ಬೆಂಗಳೂರು: ಗೌರಿ-ಗಣೇಶ ಹಬ್ಬದ ಆಚರಣೆ ಮುಂದಿನ ತಿಂಗಳಲ್ಲಿ ನಡೆಯಲಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಗಣೇಶೋತ್ಸವ ಮಾಡಲು ಈ ಬಾರಿ ಅವಕಾಶ ಇಲ್ಲ. ಮನೆಯಲ್ಲೇ ಗಣೇಶ ಕೂರಿಸಿ, ಮನೆಯಲ್ಲೇ ವಿಸರ್ಜಿಸಿ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಆಯುಕ್ತರು, ಗಣೇಶ ಮೂರ್ತಿ ಇಟ್ಟರೆ ಮಾರಾಟವೂ ಆರಂಭವಾಗುತ್ತದೆ. ಇದರಿಂದ ಸಾಮಾಜಿಕ ಅಂತರ ಸಾಧ್ಯವಾಗುವುದಿಲ್ಲ. ನಿಯಮ ಮೀರಿಯೂ ಗಣೇಶ ಕೂರಿಸಿದರೆ ಪಾಲಿಕೆ ಕೆರೆಗಳಲ್ಲಿ ವಿಸರ್ಜನೆಗೆ ಅವಕಾಶವಿಲ್ಲ ಎಂದು ತಿಳಿಸಿದ್ದಾರೆ.
ಇದರಿಂದ ವ್ಯಾಪಾರಿಗಳಿಗೆ ನಷ್ಟವಾಗುತ್ತದೆ ನಿಜ. ಆದರೆ ಎಲ್ಲರಿಗೂ ನಷ್ಟ ಆಗಿರುವುದರಿಂದ ವ್ಯಾಪಾರಿಗಳೂ ಈ ಸಮಸ್ಯೆ ಅರಿಯಬೇಕಿದೆ. ಮನೆಗಳಲ್ಲಿ ಕೂರಿಸುವ ಸಣ್ಣ ಗಣಪತಿ ಮೂರ್ತಿ ಮಾರಾಟ ಮಾಡಬಹುದು. ಮೆರೆವಣಿಗೆ ನಡೆಸಿ, ಮೂರ್ತಿ ಪ್ರತಿಷ್ಠಾಪನೆ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಾಮೂಹಿಕ ಪ್ರಾರ್ಥನೆ ಇಲ್ಲ:
ಬಕ್ರೀದ್ ಹಬ್ಬದಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಇಲ್ಲ. ಪ್ರಾಣಿ ವಧೆಗೂ ಸಾರ್ವಜನಿಕ ಜಾಗಗಳಲ್ಲಿ ಅವಕಾಶ ಇರಲ್ಲ ಎಂದರು.
19 ಆಸ್ಪತ್ರೆಗಳ ಲೈಸನ್ಸ್ ರದ್ದು:
ನಗರದಲ್ಲಿ ನಿಯಮದ ಪ್ರಕಾರ ಕೊರೊನಾ ರೋಗಿಗಳಿಗೆ ಶೇ. 50ರಷ್ಟು ಹಾಸಿಗೆ ಬಿಟ್ಟುಕೊಡದ 19 ಖಾಸಗಿ ಆಸ್ಪತ್ರೆಗಳ ಲೈಸನ್ಸ್ ರದ್ದು ಮಾಡಲಾಗಿದೆ. ಆಸ್ಪತ್ರೆಗಳು ಸಮಸ್ಯೆಗಳಿದ್ದರೆ ತಿಳಿಸಬೇಕು. ಶೇ. 50ರಷ್ಟು ಒಂದು ಆಸ್ಪತ್ರೆಯಲ್ಲಿ ಬೆಡ್ ಕೊಡಲಾಗದಿದ್ದರೆ ಎರಡು ಆಸ್ಪತ್ರೆ ಸೇರಿ ಒಂದು ಆಸ್ಪತ್ರೆ ಬಿಟ್ಟುಕೊಡಲಿ ಎಂದರು.