ಬೆಂಗಳೂರು: ಸದ್ಯದಲ್ಲೇ ಕೋವಿಡ್ ಲಸಿಕೆ ಬರುವ ನಿರೀಕ್ಷೆ ಇರುವುದರಿಂದ ಲಸಿಕೆಯ ಸಂಗ್ರಹಣೆ ಹಾಗೂ ವಿತರಣೆ ಬಗ್ಗೆ ಕೇಂದ್ರ ಸರ್ಕಾರದ ಸೂಚನೆಯಂತೆ ಬಿಬಿಎಂಪಿ ಸಿದ್ಧತಾ ಸಭೆ ನಡೆಸಿದೆ.
ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಆರೋಗ್ಯಾಧಿಕಾರಿಗಳು, ನರ್ಸಿಂಗ್ ಹೋಂ ಅಸೋಸಿಯೇಷನ್ಸ್ ಪದಾಧಿಕಾರಿಗಳು ಮತ್ತು ಮೆಡಿಕಲ್ ಕಾಲೇಜು ಪ್ರತಿನಿಧಿಗಳು ಭಾಗವಹಿಸಿದ್ದರು. ಲಸಿಕೆ ಬಂದರೆ ಮೊದಲ ಹಂತದಲ್ಲಿ ಆರೋಗ್ಯ ಸಿಬ್ಬಂದಿಗೆ ನೀಡಲು ನಿರ್ಧರಿಸಲಾಗಿದೆ.
ಕೋವಿಡ್ ಲಸಿಕೆ ಲಭ್ಯವಾದರೆ ಅದನ್ನು ಶೀತಲ ಸರಪಳಿ ವ್ಯವಸ್ಥೆ (ಕೋಲ್ಡ್ ಚೈನ್ ಸಿಸ್ಟಂ)ಯಲ್ಲಿ ಇಡಬೇಕಾಗುತ್ತದೆ. ಹೀಗಾಗಿ ಪಾಲಿಕೆಯಲ್ಲಿ ಲಭ್ಯವಿರುವ ಕೋಲ್ಡ್ ಚೈನ್ ಸಿಸ್ಟಂ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಸದ್ಯ ನಗರದ ದಾಸಪ್ಪ ಆಸ್ಪತ್ರೆಯಲ್ಲಿ ಈ ವ್ಯವಸ್ಥೆ ಇದೆ. ಜೊತೆಗೆ ಪಾಲಿಕೆ ಬಳಿ 175 ರೆಫ್ರಿಜರೇಟರ್ಗಳಿವೆ. ಇದರೊಂದಿಗೆ 150 ಡಿಪ್ ಫ್ರಿಡ್ಜ್ಗಳ ಸಿದ್ಧತೆ ಬಗ್ಗೆಯೂ ಚಿಂತನೆ ನಡೆಸಲಾಗಿದೆ.
ಬೆಂಗಳೂರಿನ ಕ್ಲಿನಿಕ್, ರೆಫರಲ್ ಆಸ್ಪತ್ರೆ, ನರ್ಸಿಂಗ್ ಹೋಂ, ಹೆರಿಗೆ ಆಸ್ಪತ್ರೆ, ಅಂಗನವಾಡಿ ಕೇಂದ್ರಗಳು, ಮೆಡಿಕಲ್ ಕಾಲೇಜ್, ನರ್ಸಿಂಗ್ ಕಾಲೇಜ್, ಪ್ಯಾರಾ ಮೆಡಿಕಲ್ ಕಾಲೇಜು ಸೇರಿದಂತೆ ಎಲ್ಲಾ ವೈದ್ಯಕೀಯ ಸಂಸ್ಥೆಗಳ ಸಿಬ್ಬಂದಿಯ ವಿವರ ದಾಖಲಿಸಬೇಕಾಗುತ್ತದೆ. ಈಗಾಗಲೇ ಶೇ. 33ರಷ್ಟು ವೈದ್ಯಕೀಯ ಸಂಸ್ಥೆಗಳು ಸಿಬ್ಬಂದಿ ವಿವರವನ್ನು ಪಾಲಿಕೆ ಪೋರ್ಟಲ್ಗೆ ದಾಖಲಿಸಿವೆ. ಇನ್ನುಳಿದ ಶೇ. 68ರಷ್ಟು ಸಂಸ್ಥೆಗಳು ದಾಖಲು ಮಾಡಬೇಕಾಗಿದೆ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ವಿಜಯೇಂದ್ರ ತಿಳಿಸಿದರು.
ಒಟ್ಟು 4,270 ವೈದ್ಯಕೀಯ ಸಂಸ್ಥೆಗಳು ನೋಂದಾಯಿಸಿಕೊಂಡಿವೆ. ಪಾಲಿಕೆ ನೀಡುವ ವಿವರಗಳ ಅನುಸಾರವಾಗಿ ಕೇಂದ್ರ ಸರ್ಕಾರ ವ್ಯಾಕ್ಸಿನ್ ಬಿಡುಗಡೆ ಮಾಡಲಿದೆ. ನ. 21ರೊಳಗೆ ವೈದ್ಯಕೀಯ ಸಂಸ್ಥೆಗಳು ಸಿಬ್ಬಂದಿ ಮಾಹಿತಿ ಕೊಡಬೇಕು. ಇದುವರೆಗೆ 94 ಸಾವಿರ ಸಿಬ್ಬಂದಿ ಮಾಹಿತಿ ಕಲೆಹಾಕಲಾಗಿದೆ. ಈ ಪೈಕಿ ಡೆಂಟಲ್, ಮೆಡಿಕಲ್, ಪ್ಯಾರಾ ಮೆಡಿಕಲ್ ಸಿಬ್ಬಂದಿ ಸೇರಿದಂತೆ ಒಟ್ಟು 74 ಸಾವಿರ ಜನರಿಗೆ ಲಸಿಕೆ ನೀಡಲಾಗುತ್ತದೆ. ಒಟ್ಟು 4,350 ಖಾಸಗಿ ಆಸ್ಪತ್ರೆಗಳಿವೆ. ಈ ಆಸ್ಪತ್ರೆಗಳ ಸಿಬ್ಬಂದಿ ಹಾಗೂ 1,800 ಅಂಗನವಾಡಿ ಸಿಬ್ಬಂದಿಗೆ ಲಸಿಕೆ ನೀಡಲು ಈಗಾಗಲೇ ಮಾಹಿತಿ ಕಲೆಹಾಕಲಾಗಿದೆ ಎಂದರು.