ಬೆಂಗಳೂರು: ಬಿಬಿಎಂಪಿ ಅಧಿಕಾರಿಗಳು ರಾಜಕಾಲುವೆ ಒತ್ತುವರಿ ತೆರವುಗೊಳಿಸದ ಪರಿಣಾಮ ಭಾರಿ ಮಳೆಯಿಂದ ರಸ್ತೆ ಮತ್ತು ಕೆಲ ಪ್ರದೇಶಗಳು ಜಲಾವೃತವಾದ ಪರಿಸ್ಥಿತಿ ಉದ್ಭವಿಸುವಂತಾಗಿದೆ ಎಂದು ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ನಗರದ ಕೆರೆಗಳ ಸಂರಕ್ಷಣೆ ಹಾಗೂ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲು ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ಅವರ ನೇತೃತ್ವದ ವಿಭಾಗೀಯ ಪೀಠ ಒತ್ತುವರಿ ತೆರವಿಗೆ ಕ್ರಮ ವಹಿಸಲು ಸೂಚಿಸಿತು.
ಅಲ್ಲದೆ, ಹೈಕೋರ್ಟ್ 2019ರ ಜೂ.18ರಂದು ನೀಡಿರುವ ನಿರ್ದೇಶನದ ಅನ್ವಯ ನಗರದಲ್ಲಿನ ರಾಜಕಾಲುವೆಯ ಒತ್ತುವರಿಯನ್ನು ತೆರವುಗೊಳಿಸಲು ಸರ್ಕಾರ ಮತ್ತು ಬಿಬಿಎಂಪಿ ಸೇರಿದಂತೆ ಸಂಬಂಧಪಟ್ಟ ಪ್ರಾಧಿಕಾರಗಳು ತಕ್ಷಣ ಕ್ರಮ ಕೈಗೊಂಡು ವಸ್ತುಸ್ಥಿತಿ ವರದಿ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿದೆ.
ವಿಚಾರಣೆ ವೇಳೆ ವಕೀಲ ಜಿ.ಆರ್. ಮೋಹನ್ ಮಧ್ಯಂತರ ಅರ್ಜಿ ಸಲ್ಲಿಸಿ, ಬೆಂಗಳೂರಿನಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ಉಂಟಾಗಿದ್ದ ಪ್ರವಾಹದ ಕುರಿತು ನ್ಯಾಯಪೀಠಕ್ಕೆ ಫೋಟೋ ಸಹಿತ ಮಾಹಿತಿ ನೀಡಿದರು.
ಇದನ್ನೂ ಓದಿ : ಮಳೆಗಾಲದ ಅಧಿವೇಶನ ಆರಂಭ: ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆದ ಸಿಎಂ