ಬೆಂಗಳೂರು : ಆರ್.ಆರ್.ನಗರದ ಗುರುದತ್ತ ಲೇಔಟ್ನಲ್ಲಿ ರಾಜಕಾಲುವೆಯ ಗೋಡೆ ಕುಸಿತ ಹಿನ್ನೆಲೆ ಸ್ಥಳಕ್ಕೆ ಡಿಸಿಎಂ ಅಶ್ವತ್ಥ್ ನಾರಾಯಣ್ ಹಾಗೂ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಾಜಕಾಲುವೆ ಗೋಡೆ ಕುಸಿತಕ್ಕೆ ಜಲಮಂಡಳಿ ಕಾಮಗಾರಿಯೇ ಕಾರಣ ಎಂದು ಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಆರೋಪಿಸಿದರು.
ತಡೆಗೋಡೆ ಕುಸಿತವಾದ ಸ್ಥಳದಲ್ಲಿ ಜಲಮಂಡಳಿ ನಾಲ್ಕು ಮ್ಯಾನ್ ಹೋಲ್ ಗಳನ್ನ ತೆರೆದು ಕೆಲಸ ಪ್ರಾರಂಭಿಸಿದರು. ಈ ವೇಳೆ, ಮ್ಯಾನ್ ಹೋಲ್ಗಳಿಗೆ ಮಕ್ಕಳು ಬಿದ್ರೆ ಯಾರು ಹೊಣೆ ಎಂದು ಸ್ಥಳೀಯರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಸ್ಥಳೀಯರ ದೂರಿನ ಆಧಾರದ ಮೇಲೆ ಪಾಲಿಕೆಯ ನೀರುಗಾಲುವೆ ಅಧಿಕಾರಿಗಳನ್ನ ಸ್ಥಳಕ್ಕೆ ಕರೆಸಿದ ಡಿಸಿಎಂ ವಿಚಾರಿಸಿದರು. ಬಳಿಕ ಪ್ರತಿಕ್ರಿಯಿಸಿದ ಅಶ್ವತ್ಥ್ ನಾರಾಯಣ್
ಇಷ್ಟು ದಿನಗಳ ಕಾಲ ಕೆಲಸ ಆರಂಭವಾಗಿರಲಿಲ್ಲ. ಈಗ ಕೆಲಸ ಆರಂಭವಾಗಿದೆ. ಹಾಗಾಗಿ ಸಮಸ್ಯೆ ಕಾಣಿಸಿಕೊಂಡಿದೆ ಎಂದರು. ಕೆಂಗೇರಿಯಲ್ಲಿ ಧಾರಾಕಾರ ಮಳೆಯಾಗಿದೆ. 75 ರಿಂದ 150 ಮಿ.ಮೀಟರ್ ಮಳೆಯಾಗಿದೆ.
ಹೆಚ್ಚಿನ ಭಾಗ ರಾಜಕಾಲುವೆ, ಕೆರೆಗಳಿರುವ ಜಾಗ ಆಗಿರೋದ್ರಿಂದ ಸಮಸ್ಯೆಗಳು ಉಂಟಾಗಿವೆ. ಪಾಲಿಕೆಯಿಂದ ಹಾಗೂ ಜಲಮಂಡಳಿಯಿಂದ ಸ್ಯಾನಿಟರಿ ಕೆಲ್ಸ ಆಗ್ತಿದೆ. ರೀ ಮಾಡಲಿಂಗ್ ಆಗಬೇಕಿದೆ. ಈಗಾಗಲೇ 1,100 ಕಟ್ಟಡಗಳ ತೆರವು ಕಾರ್ಯ ನಡೆಯುತ್ತಿದ್ದು, ಅದರಲ್ಲಿ 700 ಕಟ್ಟಡಗಳ ತೆರವು ಕಾರ್ಯ ಇನ್ನೂ ಬಾಕಿಯಿದೆ. ಕೋವಿಡ್ ಹಿನ್ನೆಲೆ ಅದನ್ನು ಕಾರ್ಯರೂಪಕ್ಕೆ ತರಲು ಆಗಲಿಲ್ಲ. ಈ ಸಂಬಂಧ ನವೆಂಬರ್ ವರೆಗೂ ತೆರವು ಮಾಡಬಾರದು ಎಂದು ನ್ಯಾಯಾಲಯ ಸೂಚನೆ ನೀಡಿದೆ. ರಾಜಕಾಲುವೆ 800 ಕಿ.ಮೀ ಇದ್ದು, ಈಗಾಗಲೇ 400 ಕಿ.ಮೀ ಉದ್ದದ ರಾಜಕಾಲುವೆ ಕಾಮಗಾರಿ ಪೂರ್ಣಗೊಳಿಸಿದ್ದು, ಆರ್.ಸಿ.ಸಿ ಗೋಡೆ ನಿರ್ಮಿಸಲಾಗಿದೆ. ಇನ್ನುಳಿದ 400 ಕಿ.ಮೀ ರಾಜಕಾಲುವೆ ಕಾಮಗಾರಿ ನಡೆಯುತ್ತಿದೆ. ಇದೆಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುವುದು ಎಂದರು.