ವ್ಯಕ್ತಿಯನ್ನು ನಡೆಸಿಕೊಳ್ಳುವ ರೀತಿಗೆ ಜನ ಟೆಸ್ಟ್ ಮಾಡಿಸಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಬಿಬಿಎಂಪಿ ಹೊಸ ನಿಯಮ ಮಾಡಿದ್ದು, ಈ ಸೋಷಿಯಲ್ ಸ್ಟಿಗ್ಮ ದೂರ ಮಾಡಲು, ಪಾಸಿಟಿವ್ ಬಂದ ವ್ಯಕ್ತಿಯ ಮನೆ ಸುತ್ತಮುತ್ತ ಕಂಟೈನ್ಮಂಟ್ ಮಾಡುವುದನ್ನು ಸ್ಥಗಿತ ಮಾಡಿದೆ. ಹಾಗೆಯೇ ಮನೆ ಮುಂದೆ ಪೋಸ್ಟರ್ ಅಂಟಿಸುವುದನ್ನೂ ಸಹ ನಿಲ್ಲಿಸಿದೆ. ರೆಸಿಡೆನ್ಸಿ ವೆಲ್ಫೇರ್ ಅಸೋಸಿಯೇಷನ್ಗಳ ಅಭಿಪ್ರಾಯ ಹಾಗೂ ಜನರ ದೂರುಗಳನ್ನು ಕೇಳಿದ ಬಳಿಕ ಬಿಬಿಎಂಪಿ ಈ ನಿರ್ಧಾರಕ್ಕೆ ಬಂದಿದ್ದು, ಇದರಿಂದ ಸೋಂಕು ಲಕ್ಷಣ ಇರುವ ಜನರು ಕೋವಿಡ್ ಟೆಸ್ಟ್ಗೆ ಮುಂದಾಗುತ್ತಾರೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.
ಇನ್ನು ಸ್ವತಃ ಕೋವಿಡ್ನಿಂದ ಗುಣಮುಖರಾಗಿ ಬಂದ ಇಂಡಿಯನ್ ಆರ್ಮಿ ಟೆಕ್ನಿಷಿಯನ್ ಕನ್ನಡಿಗರೇ ಆದ ಆದಿತ್ಯ ಗಣೇಶಯ್ಯ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಯಾರೂ ಸಹ ಕೊರೊನಾ ರೋಗಕ್ಕೆ ಗಾಬರಿಗೊಳ್ಳಬಾರದು. ಸೋಂಕಿಗೆ ಒಳಗಾದವರೆಲ್ಲ ಗುಣಮುಖರಾಗಿದ್ದಾರೆ. ಸೋಂಕಿನ ಲಕ್ಷಣ ಕಂಡು ಬಂದ್ರೆ ನಿರ್ಲಕ್ಷ್ಯ ಮಾಡದೆ ವೈದ್ಯರನ್ನು ಭೇಟಿ ಮಾಡಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದಿದ್ದಾರೆ. ಅಲ್ಲದೆ ಕೋವಿಡ್ ಚಿಕಿತ್ಸೆ ನೀಡುವಾಗ ಪ್ರತೀ ದಿನ ಮನಃಶಾಸ್ತ್ರಜ್ಞರು ಕರೆ ಮಾಡಿ ಧೈರ್ಯ ತುಂಬುತ್ತಿದ್ದರು. ವೈದ್ಯರು, ನರ್ಸ್ಗಳು ಆರೋಗ್ಯ ವಿಚಾರಿಸಿಕೊಳ್ಳುತ್ತಿದ್ದರು. ಜೊತೆಗೆ ಸ್ನೇಹಿತರು, ಸಹೋದ್ಯೋಗಿಗಳು ಧೈರ್ಯ ತುಂಬಿದ್ದಾರೆ. ಕಟುಂಬಸ್ಥರು ಅಗತ್ಯ ನೆರವು ಕೊಟ್ಟಿದ್ದಾರೆ. ಹೀಗಾಗಿ ಆದಷ್ಟು ಬೇಗ ಕೊರೊನಾದಿಂದ ಗುಣಮುಖವಾಗಲು ಜೊತೆಗೆ ಧೈರ್ಯದಿಂದ ಇರಲು ಸಾಧ್ಯವಾಯ್ತು ಎಂದು ಆದಿತ್ಯ ಅವರು ಅನುಭವ ಹಂಚಿಕೊಂಡಿದ್ದಾರೆ.
ಇನ್ನು ಬಿಬಿಎಂಪಿ ಸಾರ್ವಜನಿಕ ಆರೋಗ್ಯದ ಮುಖ್ಯ ಆರೋಗ್ಯಾಧಿಕಾರಿ ಡಾ. ಬಿ.ಕೆ.ವಿಜೇಂದ್ರ ಮಾತನಾಡಿ, ಸಾಕಷ್ಟು ಜನ ಅಧಿಕಾರಿಗಳು, ಸಚಿವರು, ರಾಜಕಾರಣಿಗಳಿಗೆ ಕೋವಿಡ್ ಬಂದು ಐಸೋಲೇಷನ್ ಆಗಿ ಗುಣಮುಖರಾಗಿ ಬಂದಿದ್ದಾರೆ. ವಾಪಸ್ ಬಂದ ಸುಮಲತಾ ಅಂಬರೀಶ್, ಸಿಎಂ ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ಧರಾಮಯ್ಯ ಸೇರಿದಂತೆ ಸಾಕಷ್ಟು ಜನ ಸಮಾಜಕ್ಕೆ ಸಂದೇಶ ನೀಡಿದ್ದಾರೆ. ಜನರು ಭಯ ಪಡಬೇಕಾದ ಕಾಯಿಲೆ ಇದಲ್ಲ. ಆರಂಭದ ಹಂತದಲ್ಲೇ ಚಿಕಿತ್ಸೆ ಪಡೆಯದಿದ್ದರೆ ಮಾತ್ರ ಮಾರಣಾಂತಿಕ ಆಗಬಹುದು. ಹೀಗಾಗಿ ಸೋಂಕಿನ ಲಕ್ಷಣ ಕಂಡು ಬಂದ ಕೂಡಲೇ ಪರೀಕ್ಷಿಸಿ, ಚಿಕಿತ್ಸೆ ಪಡೆಯಿರಿ. ಎಲ್ಲಾ ಪಾಲಿಕೆ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಚಿಕಿತ್ಸೆ ಸಿಗಲಿದೆ ಎಂದರು.