ಬೆಂಗಳೂರು: ಕೆ.ಆರ್ ಮಾರುಕಟ್ಟೆ ಪಾದಚಾರಿ ಮಾರ್ಗ ಮತ್ತು ರಸ್ತೆಬದಿ ಒತ್ತುವರಿ ಮಾಡಿಕೊಂಡು ವ್ಯಾಪಾರ ಮಾಡುತ್ತಿದ್ದ ವ್ಯಾಪಾರಸ್ತರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳ ಜತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮೇಯರ್ ಗಂಗಾಂಬಿಕೆ ಮಾರುಕಟ್ಟೆ ತಪಾಸಣೆ ವೇಳೆ ತಿಳಿಸಿದ್ದಾರೆ.
ತಪಾಸಣೆ ನಡೆಸುವ ವೇಳೆ ಮಾತ್ರ ಸ್ವಚ್ಛ ಮಾಡುತ್ತಾರೆ ಎಂಬ ದೂರಿನ ಹಿನ್ನೆಲೆ ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆ.ಆರ್.ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರು ಪಾದಾಚಾರಿ ಮಾರ್ಗ ಒತ್ತುವರಿ ಮಾಡಿಕೊಂಡು ವ್ಯಾಪಾರ ಮಾಡುತ್ತಿದ್ದ ಪರಿಣಾಮ ಒತ್ತುವರಿ ಪ್ರದೇಶವನ್ನು ಕೂಡಲೇ ತೆರವು ಮಾಡುವಂತೆ ಹೈಕೋರ್ಟ್ ಬಿಬಿಎಂಪಿಗೆ ನಿರ್ದೇಶನ ನೀಡಿತ್ತು. ಅದರಂತೆ ಎಲ್ಲ ಬೀದಿ ಬದಿ ವ್ಯಾಪಾರಿಗಳನ್ನು ತೆರವು ಮಾಡಿಸಲಾಯಿತು ಎಂದರು.
ಕೆ.ಆರ್.ಮಾರುಕಟ್ಟೆ ನಿರ್ವಹಣೆ ಮಾಡುವ ಎಲ್ಲ ಅಧಿಕಾರಿಗಳು ವಾರಕ್ಕೊಮ್ಮೆ ಸಭೆ ನಡೆಸಬೇಕು. ಸಭೆಯ ಮಾಹಿತಿಯನ್ನು ಮಹಾಪೌರರ ಕಚೇರಿಗೆ ತಿಳಿಸಬೇಕು. ಸಭೆ ನಡೆಸದಿದ್ದಲ್ಲಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.