ಬೆಂಗಳೂರು: ಬಿಬಿಎಂಪಿ ನೂತನ ಆಯುಕ್ತರಾಗಿ ಮಂಜುನಾಥ್ ಪ್ರಸಾದ್ ಅಧಿಕಾರ ಸ್ವೀಕರಿಸಿದ್ದಾರೆ. ಹಿಂದಿನ ಆಯುಕ್ತ ಬಿ ಹೆಚ್ ಅನಿಲ್ ಕುಮಾರ್ ಅಧಿಕಾರ ಹಸ್ತಾಂತರ ಮಾಡದ ಕಾರಣ ಖುದ್ದು ತಾವೇ ಬಂದು ಚಾರ್ಜ್ ತೆಗೆದುಕೊಂಡಿದ್ದಾರೆ. ಕೋವಿಡ್-19 ನಿಯಂತ್ರಿಸಲು ಸ್ವಯಂ ಸೇವಕರನ್ನು ಹೆಚ್ಚಾಗಿ ಬಳಸಿಕೊಳ್ಳಲು ಹಾಗೂ ಬಿಬಿಎಂಪಿಯಲ್ಲಿನ ಸಿಬ್ಬಂದಿ ಕೊರತೆ ತುರ್ತಾಗಿ ನಿವಾರಿಸಲು ಅವರು ಪ್ರಥಮ ಆದ್ಯತೆ ನೀಡಲಿದ್ದಾರೆ.
ಅಧಿಕಾರ ವಹಿಸಿಕೊಂಡ ನಂತರ ಮಾತನಾಡಿದ ಮಂಜುನಾಥ್ ಪ್ರಸಾದ್, ಈಗಾಗಲೇ 20 ಸಾವಿರ ಆ್ಯಂಟಿಜನ್ ಟೆಸ್ಟ್ ಕಿಟ್ಗಳನ್ನು ಬೆಂಗಳೂರಿನ ಎಲ್ಲ ಭಾಗಗಳಿಗೆ ಕಳುಹಿಸಲಾಗಿದೆ. ಕರ್ತವ್ಯ ನಿರ್ವಹಣೆಗಾಗಿ 35 ಸಾವಿರ ಸರ್ಕಾರಿ ಸಿಬ್ಬಂದಿಯನ್ನು ಗುರುತಿಸಲಾಗಿದೆ. ಆದರೆ, ಇವರಲ್ಲಿ ಶೇ.25ರಷ್ಟು ಜನ ಕೋವಿಡ್ ಭಯದಿಂದ ಕೆಲಸಕ್ಕೆ ಹಾಜರಾಗುವುದಿಲ್ಲ ಎಂದು ಹೇಳಿದರು.
ಚುನಾವಣೆಗಳನ್ನು ನಿರ್ವಹಿಸುವ ಮಾದರಿಯಲ್ಲೇ ಪೊಲೀಸ್ ಸ್ಟೇಷನ್, ಬೂತ್ ಲೆಕ್ಕದಲ್ಲಿ ಕೋವಿಡ್ ನಿರ್ವಹಣೆ ಮಾಡಲಾಗುತ್ತದೆ. ಒಂದು ವಾರ್ಡ್ಗೆ 40 ಬೂತ್ ಇದ್ದರೆ ಅದೇ ಲೆಕ್ಕದಲ್ಲಿ ಕೆಲಸ ಮಾಡಬಹುದು. ಅವತ್ತಿನ ಸೋಂಕಿತರನ್ನು ಅವತ್ತೇ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಇದರಿಂದ ಸೋಂಕು ಹರಡುವುದನ್ನು ಹಾಗೂ ಬ್ಯಾಕ್ಲಾಗ್ ಉಂಟಾಗುವುದನ್ನು ತಡೆಯಬಹುದು. 700 ಹೊಸ ಆ್ಯಂಬುಲೆನ್ಸ್ ಪಡೆಯಲಾಗಿದೆ, ವಾರ್ಡ್ಗೆ 2 ಆ್ಯಂಬುಲೆನ್ಸ್ ನೀಡಲು ಅವಕಾಶವಿದೆ ಎಂದರು.
ಕೋವಿಡ್ನಿಂದಾಗುತ್ತಿರುವ ಸಾವಿನ ಪ್ರಮಾಣ ಕಡಿಮೆ ಮಾಡುವುದು, ಟೆಸ್ಟ್ ರಿಪೋರ್ಟ್ ಬೇಗ ಸಿಗುವಂತೆ ಮಾಡುವುದು, ಕೋ ಮಾರ್ಬಿಡ್ ಕಂಡೀಶನ್ ಇರುವವರಿಗೆ ತಪ್ಪದೇ ಪರೀಕ್ಷೆ ಮಾಡುವುದು, ಲಕ್ಷಣ ರಹಿತ ಸೋಂಕಿತರನ್ನು ಬಲವಂತವಾಗಿ ಆಸ್ಪತ್ರೆಗೆ ಕರೆತರುವುದನ್ನು ತಡೆಯುವುದು, ಸರ್ವೇಲೆನ್ಸ್ ಮತ್ತು ಕಾಂಟ್ಯಾಕ್ಟ್ ಟ್ರೇಸಿಂಗ್ ವೇಗ ಹೆಚ್ಚಿಸುವುದು ತಮ್ಮ ಪ್ರಮುಖ ಗುರಿಗಳಾಗಿವೆ ಎಂದು ಅವರು ತಿಳಿಸಿದ್ದಾರೆ.
ಅಧಿಕಾರ ಹಸ್ತಾಂತರ ಮಾಡಲು ಹಿಂದಿನ ಆಯುಕ್ತ ಅನಿಲ್ ಕುಮಾರ್ ಗೈರು ವಿಚಾರವಾಗಿ ಪ್ರತಿಕ್ರಿಯಿಸಿ, ಮನೆಗೇ ಫೈಲ್ ಕಳಿಸಿಕೊಡಿ, ಸೈನ್ ಮಾಡ್ತೀನಿ ಎಂದು ಅವರು ಹೇಳಿದ್ದರು. ಅವರು ಸಾಕಷ್ಟು ಕೆಲಸ ಮಾಡಿದ್ದಾರೆ, ಅದನ್ನು ಮುಂದುವರೆಸಿಕೊಂಡು ಹೋಗುವೆ ಎಂದರು.