ಬೆಂಗಳೂರು: ಮಾಜಿ ಶಾಸಕ ಹಾಗೂ ಪೌರಕಾರ್ಮಿಕರ ಪಿತಾಮಹ ಎಂದೇ ಕರೆಯಲ್ಪಡುವ ಐಪಿಡಿ ಸಾಲಪ್ಪ ಅವರ 23ನೇ ಪುಣ್ಯ ಸ್ಮರಣೆಯನ್ನು ಬಿಬಿಎಂಪಿ ಅಧಿಕಾರಿಗಳು ಆಚರಣೆ ಮಾಡಿದರು.
ಮೇಯರ್ ಗಂಗಾಂಬಿಕೆ ಹಾಗೂ ಆಡಳಿತ ವರ್ಗ ಐಪಿಡಿ ಸಾಲಪ್ಪ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಈ ವೇಳೆ ಮೇಯರ್ ಗಂಗಾಂಬಿಕೆ ಮಾತನಾಡಿ, ಐಪಿಡಿ ಸಾಲಪ್ಪ ಅವರಂದ್ರೆ ಪೌರಕಾರ್ಮಿಕರ ಪಿತಾಮಹ. ಕೆಲ ವರ್ಷಗಳ ಹಿಂದೆ ಪೌರ ಕಾರ್ಮಿಕರಿಗೆ ಯಾವ ಸೌಲಭ್ಯ ಸಿಗಬೇಕು. ಬೇರೆ ಬೇರೆ ವಿಭಾಗದಲ್ಲಿ ಕೆಲಸ ಮಾಡುವಂತಹ ನೌಕರರಿಗೆ ಯಾವೆಲ್ಲ ಸೌಲಭ್ಯ ಸಿಗುತ್ತವೋ ಆ ಎಲ್ಲಾ ಸೌಲಭ್ಯಗಳು ಪೌರ ಕಾರ್ಮಿಕರಿಗೆ ಸಿಗಬೇಕು. ಹೀಗೆ ಮುಂತಾದ ವಿಷಯಗಳನೊಳಗೊಂಡ ಮೂವತ್ತು ವರದಿಗಳನ್ನು ತಯಾರಿಸಿ ಸರ್ಕಾರದಿಂದ ಅನುಮೋದನೆ ಪಡೆಯುವಲ್ಲಿ ಯಶ್ವಸಿಯಾದರು. ಪೌರಕಾರ್ಮಿಕರು ಕೂಡಾ ಎಲ್ಲರಂತೆ ಬದುಕಬೇಕೆಂದು ಹಠ ತೊಟ್ಟವರು ಅವರು. ಇಂದು ಅವರ ಪುಣ್ಯ ಸ್ಮರಣೆ ಆಚರಿಸುತ್ತಿದ್ದೇವೆ ಎಂದರು.
ಪೌರ ಕಾರ್ಮಿಕರ ಸಮಸ್ಯೆ ಆಲಿಸಿದ ಆಯುಕ್ತರು:
ಇದೇ ವೇಳೆ ಆಯುಕ್ತರ ಬಳಿ ಪೌರಕರಾರ್ಮಿಕರ ಮುಖಂಡರು ತಮ್ಮ ಕಷ್ಟಗಳನ್ನು ತೋಡಿಕೊಂಡರು. ಬಯೋ ಮೆಟ್ರಿಕ್ ಸಮಸ್ಯೆ, ವೇತನ ಕಡಿತ, ವೇತನ ಸರಿಯಾದ ಸಮಯಕ್ಕೆ ಆಗದಿರುವ ಬಗ್ಗೆ ದೂರು ಹೇಳಿದರು. ಅಲ್ಲದೇ ಪೌರಕಾರ್ಮಿಕರನ್ನು ಕಾಯಂ ಮಾಡುವ ಕುರಿತು, ಪಿಂಚಣಿ ಸೌಲಭ್ಯಗಳನ್ನು ನೀಡುವ ಬಗ್ಗೆ ಮನವಿ ಮಾಡಿದರು. ಎಲ್ಲಾ ಸಮಸ್ಯೆಗಳನ್ನು ಒಂದೊಂದಾಗಿಯೇ ಬಗೆಹರಿಸಲಾಗುವುದು ಎಂದು ಆಯುಕ್ತರು ಭರವಸೆ ನೀಡಿದರು.
ಈ ವೇಳೆ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ ಹಾಗೂ ವಿಶೇಷ ಆಯುಕ್ತರಾದ ರಂದೀಪ್ ಸ್ವತಃ ಎಲ್ಲಾ ಪೌರಕಾರ್ಮಿಕರಿಗೆ ಉಪಹಾರ ಬಡಿಸಿದರು.