ಬೆಂಗಳೂರು: ಬಿಬಿಎಂಪಿ ಮತ್ತೆ ರಾಜಕಾಲುವೆ ಒತ್ತುವರಿ ತೆರವಿಗೆ ಕೈ ಹಾಕಿದ್ದು, ಅಕ್ರಮವಾಗಿ ನಿರ್ಮಿಸಿರುವ ವಾಣಿಜ್ಯ ಸಂಕೀರ್ಣಗಳು, ಐಷಾರಾಮಿ ಕಟ್ಟಡಗಳ ಮಾಲೀಕರಿಗೆ ನಡುಕ ಶುರುವಾಗಿದೆ.
ನಗರದಲ್ಲಿ ಮಳೆಗಾಲ ಆರಂಭವಾದಾಗ ಭಾರಿ ಅವಾಂತರಗಳು ಸೃಷ್ಟಿಯಾಗುತ್ತಿದ್ದು, ರಾಜಕಾಲುವೆ ಒತ್ತುವರಿಯಾಗಿದ್ದರಿಂದ ಈ ಅನಾಹುತಗಳು ಸಂಭವಿಸುತ್ತಿವೆ. ಆದರೆ, ಸಾಕಷ್ಟು ಅನಾಹುತ ನಡೆದ ಬಳಿಕ ಬಿಬಿಎಂಪಿ ರಾಜಕಾಲುವೆ ಒತ್ತುವರಿ ತೆರವಿಗೆ ಕೈ ಹಾಕಿದೆ. ನಗರದಲ್ಲಿ ಕಾನೂನು ಬಾಹಿರವಾಗಿ ರಾಜಕಾಲುವೆ ಒತ್ತುವರಿ ಮಾಡಿಕೊಂಡು ಮನೆ, ವಾಣಿಜ್ಯ ಮಳಿಗೆಗಳು ಕೈಗಾರಿಕೆಗಳು ಸೇರಿದಂತೆ ಬೆಲೆ ಬಾಳುವ ಐಷಾರಾಮಿ ಕಟ್ಟಡಗಳನ್ನು ನಿರ್ಮಿಸಿಕೊಂಡಿರುವ ಮಾಲೀಕರಿಗೆ ಶಾಕ್ ನೀಡಲಿದೆ.
ಮತ್ತೆ ಘರ್ಜಿಸಲಿದೆ ಜೆಸಿಬಿ: ರಾಜಕಾಲುವೆ ಒತ್ತುವರಿ ಮಾಡಿಕೊಂಡ ಜಾಗವನ್ನು ವಶಕ್ಕೆ ಪಡೆಯಲು ಬಿಬಿಎಂಪಿ ಭಾರಿ ತಯಾರಿ ನಡೆಸಿದ್ದು, ಪ್ರತಿಷ್ಠಿತ ಕಂಪನಿಗಳಿಗೆ ಹಾಗೂ ರಾಜಕಾಲುವೆ ಮೇಲೆ ಒತ್ತುವರಿ ಮಾಡಿಕೊಂಡು ಐಷಾರಾಮಿ ಮನೆ ಕಟ್ಟಿದವರಿಗೆ ಬಿಸಿ ಮುಟ್ಟಿಸಲು ಮುಂದಾಗಿದೆ. ಹೀಗಾಗಿ, ಅಕ್ರಮವಾಗಿ ಕಟ್ಟಡ ನಿರ್ಮಿಸಿದವರಿಗೆ ನಡುಕ ಶುರುವಾಗಿದೆ.
ಕಳೆದ ಕೆಲ ತಿಂಗಳ ಹಿಂದೆ ನಗರದಲ್ಲಿ ಜೆಸಿಬಿ ಘರ್ಜನೆ ಸದ್ದು ಮಾಡಿತ್ತು. ಮಳೆಯ ಪರಿಣಾಮ ಮುಳುಗಡೆಯಾದ ಪ್ರದೇಶಗಳಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯ ಮಾಡಲಾಗಿತ್ತು. ಬಳಿಕ ಬಿಬಿಎಂಪಿ ಒತ್ತುವರಿ ಕಾರ್ಯ ಅಷ್ಟಕ್ಕೇ ನಿಲ್ಲಿಸಲಾಗಿತ್ತು. ಇದೀಗ ಮತ್ತೆ ಎಚ್ಚೆತ್ತುಕೊಂಡ ಬಿಬಿಎಂಪಿ ಇದೀಗ ಅಕ್ರಮವಾಗಿ ರಾಜಕಾಲುವೆ ಒತ್ತುವರಿ ಮಾಡಿ ಮನೆ ನಿರ್ಮಿಸಿಕೊಂಡವರ ಮನೆಗಳಿಗೆ ಬಿಬಿಎಂಪಿ ಹಾಗೂ ಕಂದಾಯ ಇಲಾಖೆ ಜಂಟಿಯಾಗಿ ಜೆಸಿಬಿ ನುಗ್ಗಿಸಲು ಮುಂದಾಗಿದೆ.
ಪ್ರತಿ ಬಾರಿಯೂ ನಗರದಲ್ಲಿ ಮಳೆ ಬಂದಂತಹ ಸಂದರ್ಭದಲ್ಲಿ ಸಾಕಷ್ಟು ಅವಘಡಗಳು ಸಂಭವಿಸುತ್ತಿವೆ. ಈ ಅವಘಡಕ್ಕೆ ರಾಜುಕಾಲುವೆ ಒತ್ತುವರಿಯಾಗಿರುವುದರಿಂದ ಮಳೆ ನೀರು ಮನೆಗಳಿಗೆ ನುಗ್ಗುತ್ತಿದೆ. ಈ ರೀತಿ ಅವಾಂತರ ಸೃಷ್ಟಿಯಾಗುತ್ತಿದ್ದು, ಇದು ಸರ್ಕಾರಕ್ಕೆ ಭಾರಿ ಮುಜುಗರವನ್ನುಂಟು ಮಾಡುತ್ತಿದೆ. ಈ ಕುರಿತು ಮಾತನಾಡಿದ್ದ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ ಕೆ ಶಿವಕುಮಾರ್, ಈ ಬಾರಿ ಮಳೆ ಬಾರದ ಕಾರಣ ಯಾವುದೇ ಅವಘಡ ಸಂಭವಿಸಿಲ್ಲ. ಹೀಗಾಗಿ ಮುಂದೆ ನಡೆಯುವುದನ್ನು ತಪ್ಪಿಸಲು ಎಲ್ಲೆಲ್ಲಿ ರಾಜ ಕಾಲುವೆ ಒತ್ತುವರಿಯಾಗಿದೆಯೋ ಎಲ್ಲವನ್ನು ಕೂಡ ತೆರವುಗೊಳಿಸಬೇಕು ಎಂದು ಬಿಬಿಎಂಪಿಗೆ ಖಡಕ್ ಆದೇಶ ನೀಡಿದ್ದಾರೆ.
ಈಗಾಗಲೇ ಮಹದೇವಪುರ ವಲಯ ಹಾಗೂ ಬೊಮ್ಮನಹಳ್ಳಿ ವಲಯ ಒತ್ತುವರಿ ತೆರವಿಗೆ ಪಾಲಿಕೆ ಮುಂದಾಗಿದ್ದು, ಈಗಾಗಲೇ ರೈನ್ಬೊ ಡ್ರೈವ್ ಲೇಔಟ್ 13 ವಿಲ್ಲಾಗಳಿಗೆ ನೋಟಿಸ್ ನೀಡಲಾಗಿದೆ. ಇಂತಹ ಒತ್ತುವರಿ ವಿಲ್ಲಾಗಳಿಂದಲೇ ಅಪಾರ್ಟ್ಮೆಂಟ್ಗಳಿಗೆ ಪ್ರತಿ ಬಾರಿಯೂ ಕೂಡ ನೀರು ನುಗ್ಗಿ ಸಮಸ್ಯೆ ಆಗುತ್ತಿದೆ. ಹೀಗಾಗಿ ಒತ್ತುವರಿ ಮಾಡಿರುವವರಿಗೆ ನೋಟಿಸ್ ನೀಡಲು ಮುಂದಾಗಿದೆ.
ಒತ್ತುವರಿಯಾಗಿರುವ ಕುರಿತು ಮಾಹಿತಿ
- ರಾಜಕಾಲುವೆ ಒತ್ತುವರಿ ಪ್ರಕರಣಗಳು 3,176
- ಈವರೆಗೆ ಒತ್ತುವರಿ ತೆರವು ಮಾಡಿದ ಪ್ರಕರಣ - 2,322
- ತೆರವು ಬಾಕಿ ಪ್ರಕರಣ - 854
- ನ್ಯಾಯಾಲಯದಲ್ಲಿರುವ ಕೇಸ್ಗಳು- 155
- ಒತ್ತುವರಿ ತೆರವಿಗೆ ಆದೇಶ ಹೊರಡಿಸುವ ಹಂತದಲ್ಲಿರುವ ಪ್ರಕರಣಗಳು - 487
- ತಹಶೀಲ್ದಾರರಿಂದ ಒತ್ತುವರಿ ತೆರವಿಗೆ ನೋಟಿಸ್ ನೀಡಿದ ಪ್ರಕರಣಗಳು - 162
ಇದನ್ನೂ ಓದಿ: ಕೆಎಸ್ಆರ್‌ಟಿಸಿ ಕೇಂದ್ರ ಕಚೇರಿ ತಲುಪಿದ 20 ಟ್ರಕ್; 'ನಮ್ಮ ಕಾರ್ಗೋ ಸೇವೆ'ಗೆ ಡಿ.23ರಂದು ಚಾಲನೆ