ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP) ವ್ಯಾಪ್ತಿಯಲ್ಲಿ 'ಪಾಲಿಕೆ ವೈದ್ಯರು ನಿಮ್ಮ ಮನೆ ಬಾಗಿಲಿಗೆ- ನಿಮ್ಮ ಆರೋಗ್ಯವೇ ನಮ್ಮ ಧ್ಯೇಯ' ಎಂಬ ಧ್ಯೇಯ ವಾಕ್ಯದೊಂದಿಗೆ ಪಾಲಿಕೆ ವೈದ್ಯರ ತಂಡವು ಮನೆ ಮನೆಗೆ ಭೇಟಿ ನೀಡಿ ಕೋವಿಡ್ ಸಂಬಂಧಿಸಿದಂತೆ ಆರೋಗ್ಯ ಸಮೀಕ್ಷೆ ನಡೆಸುವ ಯೋಜನೆಗೆ ಇಂದು ಕಂದಾಯ ಸಚಿವ ಆರ್.ಅಶೋಕ್ ಚಾಲನೆ ನೀಡಿದರು.
ಈ ಸಮೀಕ್ಷೆಯಲ್ಲಿ ಒಬ್ಬ ವೈದ್ಯರು ಮತ್ತು ಒಬ್ಬ ಅರೆ ವೈದ್ಯಕೀಯ ಸಿಬ್ಬಂದಿಗಳ ತಂಡದೊಂದಿಗೆ ಪ್ರತೀ ಮನೆಗೆ ಭೇಟಿ ನೀಡಿ, ಕೋವಿಡ್ ಗುಣಲಕ್ಷಣಗಳ ಬಗ್ಗೆ ಮಾಹಿತಿ ಪಡೆದು ಪರಿಶೀಲಿಸುವ ಮತ್ತು ಕೋಮಾರ್ಬಿಟ್ ಖಾಯಿಲೆಗಳಿರುವ ಕುರಿತು ವಿಚಾರಿಸಿ, ಆರೋಗ್ಯ ಸಲಹೆ ನೀಡಲಾಗುತ್ತದೆ. ಈ ಸಂಬಂಧ ಮೊದಲ ಹಂತವಾಗಿ ಪಾಲಿಕೆಯ ವಿಧಾನಸಭಾ ಕ್ಷೇತ್ರವಾರು 2 ವಾರ್ಡ್ಗಳಂತೆ 54 ವಾರ್ಡ್ಗಳನ್ನು ಆಯ್ಕೆ ಮಾಡಲಾಗಿದ್ದು, ಇಂದಿನಿಂದ (ಆಗಸ್ಟ್ 16, 2021 ರಿಂದ) ಸಮೀಕ್ಷಾ ಕಾರ್ಯ ಪ್ರಾರಂಭವಾಗಲಿದೆ. ಸಮೀಕ್ಷಾ ಕಾರ್ಯದಲ್ಲಿ ಫಿಸಿಕಲ್ ಟ್ರಯಾಜಿಂಗ್ ಮತ್ತು ಲಸಿಕಾ ಕಾರ್ಯಕ್ರಮಕ್ಕೆ ಯಾವುದೇ ತೊಂದರೆಯಾಗದಂತೆ ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದು ಮುಖ್ಯ ಆಯುಕ್ತರು ಗೌರವ್ ಗುಪ್ತ ತಿಳಿಸಿದ್ದಾರೆ.
ಸಮೀಕ್ಷಾ ತಂಡ ಹೇಗೆ ಕಾರ್ಯನಿರ್ವಹಿಸಲಿದೆ?
- ಪ್ರತೀ ತಂಡವು ಪ್ರತೀ ನಿತ್ಯ ಕನಿಷ್ಠ 50 ಮನೆಗಳ ಸಮೀಕ್ಷೆ ನಡೆಸುವುದು.
- ಪ್ರತೀ ವಾರ್ಡ್ಗೆ 5 ವೈದ್ಯರ ತಂಡವಿರಲಿದ್ದು, ಅಗತ್ಯಕ್ಕನುಗುಣವಾಗಿ ಹೆಚ್ಚಿನ ತಂಡಗಳನ್ನು ನಿಯೋಜಿಸಿಕೊಳ್ಳಲಾಗುವುದು.
- ಪ್ರತೀ ತಂಡದಲ್ಲಿ ಒಬ್ಬ ವೈದ್ಯಾಧಿಕಾರಿ (ಎಂ.ಬಿ.ಬಿ.ಎಸ್/ಬಿ.ಡಿ.ಎಸ್/ಆಯುಷ್) ಮತ್ತು ಅರೆವೈದ್ಯಕೀಯ ಸಿಬ್ಬಂದಿಯನ್ನೊಳಗೊಂಡ ತಂಡವಿರಲಿದೆ.
- ಪ್ರತೀ ತಂಡದ ವೈದ್ಯಾಧಿಕಾರಿಗಳು ‘ಪಾಲಿಕೆ ವೈದ್ಯರು ನಿಮ್ಮ ಮನೆ ಬಾಗಿಲಿಗೆ, ನಿಮ್ಮ ಆರೋಗ್ಯವೇ ನಮ್ಮ ಧ್ಯೇಯ’ ಎಂಬ ಘೋಷಣೆಯನ್ನು ಮುದ್ರಿಸಿರುವ ಬಿಳಿ ಬಣ್ಣದ ಏಪ್ರಾನ್‌ನ್ನು ಧರಿಸಲಿದ್ದಾರೆ.
- ಮನೆ-ಮನೆಗೆ ತಂಡಗಳು ಭೇಟಿ ನಿಡುವ ಸಲುವಾಗಿ ವಾಹನಗಳ ನಿಯೋಜನೆ ಮಾಡಲಾಗಿದೆ.
- ಮನೆ ಭೇಟಿಯ ಸಮಯದಲ್ಲಿ ಕೋವಿಡ್-19 ಸೋಂಕಿತರು ಪತ್ತೆಯಾದಲ್ಲಿ, ಸದರಿ ಸೋಂಕಿತರಿಗೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಭ್ಯವಿರುವ ಹೋಂ ಐಸೋಲೇಷನ್ ಕಿಟ್ ಅನ್ನು ನೀಡಲಾಗುವುದು.
- ಸಮೀಕ್ಷಾ ಕಾರ್ಯದಲ್ಲಿ ಪಡೆದ ಮಾಹಿತಿಯನ್ನು ಪ್ರತೀ ದಿನ ನಿಗದಿತ ಬಿಬಿಎಂಪಿ ತಂತ್ರಾಂಶದಲ್ಲಿ ನಮೂದಿಸಲು ವೈದ್ಯರ ತಂಡಕ್ಕೆ ಸೂಚಿಸಲಾಗಿದೆ.
ಈ ಬಳಿಕ ಸಚಿವ ಆರ್. ಅಶೋಕ್ ಮಾತನಾಡಿ, ಕೊರೊನಾ ರೋಗಿಗಳನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲು, ಲಸಿಕೆ ಬಗ್ಗೆ ಮಾಹಿತಿ ಪಡೆಯಲು, ಬಿಪಿ, ಶುಗರ್ ಕ್ಯಾನ್ಸರ್ನಂತಹ ಭೀಕರ ರೋಗಗಳನ್ನು ತಕ್ಷಣ ಪತ್ತೆ ಮಾಡಲು ಈ ಸಮೀಕ್ಷೆ ಸಹಾಯವಾಗಲಿದೆ. ಪ್ರತೀದಿನ ಒಂದು ತಂಡ 50 ಮನೆ ತಲುಪಲಿದೆ. ಒಂದು ತಿಂಗಳೊಳಗೆ ಎಲ್ಲಾ ವಾರ್ಡ್ಗೆ ಈ ಸಮೀಕ್ಷೆ ವಿಸ್ತರಿಸಲಾಗುವುದು. ಯೋಜನೆಗೆ ಆಗುವ ಖರ್ಚು ವೆಚ್ಚಕ್ಕಿಂತ ಆರೋಗ್ಯ ಮುಖ್ಯ. ಕೋವಿಡ್ ಹೆಚ್ಚಾದರೆ ಸರ್ಕಾರ ಕಠಿಣ ನಿಲುವು ತೆಗೆದುಕೊಳ್ಳಲಿದೆ ಎಂದರು.
ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಮಾತನಾಡಿ, ನಗರದಲ್ಲಿ ಸಾವಿರಕ್ಕಿಂತ ಹೆಚ್ಚು ಅಪಾರ್ಟ್ಮೆಂಟ್ ಅಸೋಸಿಯೇಶನ್ಗಳಿಗೆ ಮಾರ್ಗಸೂಚಿ ನೀಡಲಾಗಿದೆ. ಅಪಾರ್ಟ್ಮೆಂಟ್ಗಳಲ್ಲೇ 11 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇದೆ. ಕಂಟೈನ್ಮೆಂಟ್ ಮಾಡುವ ಮೂಲಕ ಕೋವಿಡ್ ಹರಡುವುದನ್ನು ನಿಯಂತ್ರಿಸಲಾಗುತ್ತಿದೆ ಎಂದರು.