ಬೆಂಗಳೂರು: ನಿನ್ನೆಯಷ್ಟೇ ಹದಿನೈದನೇ ಹಣಕಾಸು ಆಯೋಗ, ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರದ ಅಧಿಕಾರಿಗಳೊಂದಿಗೆ ಅನುದಾನದ ಕುರಿತು ಸಭೆ ನಡೆಸಿ ವಾಪಾಸ್ಸಾಗಿದೆ. ಇದರ ಬೆನ್ನಲ್ಲೇ ಸಾಮಾಜಿಕ ಕಾರ್ಯಕರ್ತ ಅಮರೇಶ್, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ಗೆ ಪತ್ರ ಬರೆದು ಅಚ್ಚರಿ ಮೂಡಿಸಿದ್ದಾರೆ.
ಬಿಬಿಎಂಪಿಗೆ ಹಣ ಬಿಡುಗಡೆ ಮಾಡಲೇಬೇಡಿ. ಬಿಬಿಎಂಪಿ ಎಲ್ಲಾ ಅನುದಾನಗಳನ್ನು ದುರ್ಬಳಕೆ ಮಾಡ್ತಿದೆ. ಕಳೆದ ವರ್ಷಗಳದ್ದೇ ಆಡಿಟ್ ವರದಿಗಳನ್ನು ಸಿದ್ಧಪಡಿಸಿಲ್ಲ. ದೇಶದ ಹಣಕಾಸಿನ ಕಾಳಜಿ ಮೇರೆಗೆ ಈ ಪತ್ರ ಬರೆಯುತ್ತಿದ್ದೇನೆಂದು ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್ ವಿರುದ್ಧ ನಿರ್ಮಲಾ ಸೀತಾರಾಮನ್ಗೆ ಪತ್ರ ಬರೆದಿದ್ದಾರೆ. ಕೇಂದ್ರ ಸರ್ಕಾರದ ಅನುದಾನಗಳಾದ ಅಮೃತ್ ಯೋಜನೆ, ಸ್ವಚ್ಛ ಭಾರತ ಯೋಜನೆ, ಜೆಯುಎನ್ಯುಆರ್ಎಂ ಯೋಜನೆ, ಹದಿನಾಲ್ಕನೇ ಹಣಕಾಸು ಆಯೋಗದ ಅನುದಾನ ಸೇರಿದಂತೆ ಬಿಬಿಎಂಪಿ ಸಾಕಷ್ಟು ಹಣ ದುರ್ಬಳಕೆ ಮಾಡುತ್ತಿದೆ. ಅಷ್ಟೇ ಅಲ್ಲದೇ, ಪಾಲಿಕೆ ಗುತ್ತಿಗೆದಾರರಿಗೆ 15 ಸಾವಿರ ಕೋಟಿ ಹಾಗೂ ಬ್ಯಾಂಕ್ ಸಾಲ 700 ಕೋಟಿ ಬಾಕಿ ಉಳಿಸಿಕೊಂಡಿದೆ.
ಈ ನಡುವೆ ಪಾಲಿಕೆ ಆದಾಯಕ್ಕಿಂತ ಖರ್ಚು ಹೆಚ್ಚಾಗುತ್ತಿದ್ದು, ಆರ್ಥಿಕ ಅಶಿಸ್ತು ಇದೆ ಎಂದು ಸ್ವತಃ ಆಯುಕ್ತರೇ ಸರ್ಕಾರಕ್ಕೆ ಪತ್ರ ಬರೆದಿದ್ದರು ಎಂಬ ಅಂಶವನ್ನೂ ಪತ್ರದಲ್ಲಿ ನಮೂದಿಸಿದ್ದಾರೆ. ಒಟ್ಟಿನಲ್ಲಿ ಇನ್ನೂ ಹೆಚ್ಚಿನ ಅನುದಾನ ಕೊಡಿ ಎಂದು ಪಾಲಿಕೆ ಆಡಳಿತ ಕೇಂದ್ರಕ್ಕೆ ಮನವಿ ಮಾಡಿದ್ರೆ, ಅನುದಾನವನ್ನೇ ಕೊಡಬೇಡಿ, ದುರ್ಬಳಕೆಯಾಗ್ತಿದೆ ಎಂದು ಸಾಮಾಜಿಕ ಕಾರ್ಯಕರ್ತರು ಈ ರೀತಿ ಪತ್ರ ಬರೆದಿದ್ದಾರೆ.