ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಅಂಗಡಿ ಮುಂಗಟ್ಟುಗಳಲ್ಲಿ ಇದುವರೆಗೂ 8,000 ಅಂಗಡಿಗಳಲ್ಲಿ ಕನ್ನಡ ನಾಮಫಲಕ ಹಾಕಿದ್ದಾರೆ. ಕನ್ನಡ ನಾಮಫಲಕ ಹಾಕದ ಸುಮಾರು 22 ಸಾವಿರ ವರ್ತಕರಿಗೆ ನೋಟಿಸ್ ಕೊಡಲಾಗಿದೆ ಎಂದು ಬಿಬಿಎಂಪಿ ಆಯ್ತುಕ್ತ ಬಿ.ಹೆಚ್.ಅನಿಲ್ ಕುಮಾರ್ ತಿಳಿಸಿದ್ದಾರೆ.
ಬಿಬಿಎಂಪಿ ಕಚೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಆಯುಕ್ತರು, ಕಡ್ಡಾಯವಾಗಿ ಕನ್ನಡ ನಾಮಫಲಕ ಹಾಕುವಂತೆ ಬಿಬಿಎಂಪಿಯಿಂದ ಲೈಸನ್ಸ್ ಪಡೆದಿರುವ 47,406 ವರ್ತಕರಿಗೆ ತಿಳಿಸಿದ್ದು, ಅದರಲ್ಲಿ ಕನ್ನಡ ನಾಮಪಲಕ ಹಾಕದ 22,474 ಉದ್ಯಮಗಳಿಗೆ ಈಗಾಗಲೇ ನೋಟಿಸ್ ನೀಡಿದ್ದೇವೆ. ಅಲ್ಲದೆ ಈಗಾಗಲೇ 8,195 ಅಂಗಡಿಗಳಲ್ಲಿ ಕನ್ನಡ ನಾಮಫಲಕ ಅಳವಡಿಸಿಕೊಂಡಿದ್ದಾರೆ ಎಂದು ಆಯುಕ್ತರು ತಿಳಿಸಿದ್ರು.
ಅಲ್ಲದೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಅಂಗಡಿಗಳಲ್ಲಿ ಕೇವಲ 47,406 ಅಂಗಡಿಗಳ ಮಾಲೀಕರು ಅಧಿಕೃತವಾಗಿ ಬಿಬಿಎಂಪಿಯಿಂದ ಟ್ರೇಡ್ ಲೈಸನ್ಸ್ ಪಡೆದುಕೊಂಡಿದ್ದಾರೆ. ಇನ್ನು ರೆಸಿಡೆನ್ಸಿಯಲ್ ಏರಿಯಾದಲ್ಲಿ ಕಮರ್ಷಿಯಲ್ ಚುಟುವಟಿಕೆ ಮಾಡುವ ಹಾಗಿಲ್ಲ. ಹಾಗಾಗಿ ರೆಸಿಡೆನ್ಸಿಯಲ್ ಏರಿಯಾಗಳಲ್ಲಿ ಇರುವ ಅಂಗಡಿಗಳು ಹೋಟೆಲ್ಗಳು, ಬೇಕರಿಗಳು ಬಿಬಿಎಂಪಿಯಿಂದ ಟ್ರೇಡ್ ಲೈಸನ್ಸ್ ಪಡೆದುಕೊಂಡಿಲ್ಲ. ಆದರೆ ಬೆಸ್ಕಾಂ ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 5 ಲಕ್ಷ ಕಮರ್ಷಿಯಲ್ ಲೈಸನ್ಸ್ ಕೊಟ್ಟಿದ್ದಾರೆ.
ಈಗ ನಾನು ಬೆಸ್ಕಾಂನಿಂದ ಅದರ ಸಂಪೂರ್ಣ ಮಾಹಿತಿ ತರಿಸಿಕೊಂಡಿದ್ದೇನೆ. ಈಗ ನಾವು ಬೆಸ್ಕಾಂ ಲೈಸನ್ಸ್ ಆಧಾರದಲ್ಲಿ ಬಿಬಿಎಂಪಿ ವತಿಯಿಂದ ಕಮರ್ಷಿಯಲ್ ಟ್ರೇಡ್ ಲೈಸನ್ಸ್ ಕೊಡಬೇಕಾಗಿದೆ. ಅಲ್ಲದೆ ಈ ವಿಷಯವಾಗಿ ಸರ್ಕಾರಕ್ಕೂ ಪತ್ರ ಬರೆದು ಗಮನಕ್ಕೆ ತಂದಿದ್ದೇನೆ. ರೆಸಿಡೆನ್ಸಿಯಲ್ ಏರಿಯಾಗಳಲ್ಲಿ ಇರುವ ಹೋಟೆಲ್ಗಳು, ಕೇಕ್ ಶಾಪ್ಗಳು ಹಾಗೂ ಅಂಗಡಿಗಳಿಗೆ ಕಮರ್ಷಿಯಲ್ ಟ್ರೇಡ್ ಲೈಸನ್ಸ್ ಕೊಡಬೇಕಾಗಿದೆ. ರೆಸಿಡೆನ್ಸಿಯಲ್ ಏರಿಯಾಗಳಲ್ಲಿ ವ್ಯಾಪಾರ ಮಾಡುತ್ತಿರುವ ವರ್ತಕರು ಬಿಬಿಎಂಪಿಯಿಂದ ಲೈಸನ್ಸ್ ಪಡೆಯದೆ ಇರುವುದರಿಂದ ಪಾಲಿಕೆಗೆ ತುಂಬಾ ನಷ್ಟವಾಗುತ್ತಿದೆ ಎಂದರು.
ಅಲ್ಲದೆ ಕಡ್ಡಾಯ ನಾಮಫಲಕ ಮಾಲ್ಗಳಲ್ಲಿ ಇರುವ ಶಾಪ್ಗಳಿಗೂ ಅನ್ವಯವಾಗಲಿದ್ದು, ನವಂಬರ್ 30ಕ್ಕೆ ಅವಧಿ ಕೊನೆಯಾಗಲಿದೆ. ಕನ್ನಡ ನಾಮಫಲಕ ಹಾಕದ ಅಂಗಡಿಗಳ ವಿರುದ್ಧ ಕ್ರಮ ಕೈಹೊಳ್ಳಲಿದ್ದೇವೆ. ಈ ಹಿಂದೆ ಹೇಳಿದಂತೆ ಲೈಸನ್ಸ್ ಕ್ಯಾನ್ಸಲ್ ಮಾಡುತ್ತೇವೆ. ಅದಕ್ಕೆ ಇನ್ನೂ ಟೈಂ ಇದೆ ಎಂದು ಆಯುಕ್ತರು ತಿಳಿಸಿದರು.