ಬೆಂಗಳೂರು: ಕಟ್ಟಡ ನಿರ್ಮಾಣ ನಿಯಾಮವಳಿ ಉಲ್ಲಂಘಿಸಿದ ಹಿನ್ನೆಲೆ ಅವುಗಳನ್ನು ಕೆಡವಲು ಬಿಬಿಎಂಪಿ ಸಿದ್ಧವಾಗಿದೆ. ಈ ಸಂಬಂಧ ಬಿಬಿಎಂಪಿ ಹೈಕೋರ್ಟ್ ಸೂಚನೆ ಮೇರೆಗೆ ಪಟ್ಟಿ ಸಿದ್ಧಪಡಿಸಿದೆ. ಕಳೆದ ತಿಂಗಳ ಕೊನೆಯವರೆಗೆ ಅನ್ವಯವಾಗುವಂತೆ ಸಿದ್ಧಪಡಿಸಿರುವ ಪಟ್ಟಿ ಪ್ರಕಾರ ಬರೋಬ್ಬರಿ 38,249 ಮನೆಗಳು ನಿಯಮ ಪಾಲನೆ ಮಾಡಿಲ್ಲ ಎಂದು ತಿಳಿದುಬಂದಿದೆ.
ಅಕ್ರಮ ಕಟ್ಟಡಗಳನ್ನು ಸರ್ವೆ ಮಾಡಿ ಅವುಗಳನ್ನು ಕೆಡವಲು ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ಬಿಬಿಎಂಪಿಗೆ ಸೂಚಿಸಿತ್ತು. ಅದರಂತೆ ಪಾಲಿಕೆಯ 8 ವಲಯಗಳಲ್ಲಿರುವ ಅಧಿಕಾರಿಗಳು ಅಂತಿಮ ಪಟ್ಟಿಯ ವರದಿಯನ್ನು ಸಿದ್ಧಪಡಿಸಿ ಹೈಕೋರ್ಟ್ಗೆ ಸಲ್ಲಿಸಲು ಮುಂದಾಗಿದ್ದಾರೆ.
ಪಾಲಿಕೆ ಅಧಿಕಾರಿಗಳು ಹೇಳುವುದೇನು:
8 ವಲಯಗಳಲ್ಲಿ ಬಿಬಿಎಂಪಿ ಅಧಿಕಾರಿಗಳು 1,30,937 ಕಟ್ಟಡಗಳನ್ನು ಸರ್ವೆ ಮಾಡಿದ್ದಾರೆ. ಈ ಪೈಕಿ ಸೆಕ್ಷನ್ 313 ಪ್ರಕಾರ 13,755 ಕಟ್ಟಡಗಳ ಮಾಲೀಕರಿಗೆ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಲಾಗಿದೆ. ಈ ಪೈಕಿ 1,560 ಕಟ್ಟಡಗಳ ಮಾಲೀಕರು ದಾಖಲೆಗಳನ್ನು ಸಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ.
ಸೆಕ್ಷನ್ 248(1) ಹಾಗೂ 248(2) ಅನ್ವಯ 75 ಕಟ್ಟಡಗಳ ಮಾಲೀಕರಿಗೆ ಉಲ್ಲಂಘನೆ ಖಚಿತವಾಗಿರುವ ಬಗ್ಗೆ ನೋಟಿಸ್ ನೀಡಲಾಗಿದೆ. ಆದರೆ, ಈ ಸಂಬಂಧ ಯಾರೊಬ್ಬರೂ ದಾಖಲೆಗಳನ್ನಾಗಲಿ, ವಿವರಣೆಯನ್ನಾಗಲಿ ನೀಡಲು ವಿಫಲವಾಗಿದ್ದಾರೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಎಲ್ಲೆಲ್ಲಿ ಎಷ್ಟು ಉಲ್ಲಂಘನೆ?:
ಅತೀ ಹೆಚ್ಚು ನಿಯಮ ಉಲ್ಲಂಘನೆ ಮಾಡಿರುವ ಕಟ್ಟಡಗಳು ನಗರದ ಬೊಮ್ಮನಹಳ್ಳಿ ವಲಯದಲ್ಲಿದೆ.75,098 ಕಟ್ಟಡಗಳನ್ನು ಸರ್ವೆ ಮಾಡಲಾಗಿದ್ದು, ಇದರಲ್ಲಿ 4,779 ಕಟ್ಟಡಗಳನ್ನು ನಿಯಮ ಉಲ್ಲಂಘನೆ ಮಾಡಿ ನಿರ್ಮಾಣ ಮಾಡಲಾಗಿದೆ.
ಆರ್ ಆರ್ ನಗರದಲ್ಲಿ 38,417 ಕಟ್ಟಡಗಳನ್ನು ಸರ್ವೆ ಮಾಡಲಾಗಿದ್ದು. 1,687 ಕಟ್ಟಡ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಪಶ್ಚಿಮ ವಲಯದಲ್ಲಿ 10,619 ಕಟ್ಟಡಗಳನ್ನು ಸರ್ವೆ ಮಾಡಿದ್ದು, 2,701 ಕಟ್ಟಡ ಮಾಲೀಕರಿಗೆ ನೋಟಿಸ್ ನೀಡಲಾಗಿದೆ.
ಯಲಹಂಕದಲ್ಲಿ 2,168 ಕಟ್ಟಡಗಳನ್ನು ಸರ್ವೆ ಮಾಡಲಾಗಿದ್ದು, 2,143 ಕಟ್ಟಡಗಳಿಗೆ ನೋಟಿಸ್ ನೀಡಲಾಗಿದೆ. ಪೂರ್ವ ವಲಯದಲ್ಲಿ 1,291 ಕಟ್ಟಡಗಳನ್ನು ಸರ್ವೆ ಮಾಡಲಾಗಿದ್ದು ಈ ಎಲ್ಲಾ ಕಟ್ಟಡ ಮಾಲೀಕರಿಗೆ ದಾಖಲೆಗಳನ್ನು ಸಲ್ಲಿಸುವಂತೆ ತಿಳಿಸಲಾಗಿದೆ. ಮಹಾದೇವಪುರದಲ್ಲಿ 713 ಕಟ್ಟಡಗಳು ಹಾಗೂ ದಾಸರಹಳ್ಳಿಯಲ್ಲಿ 459 ಕಟ್ಟಡಗಳನ್ನು ನಿಯಮ ಉಲ್ಲಂಘನೆ ಮಾಡಿ ಕಟ್ಟಲಾಗಿದ್ದು, ನೋಟಿಸ್ ಜಾರಿ ಮಾಡಲಾಗಿದೆ.